ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಕಿಸಾನ್‌ ಸಮ್ಮಾನ್‌ ಹಣ: ಅಲೆದಾಟ

ಲಕ್ಷಕ್ಕೂ ಹೆಚ್ಚು ರೈತರ ಕಂತಿಗೆ ತಡೆ, ಕೃಷಿ ಇಲಾಖೆ ಅಧಿಕಾರಿಗಳಲ್ಲೇ ಗೊಂದಲ, ಇಲಾಖೆ ವಿರುದ್ಧ ಆಕ್ರೋಶ
Last Updated 15 ಜನವರಿ 2022, 13:28 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಡಿಸೆಂಬರ್‌ನಲ್ಲಿ ಬರಬೇಕಾಗಿದ್ದ ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ’ಯ ಹಣದ ಕಂತು ಜಿಲ್ಲೆಯ ಲಕ್ಷಾಂತರ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಮರ್ಪಕ ಮಾಹಿತಿ ನೀಡದ ಕಾರಣ ರೈತರು ನಿತ್ಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಾದ್ಯಂತ 2.67 ಲಕ್ಷ ರೈತರು ಪಿ.ಎಂ– ಕಿಸಾನ್‌ ಸಮ್ಮಾನ್‌ ನಿಧಿಯಡಿ ಪ್ರತಿ ವರ್ಷ ₹ 6 ಸಾವಿರ ಹಣ ಪಡೆಯುತ್ತಿದ್ದರು. ಇಲ್ಲಿಯವರೆಗೂ ಪ್ರತಿ 4 ತಿಂಗಳಿಗೆ ಒಮ್ಮೆ ತಲಾ ₹ 2 ಸಾವಿರ ಹಣ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆಯಾಗುತ್ತಿತ್ತು.

ಆದರೆ, ಕಳೆದ ಡಿಸೆಂಬರ್‌ 20ರ ನಂತರ ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿದೆ. ಆದರೆ ಜಿಲ್ಲಾ ಮಟ್ಟದಲ್ಲಿ ಹಣ ಪಾವತಿಯನ್ನು ತಡೆಹಿಡಿಯಲಾಗಿದ್ದು ಮಂಡ್ಯ ಜಿಲ್ಲೆಯೊಂದರಲ್ಲೇ ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಹಣ ಬಂದಿಲ್ಲ. ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡದ ಕಾರಣ ರೈತರು ಗೊಂದಲಕ್ಕೀಡಾಗಿದ್ದಾರೆ. ನಿತ್ಯ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಕಚೇರಿಗೆ ಅಲೆದಾಡುತ್ತಿದ್ದಾರೆ.

ಸಮಸ್ಯೆ ಏನು?: ರೈತರು ಸಲ್ಲಿಸಿರುವ ದಾಖಲಾತಿಗಳಲ್ಲಿ ಆರ್‌ಟಿಸಿ ಹಾಗೂ ಆಧಾರ್‌ ಕಾರ್ಡ್‌ ನಡುವೆ ಮಾಹಿತಿ ಹೊಂದಾಣಿಕೆಯಾಗದ ಕಾರಣ ಹಣ ತಡೆ ಹಿಡಿಯಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಇಲ್ಲಿಯವರೆಗೂ ಹಲವು ಕಂತುಗಳ ಹಣ ಪಾವತಿ ಮಾಡಿ ಈಗ ಏಕಾಏಕಿ ಹೊಂದಾಣಿಕೆ ಕೊರತೆ ಕಾರಣ ಹೇಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಆರ್‌ಟಿಸಿ– ಆಧಾರ್‌ ಕಾರ್ಡ್‌ ಮಾಹಿತಿಯಲ್ಲಿ ಹೊಂದಾಣಿಕೆ ಇದ್ದರೂ ನೂರಾರು ರೈತರಿಗೆ ಹಣ ಬಂದಿಲ್ಲ. ಜೊತೆಗೆ, ಮಾಹಿತಿ ಹೊಂದಾಣಿಕೆ ಇಲ್ಲದಿದ್ದರೂ ಹಲವರ ಖಾತೆಗಳಿಗೆ ಹಣ ಬಂದಿದೆ. ಈ ವಿಚಾರ ಪ್ರಸ್ತಾಪ ಮಾಡಿದರೆ ಕೃಷಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರಿಗಳಲ್ಲೇ ಗೊಂದಲವಿದ್ದು ಸಾಕಷ್ಟು ಅನುಮಾನ ಹುಟ್ಟುಹಾಕಿದೆ.ದೆ.

‘ನನ್ನ 1 ಎಕರೆ ಭೂಮಿಯ ಆರ್‌ಟಿಸಿ– ಆಧಾರ್‌ ಕಾರ್ಡ್‌ನಲ್ಲಿ ಯಾವುದೇ ಗೊಂದಲವಿಲ್ಲ, ಮಾಹಿತಿ ಸರಿಯಾಗಿದ್ದರೂ ನನ್ನ ಖಾತೆಗೆ ಹಣ ಬಂದಿಲ್ಲ. ಆದರೆ ಆರ್‌ಟಿಸಿ– ಆಧಾರ್‌ ಗೊಂದಲವಿದ್ದರೂ ಹಲವರ ಖಾತೆಗಳಿಗೆ ಹಣ ಬಂದಿದ್ದು ಹೇಗೆ’ ಎಂದು ನಾಗಮಂಗಲ ತಾಲ್ಲೂಕು ಬಿಂಡಿಗನವಿಲೆಯ ರೈತ ನಾಗರಾಜೇಗೌಡ ಪ್ರಶ್ನಿಸಿದರು.

ಪೌತಿ, ಪೋಡು: ಯೋಜನೆ ಆರಂಭ ಕಾಲದಲ್ಲಿ ಪೌತಿ ಖಾತೆ ಸಮಸ್ಯೆ ಇರುವ ರೈತರೂ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಈಗ ರೈತರ ಹೆಸರಿನಲ್ಲಿ ಜಮೀನು ಇದ್ದರೆ ಮಾತ್ರ ಹಣ ನೀಡುತ್ತಿದ್ದು ಪೌತಿ ಖಾತೆ ಹೊಂದಿರುವ ರೈತರಿಗೆ ಹಣ ಬಂದಿಲ್ಲ, ಜೊತೆಗೆ ಪೋಡು ಸಮಸ್ಯೆ ಇರುವ ರೈತರ ಖಾತೆಗಳಿಗೂ ಹಣ ಪಾವತಿಯಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಎಲ್ಲಿ ಸಮಸ್ಯೆಯಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ವಾರದೊಳಗೆ ಕಂತಿನ ಹಣ ಪಾವತಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಎಚ್ಚರಿಕೆ ನೀಡಿದರು.

*****

ಆರ್‌ಎಸ್‌ಕೆಯಲ್ಲಿ ನಡೆಯದ ಕೆಲಸ

ಆಧಾರ್‌– ಆರ್‌ಟಿಸಿ ಮಾಹಿತಿ ಸರಿಪಡಿಸಲು ರೈತರು ರೈತ ಸಂಪರ್ಕ ಕೇಂದ್ರಗಳ ಮುಂದೆ ಕಳೆದ 15 ದಿನಗಳಿಂದಲೂ ಕಾಯುತ್ತಿದ್ದಾರೆ. ಆದರೆ ಅಲ್ಲಿಯ ಸಿಬ್ಬಂದಿ ರೈತರಿಗೆ ಸ್ಪಂದಿಸದ ಕಾರಣ ರೈತರ ಕೆಲಸ ನಡೆಯುತ್ತಿಲ್ಲ. ಸರ್ವರ್‌ ಸಮಸ್ಯೆಯ ನೆಪ ಹೇಳುತ್ತಿರುವ ಅಲ್ಲಿಯ ಸಿಬ್ಬಂದಿ ತಪ್ಪು ಸರಿಪಡಿಸಲು ಮುಂದಾಗುತ್ತಿಲ್ಲ ಎಂದು ರೈತರು ಆರೋಪಿಸುತ್ತಾರೆ.

‘ಆಧಾರ್‌–ಆರ್‌ಟಿಸಿ ಮಾಹಿತಿ ತಿದ್ದುಪಡಿ ಮಾಡಲು ಭಾನುವಾರವೂ ರೈತ ಸಂಪರ್ಕ ಕೇಂದ್ರಗಳು ತೆರೆದಿರಲಿವೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸರ್ವರ್‌ ಕೆಲಸ ಮಾಡಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

*****

ಇದು ಮಂಡ್ಯ ಜಿಲ್ಲೆಯೊಂದರ ಸಮಸ್ಯೆಯಲ್ಲ, ರಾಜ್ಯ, ರಾಷ್ಟ್ರದಲ್ಲಿ ಸಮಸ್ಯೆಯಾಗಿದೆ. ಹಣ ಬಾರದ ರೈತರು ರೈತ ಸಂಪರ್ಕ ಕೇಂದ್ರಗಳಿಗೆ ದಾಖಲಾತಿ ಒದಗಿಸಬೇಕು

–ಬಿ.ಎಸ್‌.ಚಂದ್ರಶೇಖರ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT