ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಚುನಾವಣೆ; ಹಲವು ಸಂದೇಶ

ಅನುಕಂಪ, ಹಣಬಲ ಎರಡಕ್ಕೂ ಜೈ; ‘ನಾನೇ ಎಲ್ಲ’ ಎಂದವರಿಗೆ ಬರೆ
Last Updated 16 ಮೇ 2018, 7:04 IST
ಅಕ್ಷರ ಗಾತ್ರ

ಕಲಬುರ್ಗಿ: ಈ ಚುನಾವಣೆಯ ಫಲಿತಾಂಶ ಜಿಲ್ಲೆಯ ಹಲವು ನಾಯಕರಿಗೆ ‘ಪಾಠ’ ಕಲಿಸಿದೆ. ‘ಸೋಲಿಸುವ ರಾಜಕೀಯ’ಕ್ಕೆ ಸೋಲಾಗಿದೆ. ಮತದಾರರು ‘ಅನುಕಂಪ’ಕ್ಕೆ ಕರಗಿದ್ದಾರೆ. ‘ಹಣಬಲ’ಕ್ಕೆ ಜೈ ಎಂದಿದ್ದಾರೆ. ಕೆಲವೆಡೆ ‘ಅಭಿವೃದ್ಧಿ’ಯನ್ನು ಪೋಷಿಸಿದ್ದಾರೆ. ‘ನಾನೇ ಎಲ್ಲ’ ಎನ್ನುವವರನ್ನು ಕಟ್ಟಿ ಹಾಕಿದ್ದಾರೆ. ಆ ಮೂಲಕ ವಿಭಿನ್ನ ಫಲಿತಾಂಶ ಬರೆದಿದ್ದಾರೆ.

ಮಾಲೀಕಯ್ಯ ಗುತ್ತೇದಾರ ಮತ್ತು ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮಧ್ಯದ ‘ಕದನ’ ಕುತೂಹಲಕ್ಕೆ ತೆರೆ ಬಿದ್ದಿದೆ. ಇದರಲ್ಲಿ ಮಾಲೀಕಯ್ಯ ಸೋತರೆ, ಪ್ರಿಯಾಂಕ್‌ ಗೆದ್ದಿದ್ದಾರೆ.

ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ರೇವೂ ನಾಯಕ ಬೆಳಮಗಿ ಮತದಾರರ ಕಾಲಿಗೆರಗಿ ‘ಅನುಕಂಪ’ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದರು. ಅವರ ತಂತ್ರ ಕೆಲಸ ಮಾಡಿಲ್ಲ. ಅಲ್ಲಿ ‘..ಬಲ’ಕ್ಕೆ ಬೆಲೆ ದೊರೆತಿದೆ. ಆಡಳಿತ ವಿರೋಧಿ ಅಲೆಯಲ್ಲಿ ಅಲ್ಲಿ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗಿದೆ.

‘ಸೋಲಿಸುವ–ಗೆಲ್ಲಿಸುವ’ ಎರಡ ರಲ್ಲೂ ಹ್ಯಾಟ್ರಿಕ್‌ಗೆ ಕಾರಣರಾಗಿದ್ದ ಸೇಡಂ ಮತದಾರರು ಸಚಿವ ಡಾ.ಶರಣ ಪ್ರಕಾಶ ಪಾಟೀಲರ ಗೆಲುವಿನ ಓಟಕ್ಕೆ ತಡೆಯೊಡ್ಡಿದ್ದಾರೆ. ನಾಲ್ಕನೇ ಬಾರಿ ಸ್ಪರ್ಧಿಸಿದ್ದ ಬಿಜೆಪಿಯ ರಾಜಕುಮಾರ ಪಾಟೀಲರನ್ನು ಗೆಲ್ಲಿಸಿ ‘ಅನುಕಂಪ’ ತೋರಿದ್ದಾರೆ.

ಅಫಜಲಪುರದಲ್ಲಿ ಅತಿಯಾದ ಆತ್ಮವಿಶ್ವಾಸವೇ ಮಾಲೀಕಯ್ಯ ಗುತ್ತೇದಾರ ಅವರಿಗೆ ಮುಳುವಾಗಿದೆ. ಆರು ಬಾರಿ ಗೆದ್ದಿದ್ದ ಅವರು, ‘ತಮ್ಮ ಮತಬ್ಯಾಂಕ್‌’ ಹಿಡಿದಿಟ್ಟುಕೊಳ್ಳಲಾಗದೆ ಸೋತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ರಾಜೇಂದ್ರಕುಮಾರ್‌ ಪಾಟೀಲ ಅವರು ಮಾಲೀಕಯ್ಯರ ಮತಬುಟ್ಟಿಗೆ ಕೈಹಾಕಿದ್ದಾರೆ. ಎಂ.ವೈ. ಪಾಟೀಲರು ತಮ್ಮ ಮತಬ್ಯಾಂಕ್‌ ಉಳಿಸಿಕೊಂಡು, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಆದರೆ, ಆಳಂದಲ್ಲಿ ಸುಭಾಷ ಗುತ್ತೇದಾರ ‘ಮೌನವಾಗಿ’ ಕಾರ್ಯನಿರ್ವಹಿಸಿ ಗೆಲುವು ಸಾಧಿಸಿ ದ್ದಾರೆ. ಮತಯಂತ್ರಗಳಿಗೆ ಅಂಟಿಸಿದ ಮತಪತ್ರದಲ್ಲಿ ‘ಗಾಂಧಿ ಟೊಪ್ಪಿಗೆ’ ಇಲ್ಲದ ಬಿ.ಆರ್‌. ಪಾಟೀಲ ಸೋತಿದ್ದಾರೆ.

ಧರ್ಮಸಿಂಗ್‌ ಅವರು ಇಲ್ಲದ ಮೊದಲ ಚುನಾವಣೆ ಎದುರಿಸಿದ ಅವರ ಪುತ್ರ ಡಾ.ಅಜಯ್‌ ಸಿಂಗ್‌, ಪ್ರಚಾರ ವೇದಿಕೆಯಲ್ಲಿ ಸುರಿಸಿದ ಕಣ್ಣೀರಿಗೆ ಜನರ ಮನ ಕರಗಿದೆ. ಆರಂಭದಲ್ಲಿ ಅಬ್ಬರಿಸಿದ್ದ ಬಿಜೆಪಿ–ಜೆಡಿಎಸ್‌ ಎರಡೂ ಅಲ್ಲಿ ಮುಗ್ಗರಿಸಿವೆ. ಬಿಜೆಪಿಯಲ್ಲಿನ ಗೊಂದಲ, ಬಂಜಾರ ಸಮುದಾಯ ಗಟ್ಟಿಯಾಗಿ ನಿಂತಿದ್ದರಿಂದ ಚಿಂಚೋಳಿ ಕ್ಷೇತ್ರದಲ್ಲಿ ಡಾ.ಉಮೇಶ ಜಾಧವ ಎರಡನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸುನೀಲ್‌ ವಲ್ಲ್ಯಾಪುರ ಅವರು ಅಲ್ಲಿ ಸತತ ಎರಡು ಸೋಲುಕಂಡಿದ್ದಾರೆ.

‘ಮೇಲ್ವರ್ಗದವರ ಮುನಿಸಿಗೆ ಕಾರಣರಾಗಿದ್ದಾರೆ’ ಎನ್ನುತ್ತಿದ್ದ ಸಚಿವ ಪ್ರಿಯಾಂಕ್‌ ಖರ್ಗೆ ಚಿತ್ತಾಪುರದಲ್ಲಿ ಗೆದ್ದಿದ್ದಾರೆ. ಕೊನೆಗಳಿಗೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ‘ರಂಗಪ್ರವೇಶ’ ಪ್ರಿಯಾಂಕ್‌ ಅವರ ಅಡ್ಡಿ ನಿವಾರಿಸಿದೆ. ಅಲ್ಲಿಯೂ ವಾಲ್ಮೀಕಿ ನಾಯಕ ಎರಡನೇ ಬಾರಿ ಪರಾಭವಗೊಂಡಿದ್ದಾರೆ.

ಅನುಕಂಪ; ಅಲೆಯ ಬಲೆ

ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ‘ಧರ್ಮ’ಕ್ಕೆ ಹಿನ್ನಡೆಯಾಗಿದೆ. ‘ಅನುಕಂಪ’ಕ್ಕೆ ಜಯ ದೊರೆತಿದೆ. ದಿವಂಗತ ಖಮರುಲ್‌ ಇಸ್ಲಾಂ ಅವರ ಪತ್ನಿ ಕನ್ನೀಜ್‌ ಫಾತಿಮಾ ಅವರು ಅನುಕಂಪದ ಅಲೆಯಲ್ಲಿ ದಡ ಸೇರಿದ್ದಾರೆ. ಬಿಜೆಪಿ ಅಭ್ಯರ್ಥಿ ಚಂದ್ರಕಾಂತ ಪಾಟೀಲ ಅವರು ಆರಂಭಿಕ ಸುತ್ತಿನಿಂದಲೂ ಮುನ್ನಡೆ ಸಾಧಿಸಿದ್ದರು. ಕೊನೆ ಕೊನೆಗೆ ಅದೃಷ್ಟ ಅವರಿಗೆ ಕೈಕೊಟ್ಟಿತು. ಗೆಲ್ಲಲು ಅವರು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ, ‘ಈ ಕ್ಷೇತ್ರದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ’ ಎಂಬುದನ್ನು ಫಲಿತಾಂಶ ಸಾಬೀತು ಪಡಿಸಿದೆ. ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಆರಂಭಿಕ ಸುತ್ತಿನಲ್ಲಿ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ ಮುನ್ನಡೆ ಸಾಧಿಸಿದ್ದರು. ನಾಲ್ಕೈದು ಸುತ್ತಿನ ನಂತರ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತು. ಇಲ್ಲಿ ಜಾತಿ ಬಲ ಮತ್ತು ಮೋದಿ ಅಲೆಯಿಂದಾಗಿ ದತ್ತಾತ್ರೇಯ ಪಾಟೀಲ ರೇವೂರ ಪುನರಾಯ್ಕೆಗೊಂಡರು. ಚುನಾವಣೆಯ ಆರಂಭದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಜೆಡಿಎಸ್‌ನ ಬಸವರಾಜ ಡಿಗ್ಗಾವಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ನಾಲ್ವರ ಪುನರಾಯ್ಕೆ; ಮೂರು ಹೊಸಮುಖ

ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿ ಬಿಜೆಪಿ ಗಣನೀಯ ಸುಧಾರಣೆ ಕಂಡಿದೆ. ಏಳು ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್‌ ಐದಕ್ಕೆ ತೃಪ್ತಿಪಟ್ಟುಕೊಂಡಿದೆ. ಸಚಿವದ್ವಯರಲ್ಲಿ ಪ್ರಿಯಾಂಕ್‌ ಖರ್ಗೆ ಗೆದ್ದಿದ್ದರೆ, ಡಾ.ಶರಣಪ್ರಕಾಶ ಪಾಟೀಲ ಪರಾಭವಗೊಂಡಿದ್ದಾರೆ.

ಪ್ರಿಯಾಂಕ್‌ ಖರ್ಗೆ (ಚಿತ್ತಾಪುರ), ಡಾ. ಉಮೇಶ ಜಾಧವ (ಚಿಂಚೋಳಿ), ಡಾ.ಅಜಯ್‌ ಸಿಂಗ್‌ (ಜೇವರ್ಗಿ), ದತ್ತಾತ್ರೇಯ ಪಾಟೀಲ (ರೇವೂರ) ಪುನರಾಯ್ಕೆಯಾಗಿದ್ದಾರೆ.

‘ಹೊಸಮುಖ’ಗಳಾದ ಕನ್ನೀಜ್‌ ಫಾತಿಮಾ (ಕಲಬುರ್ಗಿ ಉತ್ತರ), ರಾಜಕುಮಾರ ಪಾಟೀಲ ತೆಲ್ಕೂರ (ಸೇಡಂ), ಬಸವರಾಜ ಮತ್ತಿಮೂಡ (ಕಲಬುರ್ಗಿ ಗ್ರಾಮೀಣ)ಅವರಿಗೆ ಮತದಾರರು ಮಣೆ ಹಾಕಿದ್ದಾರೆ.

ಜಿಲ್ಲೆಯ ಪ್ರಭಾವಿ ರಾಜಕಾರಣಿಗಳಾದ ಬಿ.ಆರ್‌. ಪಾಟೀಲ, ಮಾಲೀಕಯ್ಯ ಗುತ್ತೇದಾರ ಅವರಿಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ.

8ರ ನಂಟು!

ಎಂ.ವೈ. ಪಾಟೀಲ ಮತ್ತು ಮಾಲೀಕಯ್ಯ ಗುತ್ತೇದಾರ ಇಬ್ಬರೂ 8ನೇ ಬಾರಿ ಸ್ಪರ್ಧಿಸಿದ್ದರು. ಈ ಎಂಟರ ನಂಟಿನಲ್ಲಿ ಎಂ.ವೈ. ಪಾಟೀಲ ಗೆದ್ದಿದ್ದಾರೆ. ಇವರು 1978ರಲ್ಲಿ ಜನತಾ ಪಾರ್ಟಿಯಿಂದ ಗೆದ್ದಿದ್ದರು. ನಂತರದ ಮೂರು ಚುನಾವಣೆಗಳಲ್ಲಿ ಸೋತು, 2004ರಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಆ ನಂತರ ಎರಡು ಚುನಾವಣೆಯಲ್ಲಿ ಸೋತಿದ್ದರು. ಈಗ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT