ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ನೀಡುವ 3 ದಿನಗಳ ಹಿಂದೆ ಮನೆ ಖಾಲಿ ಮಾಡಿದ್ದ ಶಾಸಕ ಕೆ.ಸಿ.ನಾರಾಯಣಗೌಡ?

ಸ್ಥಳೀಯ ಜೆಡಿಎಸ್‌ ಮುಖಂಡರಲ್ಲಿ ಹತಾಶೆಯ ಭಾವ
Last Updated 7 ಜುಲೈ 2019, 3:03 IST
ಅಕ್ಷರ ಗಾತ್ರ

ಮಂಡ್ಯ: ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ರಾಜೀನಾಮೆ ಸಲ್ಲಿಸುವುದಕ್ಕೆ ಮೂರು ದಿನಗಳ ಮೊದಲೇ ತಮ್ಮ ಮನೆಯಲ್ಲಿದ್ದ ವಸ್ತುಗಳನ್ನು ಲಾರಿಯಲ್ಲಿ ಮುಂಬೈಗೆ ಸಾಗಿಸಿದ್ದರು ಎಂಬ ಸುದ್ದಿ ಕುತೂಹಲಕ್ಕೆ ಕಾರಣವಾಗಿದೆ.

‘ಜೆಡಿಎಸ್‌ ನನ್ನ ಮಾತೃಪಕ್ಷ, ವರಿಷ್ಠ ಎಚ್‌.ಡಿ.ದೇವೇಗೌಡರು ನನ್ನ ತಂದೆ ಸಮಾನ’ ಎಂಬ ಉದ್ಘೋಷಣೆ ಮೊಳಗಿಸುತ್ತಿದ್ದ ನಾರಾಯಣಗೌಡರು ದಿಢೀರ್‌ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹತಾಶೆ ತಂದಿದೆ. ಕ್ಷೇತ್ರದ ಹೊರಗೆ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳಿದ್ದವು. ಆದರೆ, ಅವರು ಯಾವುದೇ ಕಾರಣಕ್ಕೂ ರಾಜಕೀಯ ಜನ್ಮಕೊಟ್ಟ ಪಕ್ಷ ತೊರೆಯುವುದಿಲ್ಲ ಎಂದೇ ಸ್ಥಳೀಯ ಕಾರ್ಯಕರ್ತರು ಎಣಿಸಿದ್ದರು. ಆದರೆ, ಏಕಾಏಕಿ ರಾಜೀನಾಮೆ ನೀಡಿರುವುದು ಕಾರ್ಯ ಕರ್ತರಿಗೆ ನುಂಗಲಾರದ ತುತ್ತಾಗಿದೆ.

ಜುಲೈ 3ರಂದು ಕೆ.ಆರ್‌.ಪೇಟೆಯ ಬಸವೇಶ್ವರ ನಗರದ ಶಾಸಕರ ನಿವಾಸದ (ಕಚೇರಿ) ಎದುರು ಲಾರಿಯೊಂದು ನಿಂತಿದ್ದನ್ನು ಸ್ಥಳೀಯ ಕಾರ್ಯಕರ್ತರು ಗಮನಿಸಿದ್ದಾರೆ. ಸಂಜೆಯ ವೇಳೆಗೆ ಮನೆಯಲ್ಲಿದ್ದ ಸೋಫಾ ಸೆಟ್‌ಗಳು, ಕಚೇರಿ ಉಪಕರಣಗಳನ್ನು ತುಂಬಿಕೊಂಡು ವಾಹನ ಹೊರಟಿದ್ದನ್ನು ಆಪ್ತರು ಗಮನಿಸಿದ್ದಾರೆ.

‘ಹೊಸ ಸೋಫಾ ಖರೀದಿ ಮಾಡಿ ಹಳೆಯದನ್ನು ಬೇರೆಡೆ ಸಾಗಿಸಿರಬಹುದು ಎಂದೇ ನಾನು ತಿಳಿದುಕೊಂಡಿದ್ದೆ. ಟೇಬಲ್‌, ಕುರ್ಚಿಗಳನ್ನು ಸಾಗಿಸುತ್ತಿದ್ದಾಗ ನನಗೆ ಅನುಮಾನ ಮೂಡಿತು. ಆದರೆ, ಶಾಸಕರು ರಾಜೀನಾಮೆ ನೀಡಿ, ಕ್ಷೇತ್ರ ತೊರೆಯಲು ಯೋಜನೆ ರೂಪಿಸಿದ್ದಾರೆ ಎಂಬ ಯೋಚನೆ ಬರಲಿಲ್ಲ. ಅವರು ಹಣಕ್ಕೆ ಮಾರಾಟವಾಗಿದ್ದು, ಮುಂದೆ ಕ್ಷೇತ್ರಕ್ಕೆ ಬಾರದಿರಲು ನಿರ್ಧರಿಸಿರಬಹುದು ಎಂಬ ಶಂಕೆ ಮೂಡಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಜೆಡಿಎಸ್‌ ಕಾರ್ಯಕರ್ತರೊಬ್ಬರು ತಿಳಿಸಿದರು.

ಮುಖ್ಯಮಂತ್ರಿ ವಿರುದ್ಧ ಮುನಿಸು: ಕಳೆದ ಫೆಬ್ರುವರಿಯಲ್ಲಿ ನಡೆದ ವಿಧಾನಸಭಾ ಅಧಿವೇಶನಕ್ಕೆ ನಾರಾಯಣಗೌಡ ಗೈರುಹಾಜರಾಗಿದ್ದರು. ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗುವ ಮೊದಲು ಅವರು ನಾಪತ್ತೆಯಾಗಿದ್ದರು. ಮೊಬೈಲ್‌ ಫೋನ್‌ ಸ್ಥಗಿತಗೊಂಡಿತ್ತು. ನಂತರ ಅವರು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದರು.

ಅಧಿವೇಶನ ಮುಗಿದ ನಂತರವಷ್ಟೇ ಅವರು ಆಸ್ಪತ್ರೆಯಿಂದ ಹೊರಬಂದರು. ಎಚ್‌.ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರಕ್ಕೆ ₹850 ಕೋಟಿ ಅನುದಾನದ ಮಳೆ ಸುರಿಸಿದ್ದರು. ಆದರೆ, ಅದರಲ್ಲಿ ಕೆ.ಆರ್‌.ಪೇಟೆಗೆ ಏನೂ ಸಿಕ್ಕಿರಲಿಲ್ಲ ಎಂಬ ಅಸಮಾಧಾನ ನಾರಾಯಣಗೌಡರಲ್ಲಿ ಇತ್ತು.

ಪಕ್ಕದ ಮೇಲುಕೋಟೆ ಕ್ಷೇತ್ರಕ್ಕೆ ನೂರಾರು ಕೋಟಿ ಹಣ ನೀಡಿ, ಮುಖ್ಯಮಂತ್ರಿ ಅವರೇ ಬಂದು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಇದು ಕೂಡ ಅವರ ಅಸಮಾಧಾನಕ್ಕೆ ಕಾರಣ. ‘ಮುಖ್ಯಮಂತ್ರಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ’ ಎಂದು ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದರು. ಅಲ್ಲದೆ, ‘ಕೆ.ಆರ್.ಪೇಟೆ ಪಟ್ಟಣದಲ್ಲಿ 5 ಸಾವಿರ ಮನೆ ನಿರ್ಮಿಸಲು ಕ್ಷೇತ್ರಕ್ಕೆ ₹55 ಕೋಟಿ ಅನುದಾನ ಬಂದಿದೆ’ ಎಂದು ಜನರಿಗೆ ತಿಳಿಸಿದ್ದರು. ಆದರೆ ಮುಖ್ಯಮಂತ್ರಿ ಆ ಹಣ ಕೊಡುವಲ್ಲಿ ಹಿಂದೇಟು ಹಾಕಿದ್ದರು. ಇದು ಇಬ್ಬರ ನಡುವೆ ಅಂತರ ಸೃಷ್ಟಿಸಿತ್ತು.

ನಾರಾಯಣಗೌಡರ ಮನ ವೊಲಿಸಲು ಹಲವು ಯತ್ನಗಳು ನಡೆದಿದ್ದವು. ಆದರೆ, ಅವರು ಬಿಜೆಪಿ ಗಾಳಕ್ಕೆ ಬಲಿಯಾಗುತ್ತಾರೆ ಎಂಬ ವಿಚಾರವನ್ನು ಯಾರೂ ಗಂಭೀರ ವಾಗಿ ಪರಿಗಣಿಸಿರಲಿಲ್ಲ. ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಅವರು ನಾರಾಯಣಗೌಡ ಅವರನ್ನು ಬಿಜೆಪಿ ಯತ್ತ ಸೆಳೆಯಲು ತಂತ್ರ ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಬಿ ಫಾರಂ ಗೊಂದಲ: ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಎರಡು ಬಿ ಫಾರಂ ವಿತರಣೆಯಿಂದ ಗೊಂದಲ ಉಂಟಾಗಿತ್ತು. ಎಚ್‌.ಡಿ.ದೇವೇಗೌಡರು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಲ್‌.ದೇವರಾಜು ಅವರಿಗೆ ಬಿ ಫಾರಂ ನೀಡಿದ್ದರು. ಕುಮಾರಸ್ವಾಮಿ ಅವರು ನಾರಾಯಣಗೌಡರಿಗೆ ಎರಡು ಬಾರಿ ಬಿ ಫಾರಂ ನೀಡಿದ್ದರು. ಕಡೆಗೆ ನಾರಾಯಣಗೌಡ ಎರಡನೇ ಬಾರಿಗೆ ಸಲ್ಲಿಸಿದ್ದ ನಾಮಪತ್ರ ಊರ್ಜಿತಗೊಂಡಿತ್ತು. ಚುನಾವಣೆಯಲ್ಲಿ ಜೆಡಿಎಸ್‌ನ ಬಹುತೇಕ ಮುಖಂಡರು ನಾರಾಯಣಗೌಡ ವಿರುದ್ಧ ಕೆಲಸ ಮಾಡಿದ್ದರು. ಗೆಲುವು ಕಂಡರೂ ಸ್ಥಳೀಯ ಮುಖಂಡರ ವಿರುದ್ಧ ಅಸಮಾಧಾನ ಇದ್ದೇ ಇತ್ತು.

ರೇವಣ್ಣ ಹಸ್ತಕ್ಷೇಪದಿಂದ ಬೇಸತ್ತಿದ್ದರು

ಕೆ.ಆರ್‌.ಪೇಟೆ ತಾಲ್ಲೂಕು ಆಡಳಿತದಲ್ಲಿ ಪದೇ ಪದೇ ಹಸ್ತಕ್ಷೇಪ ಮಾಡುತ್ತಿದ್ದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ನಡೆಯಿಂದ ಶಾಸಕ ಕೆ.ಸಿ.ನಾರಾಯಣಗೌಡ ಬೇಸತ್ತಿದ್ದರು. ಆ ಕಾರಣಕ್ಕಾಗಿಯೇ ಅವರು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಾರಾಯಣಗೌಡರ ವಿರೋಧದ ನಡುವೆಯೂ ಗ್ರಾಮಾಂತರ ಪೊಲೀಸ್‌ ಠಾಣೆ ಸಿಪಿಐ, ಕಿಕ್ಕೇರಿ ಠಾಣೆ ಪಿಎಸ್‌ಐ ವರ್ಗಾವಣೆ ಮಾಡಲಾಗಿತ್ತು. ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೆ ಆರು ತಿಂಗಳಿಂದ ಒತ್ತಾಯಿಸುತ್ತಿದ್ದರೂ ವರ್ಗಾವಣೆ ಮಾಡಿರಲಿಲ್ಲ. ವಿವಿಧ ಇಲಾಖೆಗಳ ಮುಖ್ಯಸ್ಥರ ಹುದ್ದೆಗಳು ಖಾಲಿ ಇದ್ದರೂ ನೇಮಕವಾಗಿರಲಿಲ್ಲ. ಕಾಮಗಾರಿಯ ಕಡತಗಳಿಗೆ ಮುಖ್ಯಮಂತ್ರಿ ಸಹಿ ಹಾಕಿದರೂ ಅದನ್ನು ರೇವಣ್ಣ ತಡೆಯುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನಾರಾಯಣಗೌಡ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ನಿಖಿಲ್‌ ವಿರುದ್ಧ ನಾರಾಯಣಗೌಡ?

ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮುಖ್ಯಮಂತ್ರಿ ಅವರ ಪುತ್ರ ನಿಖಿಲ್‌ ಜೆಡಿಎಸ್‌ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿ ಹರಡಿದೆ. ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧೆ ಮಾಡಿದರೆ ನಿಖಿಲ್‌–ನಾರಾಯಣಗೌಡರ ನಡುವೆ ಹಣಾಹಣಿ ಏರ್ಪಡಲಿದೆ ಎನ್ನಲಾಗುತ್ತಿದೆ. ಆದರೆ, ನಾರಾಯಣಗೌಡರು ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವರು ಮುಂಬೈ ಹೋಟೆಲ್‌ ಉದ್ಯಮದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT