ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಪಾಯ ಯಕ್ಷಗಾನಕ್ಕೆ ಹೊಸ ರೂಪ: ಮಕ್ಕಳ ಹೆಜ್ಜೆಯಲ್ಲಿ ಮೂಡಿದ ಭರವಸೆ

ಚಿಣ್ಣರೇ ಅಭಿನಯಿಸಿದ ಮೂರು ಪ್ರಸಂಗಗಳು ಸಿದ್ಧ
Last Updated 9 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಮಂಡ್ಯ: ಮೂಡಲಪಾಯ ಯಕ್ಷಗಾನ ಪ್ರಕಾರದ ಉಳಿವಿಗಾಗಿ ಕರ್ನಾಟಕ ಸಂಘ ನಡೆಸುತ್ತಿರುವ ಪ್ರಯತ್ನದಲ್ಲಿ ಶಾಲಾ ಮಕ್ಕಳನ್ನೂ ಒಳಗೊಂಡು ಮುನ್ನಡೆಯಲಾಗುತ್ತಿದೆ. ಕಳೆದೊಂದು ವರ್ಷದಿಂದ ನಡೆಸಿದ ಪ್ರಯತ್ನದ ಫಲವಾಗಿ ಮೂರು ಪ್ರಸಂಗಗಳು ಸಿದ್ಧಗೊಂಡಿದ್ದು ಮೂಡಲಪಾಯ ಯಕ್ಷಗಾನದಲ್ಲಿ ಮಕ್ಕಳ ಹೆಜ್ಜೆಗಳು ಹೊಸ ಭರವಸೆ ಮೂಡಿಸಿವೆ.

ಅಳಿವಿನ ಅಂಚಿನಲ್ಲಿದ್ದ ಮೂಡಲಪಾಯ ಯಕ್ಷಗಾನ ಕಲೆಗೆ ಮರು ಜೀವ ನೀಡುವ ಉದ್ದೇಶದಿಂದ ಕರ್ನಾಟಕ ಸಂಘದ ಆವರಣದಲ್ಲಿ ‘ಆದಿ ಚುಂಚನಗಿರಿ ಮೂಡಲಪಾಯ ಯಕ್ಷಗಾನ ತರಬೇತಿ ಶಾಲೆ’ ಸ್ಥಾಪನೆ ಮಾಡಲಾಗಿದೆ. ಮಕ್ಕಳ ಕಾಲುಗಳಿಗೆ ಗೆಜ್ಜೆ ಕಟ್ಟಿದರೆ ಅದರ ಸದ್ದು ಸಮಾಜದ ಉದ್ದಗಲಕ್ಕೂ ಕೇಳಲಿದೆ ಎಂಬ ಹಂಬಲ ಕರ್ನಾಟಕ ಸಂಘದ್ದು. ಈ ಅ‍ಪರೂಪದ ಕಲೆಯತ್ತ ಹೊಸ ಪೀಳಿಗೆಯ ಚಿಣ್ಣರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ಸಂಘ ವಿವಿಧ ಶಾಲೆಗ ಸಹಯೋಗದಲ್ಲಿ ಮಕ್ಕಳಿಗೆ ತರಬೇತಿ ಕೊಡುತ್ತಿದೆ.

ತುಮಕೂರು ಭಾಗದಲ್ಲಿ ಪಳಯುಳಿಕೆ ಸ್ಥಿತಿಯಲ್ಲಿರುವ ಮೂಡಲಪಾಯ ಯಕ್ಷಗಾನದ ಭಾಗವತರು, ಮುಖವೀಣೆ ವಾದಕರು, ವಸ್ತ್ರವಿನ್ಯಾಸಕರನ್ನು ಕರೆದು ತಂದು ಅವರ ಕೈಗೆ ಕೆಲಸ ಕೊಡಲಾಗಿದೆ. ಹೊಸ ಕಾಲಕ್ಕೆ ತಕ್ಕಂತೆ ಪ್ರಸಂಗಗಳನ್ನು ಪರಿಷ್ಕರಣೆ ಮಾಡಿ ಮಕ್ಕಳಿಗೆ ಕಲಿಸಲಾಗುತ್ತಿದೆ. ಕರ್ನಾಟಕ ಸಂಘ ಬಿತ್ತನೆ ಮಾಡಿದ ಬಿತ್ತಿದ ಬೀಜದಲ್ಲಿ ಚಿಣ್ಣರು ಚಿಗುರಾಗಿದ್ದಾರೆ.

ಕೆಲವೇ ತಿಂಗಳುಗಳಲ್ಲಿ ಮೂರು ಪ್ರಯೋಗಗಳು ಸಿದ್ಧಗೊಂಡಿದ್ದು ಮಕ್ಕಳ ಹೆಜ್ಜೆಗಳು ಎಲ್ಲರ ಮನಸೂರೆಗೊಂಡಿವೆ.
ಹನಕೆರೆ ವಿವೇಕ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಅಭಿನಯಿಸಿರುವ ‘ದೇವಿ ಮಹಾತ್ಮೆ’ ಮೂಡಲಪಾಯ ಯಕ್ಷಗಾನ ಜಿಲ್ಲೆಯ ಜನರ ಗಮನ ಸೆಳೆದಿದೆ.‌

ಪ್ರೌಢಶಾಲೆ ವಿದ್ಯಾರ್ಥಿಗಳ ಹೆಜ್ಜೆಗಳು, ರಂಗದ ಮೇಲೆ ಮಕ್ಕಳು ತೋರುವ ಮನೋಧರ್ಮ, ಉತ್ಸಾಹ, ಶಕ್ತಿ ಎಲ್ಲವೂ ಮಕ್ಕಳಲ್ಲಿರುವ ಅಗಾಧ ಪ್ರತಿಭೆಯನ್ನು ಅನಾವರಣಗೊಳಿಸಿದೆ. ರಕ್ತಬಿಜಾಸುರನ ಸಂಹಾರಕ್ಕಾಗಿ ದೇವಿ ಪಾರ್ವತಿಯು ಮಹಾಕಾಳಿಯ ಅವತಾರವೆತ್ತಿ ಅವನ ಒಂದು ತೊಟ್ಟು ರಕ್ತವನ್ನೂ ನೆಲ ತಾಗದಂತೆ ಸಂಹಾರ ಮಾಡುವ ಪೌಣಿಕ ಪ್ರಸಂಗವನ್ನು ಮಕ್ಕಳು ಮನಮುಟ್ಟುವಂತೆ ಅಭಿನಯಿಸಿ ತೋರಿದ್ದಾರೆ.

ತಿಪಟೂರು ಸಮೀಪದ ಅರಳಗುಪ್ಪೆಯ ಎ.ಪುಟ್ಟಸ್ವಾಮಿ ಅವರನ್ನು ಕರೆದುತಂದು ಮಕ್ಕಳಿಗೆ ಹೆಜ್ಜೆಗಳ ತರಬೇತಿ ಕೊಡಿಸಲಾಗಿದೆ. ರಂಗ ಪರಿಷ್ಕರಣೆ ಜವಾಬ್ದಾರಿಯನ್ನು ಖ್ಯಾತ ರಂಗನಿರ್ದೇಶಕ ಮಂಜುನಾಥ ಬಡಿಗೇರ ನಿರ್ವಹಿಸಿದ್ದಾರೆ. ಕೇವಲ 1 ತಿಂಗಳಲ್ಲಿ ತಯಾರಾದ ಈ ಪ್ರಸಂಗ ದೊಡ್ಡ ಕಲಾವಿದರಿಗೂ ಆಶ್ಚರ್ಯ ಸೃಷ್ಟಿಸಿದೆ. ವಿವೇಕ ವಿದ್ಯಾಸಂಸ್ಥೆ ಶಿಕ್ಷಕರು ಹಾಗೂ ಸಿಬ್ಬಂದಿ ನೀಡಿದ ಪ್ರೋತ್ಸಾಹದಿಂದಾಗಿ ಒಂದು ಸುಂದರ ಪ್ರಯೋಗ ಸಿದ್ಧಗೊಂಡಿದೆ.

ತ್ರಿಪುರ ದಹನ: ಸದ್ವಿದ್ಯಾ ಪ್ರೌಢಶಾಲೆ ವಿದ್ಯಾರ್ಥಿಗಳು ಅಭಿನಯಿಸಿರುವ ‘ತ್ರಿಪುರ ದಹನ’ ಮೂಡಲಪಾಯ ಯಕ್ಷಗಾನ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ದೇವತೆಗಳಿಗೆ ಉಪಟಳ ನೀಡುತ್ತಿದ್ದ ತಾರಕಾಸುರನ ಮಕ್ಕಳಾದ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಅವರನ್ನು ಸಂಹರಿಸುವ ಕತೆ ಹೊಂದಿರುವ ಪ್ರಸಂಗವನ್ನು ಮಕ್ಕಳು ಮನಮೋಹಕವಾಗಿ ತೆರೆದಿಟ್ಟಿದ್ದಾರೆ. ಭಾಗವತರಾದ ತಲಕಾಡು ರವೀಂದ್ರ ಅವರು ಮಕ್ಕಳಿಗೆ ಹೆಜ್ಜೆ ಕಲಿಸಿದ್ದಾರೆ, ಖ್ಯಾತ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ರಂಗರೂಪ ನೀಡಿ, ಪರಿಷ್ಕರಣೆ ಮಾಡಿದ್ದಾರೆ.

ಕರ್ಣಾವಸಾನ: ಮಂಡ್ಯ ತಾಲ್ಲೂಕು, ಬೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಅಭಿನಯಿಸಿರುವ ‘ಕರ್ಣಾವಸನಾನ’ ಮೂಡಲಪಾಯ ಯಕ್ಷಗಾನ ಕೂಡ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ. ಕುರುಕ್ಷೇತ್ರದಲ್ಲಿ ಕರ್ಣನ ಮಹತ್ವವನ್ನು ಸಾರುವ ಈ ಪ್ರಸಂಗ ಸುಂದರ ರೂಪಕವಾಗಿದೆ. ತಲಕಾಡು ರವೀಂದ್ರ ಹೆಜ್ಜೆ ಕಲಿಸಿದ್ದರೆ, ಪ್ರಮೋದ್‌ ಶಿಗ್ಗಾಂಗ್‌ ರಂಗಪರಿಷ್ಕರಣೆ ಹಾಗೂ ವಸ್ತ್ರವಿನ್ಯಾಸ ಮಾಡಿದ್ದಾರೆ.

ಈ ಮೂರು ಮೂಡಲಪಾಯ ಯತ್ನಗಾನ ಪ್ರಸಂಗಗಳು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಅಳಿವಿನ ಅಂಚಿನಲ್ಲಿದ್ದ ಪ್ರಕಾರಕ್ಕೆ ಹೊಸ ರೂಪ ನೀಡುವತ್ತ ಹೆಜ್ಜೆ ಇಡುತ್ತಿವೆ.

ಮೂಡಲಪಾಯಕ್ಕೆ ಬೇಡಿಕೆ

‘ಮಕ್ಕಳು ಅಭಿನಯಿಸಿರುವ ಮೂಡಲಪಾಯ ಯಕ್ಷಗಾನ ಪ್ರಸಂಗಗಳಿಗೆ ಸಾಕಷ್ಟು ಬೇಡಿಕೆ ಬಂದಿದೆ. ಹಳ್ಳಿಯ ಹಬ್ಬ, ಜಾತ್ರೆ, ರಾಮನವಮಿ ಉತ್ಸವದಲ್ಲಿ ಮಕ್ಕಳು ಅಭಿನಯಿಸಿದ್ದಾರೆ. ಈಗಾಗಲೇ ಮೂರೂ ಪ್ರಸಂಗಗಳು ತಲಾ 10ಕ್ಕೂ ಹೆಚ್ಚು ಪ್ರದರ್ಶನ ಕಂಡಿವೆ. ಮುಂದಿನ ದಿನಗಳಲ್ಲಿ ಕರಾವಳಿ ಭಾಗ ಸೇರಿದಂತೆ ರಾಜ್ಯದಾದ್ಯಂತ ಮೂಡಲಪಾಯ ಯಕ್ಷಗಾನ ಪ್ರದರ್ಶಿಸಲಾಗುವುದು’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT