ಭಾನುವಾರ, ಸೆಪ್ಟೆಂಬರ್ 26, 2021
21 °C
ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭೇಟಿ, ಪರಿಶೀಲನೆ, ಅಧಿಕಾರಿಗಳಿಗೆ ಸೂಚನೆ

ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ; ಅಬ್ದುಲ್ ಅಜೀಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ‘ಜಿಲ್ಲೆಯ ಅಲ್ಪಸಂಖ್ಯಾತರು ಮೂಲಸೌಲಭ್ಯ ಸೇರಿದಂತೆ ನೂರಾರು ಸಮಸ್ಯೆ ಅನುಭವಿಸುತ್ತಿದ್ದಾರೆ. ಎಲ್ಲಾ ಕುಂದುಕೊರತೆಗಳನ್ನು ಆಲಿಸಲಾಗಿದ್ದು ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಭರವಸೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಅಲ್ಪಸಂಖ್ಯಾತರ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ನಡೆದ ಕುಂದುಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಸವಲತ್ತುಗಳಿಂದ ಅಲ್ಪಸಂಖ್ಯಾತ ಸಮುದಾಯ ವಂಚಿತರಾಗಬಾರದು. ಸಮಾಜದ ಕಟ್ಟಕಡೆಯಲ್ಲಿ ವಾಸಿಸುವ ಪ್ರತಿಯೊಬ್ಬ ಅಲ್ಪಸಂಖ್ಯಾತರಿಗೂ ಸೌಲಭ್ಯಗಳು ತಲುಪಬೇಕು. ಫಲಾನುಭವಿಗಳಿಗೆ ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ತಲುಪಿಸುವುದೇ ಆಯೋಗದ ಪ್ರಮುಖ ಉದ್ದೇಶವಾಗಿದೆ’ ಎಂದರು.

‘ಜಿಲ್ಲೆಯ ಅಲ್ಪಸಂಖ್ಯಾತರ ಕಾಲೊನಿಗಳಲ್ಲಿ ನಿವೇಶನದ ಹಕ್ಕುಪತ್ರ, ಒಳಚರಂಡಿ , ರಸ್ತೆ ಗುಂಡಿಗಳು, ವಿದ್ಯುತ್, ಕುಡಿಯುವ ನೀರು, ರುದ್ರಭೂಮಿ, ವಸತಿಗೆ ಸಂಬಂದಿಸಿದ ಸಮಸ್ಯೆಗಳಿವೆ. ಅವುಗಳಿಗೆ ಪರಿಹಾರ ದೊರಕಿಸುವುದಕ್ಕೆ ಯತ್ನಿಸಲಾಗುವುದು. ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಮೂಲ ಸೌಕರ್ಯಗಳಿಗೆ ಸಂಬಂದಿಸಿದಂತೆ ಅನೇಕ ಸಮಸ್ಯೆಗಳಿವೆ. ಅಧಿಕಾರಿಗಳು ಅದರ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚಿಸಿದರು.

‘ಹಕ್ಕು ಪತ್ರಗಳಿಲ್ಲದ ಕಾರಣ ಬ್ಯಾಂಕ್‌ನಿಂದ ಬರುವ ಸಹಾಯಧನ ಸೇರಿ ಇತರ ಯಾವುದೇ ಸೌಲಭ್ಯಗಳು ದೊರೆಯುತಿಲ್ಲ. ಅದಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್‌ ಸಿಬ್ಬಂದಿ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸಂಕಷ್ಟಕ್ಕೆ ಒಳಗಾದ ಅಲ್ಪಸಂಖ್ಯಾತರ ಕುಟುಂಬಕ್ಕೆ ಇಲ್ಲಿವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು’ ಎಂದರು.

ಆಯೋಗದ ಕಾರ್ಯದರ್ಶಿ ಮೊಹಮ್ಮದ್‌ ನಜೀರ್, ತಹಶೀಲ್ದಾರ್‌ ಚಂದ್ರಶೇಖರ ಶಂ.ಗಾಳಿ, ವಲಯ ಅರಣ್ಯಧಿಕಾರಿ ಶಿಲ್ಪಾ ಇದ್ದರು.

ಸೌಹಾರ್ದ ಕಾಪಾಡಿಕೊಳ್ಳಿ: ‘ಅಲ್ಪಸಂಖ್ಯಾತರ ಸಮುದಾಯ ಶಾಂತಿ, ಸೌಹಾರ್ದಕ್ಕೆ ಮಹತ್ವ ನೀಡಬೇಕು. ಇತರ ಧರ್ಮೀಯರೊಂದಿಗೆ ಸಹೋದರತ್ವದಿಂದ ಬಾಳಬೇಕು’ ಎಂದು ಅಬ್ದುಲ್ ಅಜೀಂ ಸಲಹೆ ನೀಡಿದರು.

ಜನರೊಂದಿಗೆ ಒಡಗೂಡಿ ಒಂದೇ ತಾಯಿಯ ಮಕ್ಕಳಂತೆ ಬದುಕಿ ಏಕತೆಯನ್ನು ಕಾಪಾಡಿ ಮತ್ತು ಸಮಸ್ಯೆಗಳು ಕಂಡುಬಂದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಗಮನಕ್ಕೆ ತನ್ನಿ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ರವರು ತಿಳಿಸಿದರು.

ಗುತ್ತಲು ಕಾಲೊನಿಯ ಸಪ್ದರ್‌ಗಂಜ್‌ ಕಾಲೊನಿ ಮಸೀದಿಗೆ ಭೇಟಿ ನೀಡಿ ಅಲ್ಪಸಂಖ್ಯಾತರ ರಕ್ಷಣೆ ಮತ್ತು ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ ನಡೆಸಿದರು.

‘ಆರೋಗ್ಯಯುತ ಜೀವನಕ್ಕೆ ಆದ್ಯತೆ ನೀಡಬೇಕು. ಮಸೀದಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ಮನೆ ಮುಂದೆ ಒಂದು ಮರ ಬೆಳೆಸಬೇಕು. ಮಸೀದಿಗಳಲ್ಲಿ ಶಾಂತಿ, ಸೌಹಾರ್ದ, ಸಮನ್ವಯತೆ ಮತ್ತು ಏಕತೆಯ ನಿಯಮಗಳನ್ನು ಪಾಲಿಸಬೇಕು. ನಿಮ್ಮ ವಾಸಸ್ಥಾನದ ಹಾಗೂ ಮಸೀದಿಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ನಂತರ ನಗರದ ಸೇಂಟ್‌ ಜೋಸೆಫ್ ಚರ್ಚ್ ಗೆ ಭೇಟಿ ನೀಡಿದರು. ಜೈನ ಮಂದಿರದಲ್ಲಿ ಜೈನ ಸಮುದಾಯದ ಮುಖಂಡರುಗಳೊಂದಿಗೆ ಸಮುದಾಯದ ಕುರಿತು ಚರ್ಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು