ಸಂಭ್ರಮದ ಕಡೇ ಶ್ರಾವಣ ಶನಿವಾರದ ಪೂಜೆ

7
ಸಾವಿರಾರು ಭಕ್ತರು ಭಾಗಿ, ವಿವಿಧೆಡೆ ಅನ್ನ ಸಂತರ್ಪಣೆ, ವೈಭವದ ಆಚರಣೆ

ಸಂಭ್ರಮದ ಕಡೇ ಶ್ರಾವಣ ಶನಿವಾರದ ಪೂಜೆ

Published:
Updated:
Deccan Herald

ಮಂಡ್ಯ: ಕಡೇ ಶ್ರಾವಣ ಶನಿವಾರದ ಅಂಗವಾಗಿ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಸಂಭ್ರಮದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಳೆದ ಒಂದು ತಿಂಗಳಿಂದ ವ್ರತಾಚರಣೆ ಮಾಡುತ್ತಿದ್ದ ಮಹಿಳೆಯರು ಕೊನೆಯ ಶನಿವಾರದ ಪೂಜೆ ನೆರವೇರಿಸಿ ದೇವರ ಆಶೀರ್ವಾದ ಬೇಡಿದರು.

ಮೇಲುಕೋಟೆಯ ಚೆಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಬದೇವಿ, ಕೆ.ಆರ್.ಪೇಟೆ ತಾಲ್ಲೂಕು ಹೇಮಗಿರಿಯ ಕಲ್ಯಾಣವೆಂಕಟರಮಣನ ಸನ್ನಿಧಿ, ಮಳವಳ್ಳಿಯ ನರಸಿಂಹಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ನಸುಕಿನಿಂದಲೂ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪ್ರಾಕಾರೋತ್ಸವ, ಕುಂಕುಮಾರ್ಚನೆ, ಮಹಾಮಂಗಳಾರತಿ ಮುಂತಾದ ಕಾರ್ಯಕ್ರಮಗಳು ನಡೆದವು. ಹಲವು ದೇವಾಲಯಗಳಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜನೆ ಮಾಡಲಾಗಿತ್ತು.

ನಗರದ ಹೊರವಲಯ ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಸಾತನೂರು ಬೆಟ್ಟದ ಮೇಲೆ ನೆಲೆಸಿರುವ ನರಸಿಂಹಸ್ವಾಮಿ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತರು ಬೆಟ್ಟ ಹತ್ತಿ ದೇವರ ದರ್ಶನ ಪಡೆಯುತ್ತಿದ್ದರು. ಮೆಟ್ಟಿಲುಗಳ ಉದ್ದಕ್ಕೂ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯದ ಆವರಣದಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು. ಹೂವು, ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳು ಅಪಾರ ಸಂಖ್ಯೆಯಲ್ಲಿ ಅಂಗಡಿ ಹಾಕಿದ್ದರು.

ಉತ್ಸವ ಮೂರ್ತಿಯ ಮೆರವಣಿಗೆ
ನಗರದ ಹನಿಯಂಬಾಡಿ ರಸ್ತೆಯಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೂ ವೈಭವದ ಪೂಜಾ ಕೈಂಕರ್ಯಗಳು ಜರುಗಿದವು. ಲಕ್ಷ್ಮಿವೆಂಕಟೇಶ್ವರನಿಗೆ ಮಾಡಿದ್ದ ಹೂವಿನ ಅಲಂಕಾರ ಭಕ್ತರ ಗಮನ ಸೆಳೆಯಿತು. ಅರ್ಚಕರು ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ನಗರದ ಪೊಲೀಸ್‌ ಕಾಲೊನಿಯಲ್ಲಿರುವ ಚಾಮುಂಡೇಶ್ವರಿ ದೇವಾಲಯ, ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಆಂಜನೇಯಸ್ವಾಮಿ ದೇವಾಲಯ, ಕಾಳಿಕಾಂಬ ದೇವಾಲಯ, ಕಲ್ಲಹಳ್ಳಿಯ ಶ್ರೀಕಂಠೇಶ್ವರ ದೇವಾಲಯ, ಆನೆಕೆರೆ ಬೀದಿಯ ಈಶ್ವರ ದೇವಾಲಯ, ಲಕ್ಷ್ಮಿಜನಾರ್ಧನ ದೇವಾಲಯ, ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !