ಮಂಗಳವಾರ, ಸೆಪ್ಟೆಂಬರ್ 28, 2021
22 °C
ಕಾರ್ಖಾನೆ ಆರಂಭ, ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ರಕ್ಷಣೆಗೆ ಕ್ರಮ; ಬೊಮ್ಮಾಯಿ ಭರವಸೆ

ಮೈಷುಗರ್‌; ಸಭೆ ಕರೆದು ಚರ್ಚೆ– ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ಆರಂಭಿಸುವ ಬಗ್ಗೆ ಶೀಘ್ರ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ಸಭೆ ನಿಗದಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಮೈಸೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಮದ್ದೂರು ತಾಲ್ಲೂಕು, ಗೆಜ್ಜಲಗೆರೆ ಗ್ರಾಮದಲ್ಲಿ ಸೋಮವಾರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಭೇಟಿಯಾದ ವೇಳೆ ಅವರು ಮಾತನಾಡಿದರು.

‘ಈ ಭಾಗದ ರೈತರ ಹಿತ ಕಾಯಲು ನಮ್ಮ ಸರ್ಕಾರ ಬದ್ಧವಾಗಿದೆ. ಆದಷ್ಟು ಬೇಗ ಕಾರ್ಖಾನೆ ಆರಂಭಿಸುವ ಸಂಬಂಧ ಸಭೆ ನಡೆಸಲಾಗುವುದು. ರೈತರು ಹಾಗೂ ಜನಪ್ರತಿನಿಧಿಗಳು ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಹಿತರಕ್ಷಣಾ ಸಮಿತಿ ನಾಯಕಿ ಸುನಂದಾ ಜಯರಾಂ ಮಾತನಾಡಿ ‘ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಯಬೇಕು ಎಂದು ಒತ್ತಾಯಿಸಿ ರೈತ ಹಿತರಕ್ಷಣಾ ಹೋರಾಟ ನಡೆಸುತ್ತಿದೆ. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ₹ 100 ಕೋಟಿ ಹಣ ಮೀಸಲಿಟ್ಟಿದ್ದರು. ಬಿಜೆಪಿ ಸರ್ಕಾರ ಬಂದ ನಂತರ ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ನೀಡುವ ನಿರ್ಧಾರ ಕೈಗೊಂಡಿತ್ತು. ಖಾಸಗಿ ಗುತ್ತಿಗೆ ವಿಚಾರ ಕೈಬಿಟ್ಟು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಬೇಕು’ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಮನವಿ ಪತ್ರ ನೀಡಲಾಯಿತು. ಗೆಜ್ಜಲಗೆರೆಯಲ್ಲಿ ನಡೆದ ಗೋಲಿಬಾರ್‌ ಘಟನೆಯನ್ನು ರೈತರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಬೊಮ್ಮಾಯಿ ಅವರು ಹಿಂದಿನ ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡರು. ಗ್ರಾಮಸ್ಥರಾದ ಜಿ.ಪಿ.ರಮೇಶ್‌, ವೀರಭದ್ರ, ನಾಗಸುಂದರ, ರಾಮಲಿಂಗಯ್ಯ, ಸಿದ್ದೇಗೌಡ, ಎಚ್‌.ಶ್ರೀಧರ ಇದ್ದರು.

ಬಿಜೆಪಿ ಮುಖಂಡರಿಂದ ಅಭಿನಂದನೆ: ನಗರದ ಜೆ.ಸಿ.ವೃತ್ತದಲ್ಲಿ ಬಿಜೆಪಿ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅಭಿನಂದಿಸಿದರು. ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ‘ಅಕ್ರಮ ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಮಾಹಿತಿ ಪಡೆಯಲಾಗುವುದು. ಮೈಷುಗರ್‌ ಕಾರ್ಖಾನೆ ಸೇರಿದಂತೆ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗುವುದು’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜೆ. ವಿಜಯಕುಮಾರ್, ಜಿಲ್ಲಾ ಉಸ್ತುವಾರಿ ಎ. ಮಂಜು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸಿದ್ದರಾಮಯ್ಯ ಇದ್ದರು.

***

ನಗರಸಭಾ ಅಧ್ಯಕ್ಷರಿಗೆ ನಿರಾಸೆ

ಮಹಾವೀರ ವೃತ್ತ, ನಗರಸಭಾ ಕಚೇರಿ ಮುಂದೆ ನಗರಸಭಾ ಅಧ್ಯಕ್ಷ ಎಚ್‌.ಎಸ್‌.ಮಂಜು ಹಾಗೂ ಸದಸ್ಯರು ಮುಖ್ಯಮಂತ್ರಿಗಳನ್ನು ಅಭಿನಂದಿಸಲು ಗಂಟೆಗೂ ಹೆಚ್ಚು ಕಾಲ ಕಾದು ನಿಂತಿದ್ದರು. ಆದರೆ ಕಚೇರಿ ಮುಂದೆ ಮುಖ್ಯಮಂತ್ರಿಗಳ ಕಾರು ನಿಲ್ಲಿಸದೇ ವೇಗವಾಗಿ ತೆರಳಿದ ಕಾರಣ ಅಧ್ಯಕ್ಷರು, ಸದಸ್ಯರು ನಿರಾಶರಾದರು.

‘ಜಿಲ್ಲಾ ಉಸ್ತುವಾರಿ ಸಚಿವರ ಸಹಾಯಕರು ಹಾಗೂ ಅಧಿಕಾರಿಗಳ ಮಾಹಿತಿ ಕೊರತೆ, ಸಮನ್ವಯತೆ ಕೊರತೆಯಿಂದ ನಮಗೆ ಮುಖ್ಯಮಂತ್ರಿಗಳ ಭೇಟಿ ಭಾಗ್ಯ ದೊರೆಯಲಿಲ್ಲ. ನಂತರ ಅಧಿಕಾರಿಗಳು ಕ್ಷಮೆ ಯಾಚಿಸಿದ್ದಾರೆ. ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಅಭಿನಂದಿಸಲಿದ್ದೇವೆ’ ಎಂದು ಎಚ್‌.ಎಸ್‌.ಮಂಜು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು