ಶುಕ್ರವಾರ, ಸೆಪ್ಟೆಂಬರ್ 20, 2019
21 °C
ಚುನಾವಣೆ ಇಂದು; ಮತದಾರರ ಸೆಳೆಯಲು ರಾತ್ರೋರಾತ್ರಿ ಕಾರ್ಯಾಚರಣೆ, ಸಂಜೆ ಫಲಿತಾಂಶ

ಮನ್‌ಮುಲ್‌: ಪ್ರತಿ ಮತಕ್ಕೆ ಲಕ್ಷ ಲಕ್ಷ ಆಮಿಷ?

Published:
Updated:
Prajavani

ಮಂಡ್ಯ: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್‌ಮುಲ್‌) ಆಡಳಿತ ಮಂಡಳಿ ಚುನಾವಣೆ ಭಾನುವಾರ ನಡೆಯಲಿದ್ದು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಬಯಸಿದ ಮುಖಂಡರು ಪ್ರತಿ ಮತಕ್ಕೆ ₹ 1 ಲಕ್ಷ ಆಮಿಷ ಒಡ್ಡುತ್ತಿದ್ದಾರೆ ಎಂಬ ವಿಚಾರ ಕುತೂಹಲ ಮೂಡಿಸಿದೆ.

ಕಣದಲ್ಲಿ 25 ಅಭ್ಯರ್ಥಿಗಳಿದ್ದು ಜಿಲ್ಲೆಯಾದ್ಯಂತ ಇರುವ ಸಹಕಾರ ಸಂಘ ಆಯ್ಕೆ ಮಾಡಿರುವ ಪ್ರತಿನಿಧಿಗಳು (ಡೆಲಿಗೇಟ್ಸ್‌) ಮತ ಚಲಾವಣೆ ಮಾಡಲಿದ್ದಾರೆ. ಏಳು ತಾಲ್ಲೂಕಿನಿಂದ 1,087 ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ. ವಿವಿಧ ಪಕ್ಷಗಳ ರಾಜಕೀಯ ಮುಖಂಡರು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು ಕಳೆದ ಮೂರು ದಿನಗಳಿಂದ ಮತದಾರರಿಗೆ ವಿವಿಧ ಆಮಿಷ ಒಡ್ಡುತ್ತಿದ್ದಾರೆ. ಕಡೆ ಗಳಿಗೆಯಲ್ಲಿ ಪ್ರತಿಯೊಬ್ಬರಿಗೂ ₹ 1 ಲಕ್ಷ ಹಣ ನೀಡಲು ಸಿದ್ಧರಾಗಿದ್ದಾರೆ. ಒಬ್ಬ ಒಂದು ಲಕ್ಷ ಕೊಟ್ಟರೆ ಮತ್ತೊಬ್ಬರು ಅದಕ್ಕೆ ಶೇ 10ರಷ್ಟು ಹೆಚ್ಚಿಗೆ ಕೊಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮದ್ದೂರು ತಾಲ್ಲೂಕಿನ ಸ್ಪರ್ಧಿಗಳು ಅತೀ ಹೆಚ್ಚು ಆಮಿಷ ಒಡ್ಡುತ್ತಿದ್ದಾರೆ. ಪ್ರತಿ ಮತಕ್ಕೆ ಒಂದು ಲಕ್ಷ ಹಣದ ಜೊತೆ ಇನ್ನೂ ಅನೇಕ ಉಡುಗೊರೆಗಳನ್ನು ಕೊಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲವಾಗಿದ್ದಾರೆ’ ಎಂದು ಸಹಕಾರ ಸಂಘದ ಸದಸ್ಯೆಯೊಬ್ಬರು ತಿಳಿಸಿದರು.

ಮನ್‌ಮುಲ್‌ನಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವನ್ನು ಪರಿಗಣಿಸಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಅಧ್ಯಕ್ಷರು, ನಿರ್ದೇಶಕರನ್ನು ವಜಾಗೊಳಿಸಿದ್ದರು. ವಜಾಗೊಂಡ ನಿರ್ದೇಶಕರೇ ಮತ್ತೊಮ್ಮೆ ಸ್ಪರ್ಧೆ ಮಾಡುತ್ತಿರುವುದಕ್ಕೆ ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರು ಸ್ಪರ್ಧೆಯಿಂದ ಹೊರನಡೆಯಬೇಕು ಎಂದು ಒತ್ತಾಯಿಸಿ ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಅವರ ಸ್ಪರ್ಧೆಗೆ ಯಾವುದೇ ಅಡ್ಡಿ ಆಗಿಲ್ಲ. ಭಾನುವಾರ ಚುನಾವಣೆ ಎದುರಿಸುತ್ತಿದ್ದಾರೆ.

ಒಟ್ಟು ಮತದಾರರಲ್ಲಿ ನಾಗಮಂಗಲ 229 ಮತದಾರರು, ಕೆ.ಆರ್‌.ಪೇಟೆ 201, ಮಂಡ್ಯ 197, ಮದ್ದೂರು 165, ಪಾಂಡವಪುರ 123, ಮಳವಳ್ಳಿ 116, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ 56 ಮತದಾರರು ಇದ್ದಾರೆ.

ಏಳು ತಾಲ್ಲೂಕುಗಳಿಂದ 12 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಪ್ರತಿ ತಾಲ್ಲೂಕು ಕೇಂದ್ರದಲ್ಲಿ ತಲಾ ಒಂದು ಮತಗಟ್ಟೆ ತೆರೆಯಲಾಗಿದೆ. ಮಂಡ್ಯದಲ್ಲಿ ಲಕ್ಷ್ಮಿ ಜನಾರ್ಧನ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಎಣಿಕೆ ನಡೆಯಲಿದ್ದು ರಾತ್ರಿಯ ವೇಳೆಗೆ ಫಲಿತಾಂಶ ಹೊರಬೀಳಲಿದೆ.

 ‘ಅಭ್ಯರ್ಥಿಗಳು ಹಣದ ಆಮಿಷ ಒಡ್ಡುತ್ತಿರುವ ಕುರಿತು ಯಾವುದೇ ದೂರು ಬಂದಿಲ್ಲ. ಸಹಕಾರಿ ಸಂಘಗಳ ಕಾಯ್ದೆಯ ಪ್ರಕಾರ ಈ ಚುನಾವಣೆಯಲ್ಲೂ ನೀತಿ ಸಂಹಿತೆ ಇದೆ. ಯಾವುದೇ ಅಕ್ರಮ ಚಟುವಟಿಕೆ ಕಂಡು ಬಂದರೆ ಕ್ರಮ ಜರುಗಿಸಲಾಗುವುದು. ಯಾರೇ ದೂರು ನೀಡಿದರೂ ಕ್ರಮ ಕೈಗೊಳ್ಳಲಾಗುವುದು. ಅಭ್ಯರ್ಥಿಗಳ ಮೇಲೆ ನಿಗಾ ಇಡುವಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ’ ಎಂದು ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ತಿಳಿಸಿದರು.

Post Comments (+)