ಬುಧವಾರ, ಅಕ್ಟೋಬರ್ 23, 2019
21 °C
ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಟನೆ ಕಾರ್ಯಕರ್ತರಿಂದ ಪ್ರತಿಭಟನೆ

ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ

Published:
Updated:
Prajavani

ಮಂಡ್ಯ: ಎಲ್‌ಐಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ವಿವಿಧ ಸಂಘಟನೆ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

355 ಹುದ್ದೆಗಳ ನೇಮಕಾತಿಗೆ ಎಲ್‌ಐಸಿ ಅರ್ಜಿ ಆಹ್ವಾನಿಸಿದ್ದು, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬೇಕಿದೆ. ಇದರಿಂದ ಕನ್ನಡಿಗರ ಪಾಲಿನ ಹುದ್ದೆಗಳು ಇತರ ರಾಜ್ಯದ ಅಭ್ಯರ್ಥಿಗಳ ಪಾಲಾಗುವ ಅಪಾಯ ನಿರ್ಮಾಣವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಲಿದ್ದು ಅನ್ಯ ರಾಜ್ಯದವರಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.

ಬ್ಯಾಂಕಿಂಗ್‌, ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ನೇಮಕಾತಿ ಮಾಡುವ ಹುದ್ದೆಗಳ ಪರೀಕ್ಷೆಗಳನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕಾಗಿದೆ. ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡದೆ ಹಿಂದಿ ಭಾಷೆಯನ್ನು ಹೇರುವ ಹುನ್ನಾರವಾಗಿದೆ. ಕೂಡಲೇ ಇದನ್ನು ರದ್ದುಪಡಿಸಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಭಾರತ ಸಂವಿಧಾನದಲ್ಲಿ 22 ಭಾಷೆಗಳು ಸಮಾನ ಸ್ಥಾನಮಾನ ಹೊಂದಿವೆ. ಆದರೂ ಅವುಗಳನ್ನು ಕಡೆಗಣಿಸಲಾಗುತ್ತಿದೆ. ಹಿಂದಿ, ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬೇಕು ಎಂಬ ನಿಯಮ ಸಂವಿಧಾನ ಬಾಹಿರವಾಗಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುವ ಸ್ವಾಯತ್ತ ಸಂಸ್ಥೆಗಳಿಗೆ ಆಯಾಯ ರಾಜ್ಯದ ಭಾಷೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷಾ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಲ್ಲಿ ಬಹುತೇಕರು ಹಿಂದಿ, ಇಂಗ್ಲಿಷ್‌ ವಿಚಯಗಳಲ್ಲಿ ಅನುತ್ತೀರ್ಣರಾಗುತ್ತಿದ್ದು, ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಕನ್ನಡ, ಇಂಗ್ಲಿಷ್‌ನಲ್ಲಿ ಪರೀಕ್ಷೆ ನಡೆಸಿದ ಪರಿಣಾಮ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಕನ್ನಡಿಗರನ್ನು ಕಾಣಸಿಗುವುದೇ ಅಪರೂಪವಾಗಿದೆ. ಆ ಹುದ್ದೆಗಳಲ್ಲಿ ಕುಳಿತವರು ಹಿಂದಿ, ಇಂಗ್ಲಿಷ್‌ನಲ್ಲಿ ಸಂವಹನ ಮಾಡುವುದರಿಂದ ಸಾರ್ವಜನಿಕರಿಗೂ ಸಾಕಷ್ಟು ಕಿರಿಕಿರಿ, ಸಮಸ್ಯೆ ಉಂಟಾಗುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಕೂಡಲೇ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟು ನೆರವಾಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಹಿತರಕ್ಷಣಾ ವೇದಿಕೆ ನಾಯಕರಾದ ಅಧ್ಯಕ್ಷ ಸಂಪತ್‌ಕುಮಾರ್‌, ಎಂ.ಬಿ.ನಾಗಣ್ಣಗೌಡ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಡಿ.ಜಯರಾಮ್‌, ಕಾಂಗ್ರೆಸ್‌ ಮುಖಂಡ ಸುಂಡಹಳ್ಳಿ ಮಂಜುನಾಥ್‌, ವಿದ್ಯಾರ್ಥಿಗಳಾದ ದೀಕ್ಷಿತ್‌ಕುಮಾರ್‌, ಎಚ್‌.ಪಿ.ರಕ್ಷಿತಾ, ಎಂ.ಸಿ.ದೀಪಿಕಾ, ಲೇಖನಾ ಇದ್ದರು.

***

ಎಲ್‌ಐಸಿ ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳೊಂದಿಗೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು

– ಎಂ.ಬಿ.ನಾಗಣ್ಣಗೌಡ, ಹೋರಾಟಗಾರ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)