ಭಾರತ ಬಂದ್‌ಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

7
ರಸ್ತೆಗಿಳಿಯದ ಸಾರಿಗೆ ಸಂಸ್ಥೆ ಬಸ್‌ಗಳು, ಆಟೊ ಸಂಚಾರಕ್ಕೆ ಅಡ್ಡಿ ಇಲ್ಲ

ಭಾರತ ಬಂದ್‌ಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ

Published:
Updated:
Deccan Herald

ಮಂಡ್ಯ: ಪೆಟ್ರೋಲ್‌, ಡೀಸೆಲ್‌ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಸಾರಿಗೆ ಬಸ್‌ ನಿಲ್ದಾಣ ಬಿಕೊ ಎನ್ನುತ್ತಿತ್ತು. ಇದೇ ಅವಕಾಶ ಬಳಸಿಕೊಂಡ ಸಿಬ್ಬಂದಿ ಬಸ್‌ ನಿಲ್ದಾಣವನ್ನು ಸ್ವಚ್ಛಗೊಳಿಸಿದರು. ಬಂದ್‌ ವಿಷಯ ತಿಳಿಯದ ಪ್ರಯಾಣಿಕರು ಪರದಾಡಬೇಕಾಯಿತು. ಆದರೆ ರೈಲು ಸಂಚಾರ ಎಂದಿನಂತೆ ಇದ್ದ ಕಾರಣ ಪ್ರಯಾಣಿಕರಿಗೆ ತೊಂದರೆ ಆಗಲಿಲ್ಲ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್‌ಗಳು ಓಡಾಡಲಿಲ್ಲ. ಖಾಸಗಿ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿ, ಆತಂಕ ಇರಲಿಲ್ಲ. ಟೆಂಪೊ, ಆಟೊ, ಖಾಸಗಿ ಬಸ್‌ಗಳು ಪ್ರಯಾಣಿಕರಿಗೆ ಸೇವೆ ನೀಡಿದವು.

ಭಾರತ ಬಂದ್‌ಗೆ ಆಟೊ ಮಾಲೀಕರು ಹಾಗೂ ಚಾಲಕರು ಯಾವುದೇ ಬೆಂಬಲ ವ್ಯಕ್ತಪಡಿಸಲಿಲ್ಲ. ಹೀಗಾಗಿ ಆಟೊ ಸಂಚಾರ ಸಹಜವಾಗಿತ್ತು. ಕೆಲ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದ್ದರು. ಕೆಲವೆಡೆ ಬಂದ್‌ ನಡುವೆಯೂ ವ್ಯಾಪಾರಿಗಳು ಅಂಗಡಿ ಬಾಗಿಲು ತೆರೆದಿದ್ದರು. ಕಾಂಗ್ರೆಸ್‌ ಕಾರ್ಯಕರ್ತರು ಅಂಗಡಿಗಳ ಬಾಗಿಲು ಮುಚ್ಚಿಸಿದರು. ವಿವಿ ರಸ್ತೆ, ವಿನೋಬಾ ರಸ್ತೆ, ಆರ್‌.ಪಿ.ರಸ್ತೆ, ನೂರು ಅಡಿ ರಸ್ತೆಯಲ್ಲಿ ಕೆಲವು ಅಂಗಡಿಗಳು ಎಂದಿನಂತೆ ತೆರೆದಿದ್ದವು.

ತರಕಾರಿ ಮಾರುಕಟ್ಟೆಗೆ ತಟ್ಟದ ಬಿಸಿ:  ನಗರದ ತರಕಾರಿ ಮಾರುಕಟ್ಟೆಗೆ ಬಂದ್‌ ಬಿಸಿ ತಟ್ಟಲಿಲ್ಲ. ಆದರೆ ಮಾರುಕಟ್ಟೆಯಲ್ಲಿ ವರ್ತಕರ ಸಂಖ್ಯೆ ಕಡಿಮೆ ಇತ್ತು. ಗ್ರಾಮೀಣ ಪ್ರದೇಶದಿಂದ ತರಕಾರಿ ತಂದು ಮಾರಾಟ ಮಾಡುವವರಿಗೆ ಯಾವುದೇ ತೊಂದರೆ ಉಂಟಾಗಲಿಲ್ಲ. ಗೌರಿ–ಗಣೇಶ ಹಬ್ಬ ಇರುವ ಕಾರಣ ವ್ಯಾಪಾರಿಗಳು ಬಂದ್‌ಗೆ ಬೆಂಬಲ ನೀಡಲಿಲ್ಲ. ಪೇಟೆಬೀದಿಯಲ್ಲಿ ಬೆಳಿಗ್ಗೆ ಬಹುತೇಕ ಅಂಗಡಿಗಳು ತೆರೆದಿದ್ದವು. ಆದರೆ ಕಾಂಗ್ರೆಸ್‌ ಕಾರ್ಯಕರ್ತರು ಮೆರವಣಿಗೆ ಬಂದ ಸಂದರ್ಭದಲ್ಲಿ ಅಂಗಡಿ ಮಾಲೀಕರು ಬಾಗಿಲು ಮುಚ್ಚಿದರು. ನಂತರ ಮತ್ತೆ ಬಾಗಿಲು ತೆರೆದು ವಹಿವಾಟು ಮುಂದುವರಿಸಿದರು.

ವಿವಿಧ ಸಂಭಟನೆಗಳ ಪ್ರತಿಭಟನೆ: ಭಾರತ ಬಂದ್‌ ಬೆಂಬಲಿಸಿ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಸಿಪಿಎಂ ಕಾರ್ಯಕರ್ತರು ಮಹಾವೀರ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆ ಮಾಡುತ್ತಿದೆ. ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಬೆಲೆ ಇಳಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ತೈಲ ಉತ್ಪನ್ನಗಳ ಬೆಲೆ ಏರಿಕೆಯಿಂದ ಬಸ್‌ ಪ‍್ರಯಾಣ ದರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಬಡವರು ಹಾಗು ಮಧ್ಯಮ ವರ್ಗದ ಜನರು ಜೀವನ ಮಾಡುವುದೇ ಕಷ್ಟವಾಗಿದೆ. ಕೂಡಲೇ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ಕುಮಾರಿ, ಮುಖಂಡರಾದ ಎನ್‌.ಸುರೇಂದ್ರ, ನಾರಾಯಣ, ಪುಟ್ಟಮ್ಮ, ವೆಂಕಟಲಕ್ಷ್ಮಿ, ಎಸ್‌.ಗಾಯತ್ರಿ, ಪ್ರಮೀಳಾ ಕುಮಾರಿ ಹಾಜರಿದ್ದರು. ಬಂದ್‌ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ವಿವಿಧೆಡೆ ಬೈಕ್‌ ಜಾಥಾ ನಡೆಸಿದರು. ವಿವಿ ರಸ್ತೆಯಿಂದ ಆರಂಭವಾದ ಜಾಥಾ ಮಹಾವೀರ ಸರ್ಕಲ್‌, ಆರ್‌ಪಿ ರಸ್ತೆ, ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿತು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಡಿ.ಜಯರಾಮು, ಕಾರ್ಯಕರ್ತರಾದ ಸಂತೋಷ್‌, ಪ್ರಕಾಶ್‌, ಪಿ.ಕೆ.ಸೋಮಶೇಖರ್‌, ರಮೇಶ್‌ ಇದ್ದರು.

ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖಂಡರಾದ ನರಸಿಂಹ ಮೂರ್ತಿ, ಸಿದ್ದಯ್ಯ, ರಾಜು, ಮಾಚಳ್ಳಿ ಸುರೇಶ್‌ ಇದ್ದರು. ನೂರಾರು ಪೊಲೀಸರು ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು. ಚಿತ್ರಮಂದಿರಗಳಲ್ಲಿ ಬೆಳಿಗ್ಗೆಯ ಎರಡು ಆಟಗಳ ಪ್ರದರ್ಶನ ರದ್ದು ಮಾಡಲಾಗಿತ್ತು. ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆದಿದ್ದವು.

ಕಾಂಗ್ರೆಸ್‌ನಿಂದ ಪ್ರತ್ಯೇಕ ಪ್ರತಿಭಟನೆ

ಕಾಂಗ್ರೆಸ್‌ ಜಿಲ್ಲಾ ಘಟಕದಲ್ಲಿ ಈಗಲೂ ಬಣ ರಾಜಕಾರಣ ಜೀವಂತವಾಗಿರುವುದು ಬಂದ್‌ ವೇಳೆಯಲ್ಲಿ ಅನಾವರಣಗೊಂಡಿತು. ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ ನೇತೃತ್ವದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆದವು. ಚಲುವರಾಯಸ್ವಾಮಿ ಅವರು ಕಾಂಗ್ರೆಸ್‌ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟು ಸಂಜಯ ವೃತ್ತ ತಲುಪಿದರು. ಜೊತೆಯಲ್ಲಿ ಮತ್ತೊಬ್ಬ ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮುಖಂಡ ಗಣಿಗ ಪಿ ರವಿಕುಮಾರ್‌ಗೌಡ ಇದ್ದರು. ಸಂಜಯ ವೃತ್ತದ ಇನ್ನೊಂದು ಬದಿಯಲ್ಲಿ ಎಂ.ಎಸ್‌.ಆತ್ಮಾನಂದ ಹಾಗೂ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದರು. ಕೆಲ ಕಾಲ ಎರಡೂ ಗುಂಪುಗಳು ಪ್ರತ್ಯೇಕವಾಗಿಯೇ ಇದ್ದವು. ಒಟ್ಟಾಗಿ ಹೋರಾಟ ನಡೆಸುವಂತೆ ಯಾರೂ ಪರಸ್ಪರ ಆಹ್ವಾನ ನೀಡಲಿಲ್ಲ. ಹೀಗಾಗಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗವಾಯಿತು.

ಸೈಕಲ್‌ ಹರಾಜು ಮಾಡಿದರು!

ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ನಗರದ ವಿವಿ ರಸ್ತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟಿಸಿದರು. ಜನರು ಬೈಕ್‌, ಸ್ಕೂಟರ್‌ಗಳನ್ನು ತ್ಯಜಿಸಿ ಸೈಕಲ್‌ ತುಳಿಯಬೇಕು ಎಂಬ ಸಂದೇಶದಿಂದ ಸೈಕಲ್‌ಗಳನ್ನು ಹರಾಜು ಹಾಕಿದರು. ದಿನೇ ದಿನೇ ಪೆಟ್ರೋಲ್‌ ಗಗನಮುಖಿಯಾಗುತ್ತಿದ್ದು ಬಡವರು ಬೈಕ್‌ ಓಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಬಡ ಜನರಿಗೆ ಸೈಕಲ್‌ ಗತಿಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ಬೆಲೆ ಇಳಿಸದಿದ್ದರೆ ರಾಜ್ಯದಾದ್ಯಂತ ಇದೇ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಮಾನವೀಯತೆ ಮೆರೆದ ಪೊಲೀಸರು

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವೃದ್ಧರೊಬ್ಬರು ಅಸ್ವಸ್ಥರಾಗಿ ಮಲಗಿದ್ದರು. ರಸ್ತೆಯಲ್ಲೇ ಬಿದ್ದು ಗಾಯಗೊಂಡಿದ್ದರು. ತಲೆಯಲ್ಲಿ ರಕ್ತ ಸೋರುತ್ತಿತ್ತು. ಭದ್ರತೆಯಲ್ಲಿದ್ದ ಪೊಲೀಸರು ಇದನ್ನು ಗಮನಿಸಿ ವೃದ್ಧ ವ್ಯಕ್ತಿಯನ್ನು ಮೇಲೆತ್ತಿ ನೀರು ಕೊಟ್ಟು ಉಪಚಾರ ಮಾಡಿದರು. ನಂತರ ಆಟೊ ಕರೆದು ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಿದರು. ಆ ವ್ಯಕ್ತಿಯ ಕೈಗೆ ಒಂದಷ್ಟು ಹಣವನ್ನೂ ಕೊಟ್ಟು ಚಿಕಿತ್ಸೆ ಪಡೆಯುವಂತೆ ತಿಳಿಸಿ ಮಾನವೀಯತೆ ಮೆರೆದರು.

ಪ್ರತಿಭಟನೆಗೆ ಬಾರದ ಜೆಡಿಎಸ್‌

ಭಾರತ ಬಂದ್‌ಗೆ ಜೆಡಿಎಸ್‌ ಪಕ್ಷ ಬೆಂಬಲ ಘೋಷಣೆ ಮಾಡಿತ್ತು. ಆದರೆ ನಗರದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಯಾವೊಬ್ಬ ಜೆಡಿಎಸ್ ಮುಖಂಡರೂ ಕಾಣಿಸಿಕೊಳ್ಳಲಿಲ್ಲ. ‘ನಾವು ಬಂದ್‌ಗೆ ಬೆಂಬಲ ಘೋಷಣೆ ಮಾಡಿದ್ದೇವೆ. ಅಂಗಡಿ ಮುಂಗಟ್ಟು ತೆರೆಯದೆ ಬಂದ್‌ ಯಶಸ್ವಿಗೊಳಿಸಬೇಕು ಎಂದು ಜನರಲ್ಲಿ ಮನವಿ ಮಾಡಿದ್ದೇವೆ. ಆದರೆ ನಾವು ಪ್ರತಿಭಟನೆ ನಡೆಸಲಿಲ್ಲ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !