ಸೋಮವಾರ, ಮೇ 23, 2022
26 °C

ಮದ್ದೂರು | ಹಣ ಡಬ್ಲಿಂಗ್‌ ಆಮಿಷ: ₹ 5 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಹಣ ದ್ವಿಗುಣ (ಮನಿ ಡಬ್ಲಿಂಗ್‌) ಆಮಿಷ ನಂಬಿದ ಯುವಕರಿಬ್ಬರು ಕಿಡಿಗೇಡಿಗಳಿಂದ ₹ 5 ಲಕ್ಷ ಹಣ ಕಳೆದುಕೊಂಡ ಘಟನೆ ತಾಲ್ಲೂಕಿನ ಉಪ್ಪಿನಕೆರೆ ಗೇಟ್‌ ಬಳಿ ಮಂಗಳವಾರ ನಡೆದಿದೆ.

ಕುಣಿಗಲ್‌ ತಾಲ್ಲೂಕಿನ ಕಿರಣ್‌ ಹಾಗೂ ಪ್ರದೀಪ್‌ ವಂಚನೆಗೊಳಗಾದವರು. ಮೈಸೂರಿನವರು ಎಂದು ಹೇಳಿಕೊಂಡಿದ್ದ ಕಿಡಿಗೇಡಿಗಳು ಕಿರಣ್‌ ಹಾಗೂ ಪ್ರದೀಪ್‌ಗೆ ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿದ್ದಾರೆ. ಮೂರು ದಿನಗಳ ಹಿಂದೆಯೇ ಮಾತುಕತೆ ನಡೆಸಿದ್ದ ಅವರು ಮದ್ದೂರು ತಾಲ್ಲೂಕಿನ ಉಪ್ಪಿನಕೆರೆ ಗೇಟ್‌ ಬಳಿಯ ಟೀ ಅಂಗಡಿ ಬಳಿಗೆ ಹಣ ತರುವಂತೆ, ಅಲ್ಲಿಯೇ ದ್ವಿಗುಣ ಹಣ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನು ನಂಬಿದ ಕಿರಣ್‌, ಪ್ರದೀಪ್‌ ಮಂಗಳವಾರ ಮಧ್ಯಾಹ್ನ ಬೈಕ್‌ನಲ್ಲಿ ₹ 5 ಲಕ್ಷ ಹಣ ತಂದಿದ್ದಾರೆ. ಇನ್ನೊವಾ ಕಾರ್‌ನಲ್ಲಿ ಬಂದ ದುಷ್ಕರ್ಮಿಗಳು ಕಿರಣ್‌, ಪ್ರದೀಪ್‌ ಅವರಿಂದ ಹಣದ ಬ್ಯಾಗ್‌ ಪಡೆದು, ಅವರಿಗೆ ಇನ್ನೊಂದು ಬ್ಯಾಗ್‌ ಕೊಟ್ಟು ₹ 10 ಲಕ್ಷ ಇದೆ ಎಂದು ತಿಳಿಸಿದ್ದಾರೆ. ಬ್ಯಾಗ್ ತೆರೆದು ನೋಡಿದಾಗ ಮೇಲ್ಭಾಗದಲ್ಲಿ ಮಾತ್ರ ಸ್ವಲ್ಪ ಹಣ ಇಟ್ಟು ಕೆಳಗೆ ನೋಟ್‌ಬುಕ್‌ ತುಂಬಿರುವುದು ಪತ್ತೆಯಾಗಿದೆ.

ಆ ವೇಳಗಾಗಲೇ ದುಷ್ಕರ್ಮಿಗಳು ಅಲ್ಲಿಂದ ವೇಗವಾಗಿ ಕಾರ್‌ನಲ್ಲಿ ತೆರಳಿದ್ದಾರೆ. ವಂಚನೆಗೊಳಗಾದವರು ಬೈಕ್‌ನಲ್ಲಿ ಮಳವಳ್ಳಿವರೆಗೂ ದುಷ್ಕರ್ಮಿಗಳ ಕಾರು ಹಿಂಬಾಲಿಸಿದ್ದಾರೆ. ಆದರೆ ವೇಗವಾಗಿ ತೆರಳಿದ ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ.

ನಂತರ ವಂಚನೆಗೊಳಗಾದ ಕಿರಣ್‌, ಪ್ರದೀಪ್‌ ಭಾರತೀನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ಧಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು