ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಕಸದ ವಾಹನ: ಚೆಲ್ಲಾಡುತ್ತಿದೆ ತ್ಯಾಜ್ಯ

ಹೊರಗುತ್ತಿಗೆ ಚಾಲಕರು, ಪೌರ ಕಾರ್ಮಿಕರಿಂದ ಧರಣಿ, ಸ್ಥಗಿತೊಂಡ ಸ್ವಚ್ಛತಾ ಕಾರ್ಯ
Last Updated 4 ಜುಲೈ 2022, 14:22 IST
ಅಕ್ಷರ ಗಾತ್ರ

ಮಂಡ್ಯ: ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಪೌರ ಕಾರ್ಮಿಕರು, ಕಸದ ವಾಹನ ಚಾಲಕರು ಮುಷ್ಕರ ನಡೆಸುತ್ತಿರುವ ಕಾರಣ ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳ ಸ್ವಚ್ಛತೆ ಸ್ಥಗಿತಗೊಂಡಿದೆ. ಬೀದಿಬೀದಿಯಲ್ಲಿ ಕಸ ಚೆಲ್ಲಾಡುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.

ಪ್ರಮುಖವಾಗಿ ಕಸ ಸಾಗಿಸುವ ವಾಹನ ಚಾಲಕರು ಮುಷ್ಕರದಲ್ಲಿ ನಿರತರಾಗಿರುವ ಕಾರಣ ಮನೆಮನೆ ಕಸ ಸಂಗ್ರಹಿಸುವ ವಾಹನಗಳು ಬರುತ್ತಿಲ್ಲ. ಹೀಗಾಗಿ ಮನೆಗಳಲ್ಲೂ ತ್ಯಾಜ್ಯ ಸಂಗ್ರಹ ನಡೆಯುತ್ತಿಲ್ಲ. ನಗರದ ಹಲವು ಬಡಾವಣೆಗಳಿಗೆ ನಿತ್ಯವೂ ಕಸ ಸಂಗ್ರಹಿಸುವ ವಾಹನ ಬರುತ್ತಿತ್ತು. ಆದರೆ ಕಳೆದ 3 ದಿನಗಳಿಂದ ವಾಹನ ಬಾರದ ಕಾರಣ ಜನರು ಬೀದಿಗೆ ಕಸ ಬೀಸಾಡುತ್ತಿದ್ದಾರೆ.

ಕಸ ಸಂಗಹದ ತೊಟ್ಟಿಗಳು ತುಂಬಿ ತುಳುಕುತ್ತಿದ್ದು ದುರ್ವಾಸನೆ ಹೆಚ್ಚಾಗಿದೆ. ಬೀದಿ ನಾಯಿಗಳು ಕಸದ ತೊಟ್ಟಿಗಳಿಗೆ ಮುತ್ತಿಕೊಂಡಿದ್ದು ಸಾರ್ವಜನಿಕರಿಗೆ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಲ್ವಡಿ ಕೃಷ್ಣರಾಜ ಕಲಾಮಂದಿರದ ಬಳಿ ಇರುವ ಕಸದ ತೊಟ್ಟಿಗೆ ನಾಯಿಗಳು ಮತ್ತಿಕೊಂಡಿದ್ದು ಆ ಭಾಗದಲ್ಲಿ ಓಡಾಡುವವರಿಗೆ ತೊಂದರೆಯಾಗಿದೆ. ಬೊಗಳುತ್ತಾ ವಾಹನಗಳತ್ತ ನುಗ್ಗುತ್ತಿರುವ ಕಾರಣ ಜನರು ಓಡಾಡಲು ಭಯಪಡುತ್ತಿದ್ದಾರೆ.

ಅಶೋಕ್‌ ನಗರ, ವಿದ್ಯಾನಗರ, ಸುಭಾಷ್‌ ನಗರ, ಕಲ್ಲಹಳ್ಳ ಸೇರಿದಂತೆ ಬಹುತೇಕ ಬಡಾವಣೆಗಳ ರಸ್ತೆಯ ಅಂಚಿನಲ್ಲಿ ಜನರು ಕಸ ತುಂದು ಹಾಕಿ ಹೋಗುತ್ತಿದ್ದಾರೆ. ಮನೆಯಲ್ಲಿ ಕಸ ಇಟ್ಟುಕೊಳ್ಳಲು ಸಾಧ್ಯವಾಗದೆ ಜನರು ಹೊರಗೆ ಬೀಸಾಡುತ್ತಿದ್ದಾರೆ. ಇದರಿಂದಾಗಿ ರಸ್ತೆಗಳಲ್ಲಿ ಜನರು ಮೂಗುಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಜನರು ಸ್ಥಳೀಯ ನಗರಸಭೆ ಸದಸ್ಯರಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಆದರೆ ಸದ್ಯ ಸದಸ್ಯರೂ ಅಸಹಾಯಕರಾಗಿದ್ದಾರೆ.

‘ಮನೆಯಲ್ಲಿ ಕಸ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಬೇಸಿಗೆ ಕಾಲದಲ್ಲಿ ಮನೆಯಲ್ಲಿ ಕಸ ಇಟ್ಟುಕೊಂಡರೆ ಡೆಂಗಿ, ಮಲೇರಿಯಾ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನಗರಸಭೆ ತೊಟ್ಟಿಗೆ ಕಸ ಹಾಕುತ್ತಿದ್ದೇವೆ. ಅಲ್ಲಿಂದ ನಗರಸಭೆ ಸಿಬ್ಬಂದಿ ಕಸ ತೆರವುಗೊಳಿಸಬೇಕು’ ಎಂದು ಸುಭಾಷ್‌ ನಗರದ ಮಹಿಳೆಯೊಬ್ಬರು ತಿಳಿಸಿದರು.

ನಗರಸಭೆಯಲ್ಲಿ ಹೊರಗುತ್ತಿಗೆಯ ಅಧಾರದ ಮೇಲೆ ಕೆಲಸ ಮಾಡುವ 38 ವಾಹನ ಚಾಲಕರಿದ್ದು ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನೇರ ಪಾವತಿ ಆಧಾರದ ಮೇಲೆ ವೇತನ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ. ನೇರ ಪಾವತಿ ಆಧಾರದ ಮೇಲೆ ಸಂಬಳ ಪಡೆಯುವ 117 ಪೌರ ಕಾರ್ಮಿಕರು ಇದ್ದಾರೆ. ಅವರು ಕೆಲಸ ಕಾಯಂಗೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಬಹುತೇಕ ಪೌರ ಕಾರ್ಮಿಕರು ಮಷ್ಕರದಲ್ಲಿ ಇರುವ ಕಾರಣ ನಗರದ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ.

‘ನಗರಸಭೆಯಲ್ಲಿ 66 ಮಂದಿ ಕಾಯಂ ಪೌರ ಕಾರ್ಮಿಕರು ಇದ್ದಾರೆ. ಅವರಿಂದ ನಗರದ ಕೆಲ ಭಾಗದ ಸ್ವಚ್ಛತೆ ಮಾಡಿಸಲಾಗುತ್ತಿದೆ. ಆದರೆ ವಾಹನ ಚಾಲಕರು ಕೆಲಸಕ್ಕೆ ಬಾರದ ಕಾರಣ ಕಸ ಸಾಗಿಸಲು ಸಾಧ್ಯವಾಗುತ್ತಿಲ್ಲ. ಮುಷ್ಕರ ನಿಂತ ನಂತರ ಶೀಘ್ರಗತಿಯಲ್ಲಿ ನಗರವನ್ನು ಸ್ವಚ್ಛಗೊಳಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌ ತಿಳಿಸಿದರು.

*****

ಧರಣಿ ವಾಪಸ್‌

‘ಹೊರ ಗುತ್ತಿಗೆ ಕಾರ್ಮಿಕರಿಗೆ ನೇರ ಪಾವತಿ ಮೂಲಕ ಸಂಬಳ ನೀಡಲು ಸರ್ಕಾರ ಒಪ್ಪಿದೆ, ಇದರಿಂದಾಗಿ ಸೋಮವಾರ ಧರಣಿಯನ್ನು ಹಿಂದಕ್ಕೆ ಪಡೆದಿದ್ದೇವೆ. ಮಂಗಳವಾರದಿಂದ ಕಾರ್ಮಿಕರು ಕರ್ತವ್ಯಕ್ಕೆ ಹಾಜಾರಾಗಲಿದ್ದಾರೆ’ ಎಂದು ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT