ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೇ ಸರ್ಕಾರ, ನನ್ನ ಮಾತು ಮೀರುವಂತಿಲ್ಲ’

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಡಾ.ಕೆ.ಅನ್ನದಾನಿ ತಾಕೀತು
Last Updated 25 ಜನವರಿ 2020, 11:33 IST
ಅಕ್ಷರ ಗಾತ್ರ

ಮಳವಳ್ಳಿ: ‘ಸರ್ಕಾರ ಯಾವುದೇ ಆಗಿರಬಹುದು, ಮಳವಳ್ಳಿ ಕ್ಷೇತ್ರದಲ್ಲಿ ನನ್ನ ನಿರ್ಣಯವೇ ಅಂತಿಮ. ಅಧಿಕಾರಿಗಳು ತನ್ನ ಗಮನಕ್ಕೆ ತಾರದೇ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತಿಲ್ಲ. ನನ್ನ ಅನುಮತಿ ಇಲ್ಲದೆ ಒಂದು ಪತ್ರವೂ ಮುಂದೆ ಹೋಗಬಾರದು.’

ಅಧಿಕಾರಿಗಳಿಗೆ ಶಾಸಕ ಡಾ.ಕೆ.ಅನ್ನದಾನಿ ನೀಡಿದ ಎಚ್ಚರಿಕೆ ಇದು.

ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶುಕ್ರವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳ ವಿರುದ್ಧ ಗರಂ ಆದರು.

‘ತಾಲ್ಲೂಕಿಗೆ ನಾನೇ ಸರ್ಕಾರ. ನನ್ನ ಗಮನಕ್ಕೆ ತಾರದೇ ಸರ್ಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡುವಂತಿಲ್ಲ. ನನ್ನ ಸೂಚನೆಯನ್ನು ಮೀರಿ ನಡೆದುಕೊಂಡರೆ ಶಿಷ್ಟಾಚಾರ ಉಲ್ಲಂಘನೆಯಡಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಕೆಲ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮನೋಭಾವ ಹೊಂದಿದ್ದಾರೆ. ಕೆಲಸ ಮಾಡಲು ಇಷ್ಟ ಇಲ್ಲದವರು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಬಹುದು. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುವುದರ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುವ ಬಗ್ಗೆ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ತಾಕೀತು ಮಾಡಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ತಾಲ್ಲೂಕಿಗೆ ಬಹಳ ಪ್ರಮುಖವಾಗಿದೆ. ಶೂನ್ಯ ಬಂಡವಾಳ ಯೋಜನೆಯ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

ಮೀನುಗಾರಿಕೆಯನ್ನು ನಂಬಿ ಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಕೆರೆಗಳಲ್ಲಿ ಮೀನು ಸಾಕಣೆ ಮಾಡಲು ಸ್ಥಳೀಯ ಮೀನು ವ್ಯಾಪಾರಿಗಳಿಗೆ ಅವಕಾಶ ನೀಡಬೇಕು. ಈಗಾಗಲೇ ತಾಲ್ಲೂಕಿನಲ್ಲಿ ಎಷ್ಟು ಕೆರೆಗಳಲ್ಲಿ ಮೀನು ಸಾಕಣೆ ಮಾಡಲಾಗುತ್ತಿದೆ, ಯಾರಿಗೆ ಕೊಟ್ಟಿದ್ದೀರಿ ಎಂಬುವುದರ ಬಗ್ಗೆ ಸಮಗ್ರವಾಗಿ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಕೆರೆಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರ ಉಳಿವಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಗುಂಡುತೋಪು ಮತ್ತು ನೆಡುತೋಪುಗಳಲ್ಲಿ ಹೆಚ್ಚಾಗಿ ಗಿಡಗಳನ್ನು ಬೆಳೆಸಬೇಕು. ರೈತರಿಗೆ, ಅಗತ್ಯ ಇರುವವರಿಗೆ ಸಸಿಗಳನ್ನು ವಿತರಿಸಬೇಕೆಂದು ಸೂಚನೆ ನೀಡಿದರು.

ತಾಲ್ಲೂಕಿನ ಮಾರೇಗೌಡನದೊಡ್ಡಿ ಮತ್ತು ವಡ್ಡರಹಳ್ಳಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರೆವೇರಿಸಿ 3 ತಿಂಗಳಾದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಒಂದು ವಾರದೊಳಗೆ ಆರಂಭಿಸದಿದ್ದರೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿ.ಪಂ ಸದಸ್ಯರಾದ ಸುಜಾತಾ ಕೆ.ಎಂ.ಪುಟ್ಟು, ಹನುಮಂತು, ಚಂದ್ರಕುಮಾರ್, ತಹಶೀಲ್ದಾರ್ ಚಂದ್ರಮೌಳಿ, ತಾಲ್ಲೂಕು ಪಂಚಾಯಿತಿ ಇಒ ಸತೀಶ್ ಇದ್ದರು.

ಭತ್ತ ಖರೀದಿಸಲು ಸೂಚನೆ

‘ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಸಮೃದ್ಧಿಯಾಗಿ ಭತ್ತದ ಫಸಲು ಬಂದಿದೆ. ಸರ್ಕಾರದ ವತಿಯಿಂದ ಆರಂಭಿಸಿರುವ ಭತ್ತ ಖರೀದಿ ಕೇಂದ್ರಗಳಲ್ಲಿ ತ್ವರಿತವಾಗಿ ಭತ್ತವನ್ನು ಖರೀದಿಸಬೇಕು. ಈಗಾಗಲೇ ಶೇ 70ರಷ್ಟು ಭತ್ತವನ್ನು ದಲ್ಲಾಳಿಗಳು ಕಡಿಮೆ ದರದಲ್ಲಿ ಖರೀದಿ ಮಾಡುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಇರುವ ಸಮಸ್ಯೆಯನ್ನು ನಿವಾರಿಸಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಜೊತೆಗೆ ಜೋಳ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಪತ್ರ ಬರೆಯಬೇಕು. ಈ ಬಗ್ಗೆ ನಾನೂ ಶಿಫಾರಸು ಮಾಡುತ್ತೇನೆ’ ಎಂದು ಅನ್ನದಾನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT