ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 10 ಟಿಎಂಸಿ ಅಡಿಗಳಷ್ಟು (78 ಅಡಿ) ಮಾತ್ರ ನೀರಿನ ಸಂಗ್ರಹ ಇದ್ದು, ಈ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೇಳಿದರು.
ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಗೆ ಗುರುವಾರ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಅಧಿಕಾರಿಗಳು ವಿವರಣೆ ನೀಡಿದರು. ಮಳೆ ಬಾರದಿದ್ದರೆ ಕುಡಿಯುವ ಉದ್ದೇಶಕ್ಕೆ ನೀರನ್ನು ಕಾಯ್ದಿರಿಸಬೇಕಾಗುತ್ತದೆ. ಈಗ ಲಭ್ಯ ಇರುವ ನೀರನ್ನು ಆ.15ರ ವರೆಗೆ ಬೆಂಗಳೂರು, ಮೈಸೂರು, ಮಂಡ್ಯ ನಗರಗಳಿಗೆ ಕುಡಿಯಲು ಪೂರೈಸಬಹುದು. ಕಾವೇರಿ ಕಣಿವೆಯಲ್ಲಿ ಮಳೆ ಆರಂಭವಾಗಿದ್ದು, ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇದೆ. ಜಲಾಶಯಕ್ಕೆ ಎರಡು ದಿನಗಳಿಂದ ತುಸು ನೀರು ಹರಿದು ಬರುತ್ತಿದೆ ಎಂದರು.
ಗುರುವಾರ ಒಳ ಹರಿವು 1,400 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯಕ್ಕೆ 29,468 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು ಎಂದು ನಿಗಮದ ಕಾರ್ಯಪಾಲಕ ಎಂಜಿನಿಯರ್ ರಾಮಮೂರ್ತಿ ತಿಳಿಸಿದರು.
ತಮಿಳುನಾಡಿಗೆ ಜುಲೈ ತಿಂಗಳಲ್ಲಿ 33 ಟಿಎಂಸಿ ಅಡಿ ನೀರು ಕೊಡಬೇಕು. ಆದರೆ ಜಲಾಶಯದಲ್ಲಿ ನೀರಿನ ಕೊರತೆ ಇರುವುದರಿಂದ ಸದ್ಯಕ್ಕೆ ನೀರು ಕೊಡುವುದು ಕಷ್ಟಸಾಧ್ಯ. ಜೂನ್ ತಿಂಗಳ ಬಾಕಿ 9.91 ಟಿಎಂಸಿ ಅಡಿ ನೀರು ಕೊಡಲೂ ಆಗಿಲ್ಲ. ನೀರು ಬಿಡಬೇಕು ಎಂಬ ತಮಿಳುನಾಡು ಬೇಡಿಕೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಉತ್ತರ ಹುಡುಕಬೇಕು ಎಂದು ಸುಮಲತಾ ಅವರ ಪ್ರಶ್ನೆಗೆ ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಜಲಾಶಯದ ತಗ್ಗಿನಲ್ಲಿರುವ ಕಾವೇರಿ ನದಿ ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಇನ್ನೂ ಏಕೆ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸುಮಲತಾ ಕೇಳಿದರು. ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಒಟ್ಟು ₹ 18 ಕೋಟಿ ಶುಲ್ಕ ಸಂಗ್ರಹಿಸಬೇಕು. ಸದ್ಯ ₹16 ಕೋಟಿ ಶುಲ್ಕ ಸಂಗ್ರಹವಾಗಿದೆ ಎಂದು ರಾಮಮೂರ್ತಿ ತಿಳಿಸಿದರು.
ವಿಸಿ ನಾಲೆ ಆಧುನೀಕರಣ ಕಾಮಗಾರಿಯಿಂದ ಈ ಹಂಗಾಮಿ ನಲ್ಲಿ ನಾಲೆಗೆ ನೀರು ಹರಿಸುವುದಿಲ್ಲ ಎಂಬ ಸುದ್ದಿಯ ಬಗ್ಗೆ ಕೇಳಿದ ಪ್ರಶ್ನೆಗೆ, ಅದು ಐಸಿಸಿ ಸಭೆಯಲ್ಲಿ ತೀರ್ಮಾನ ಆಗಲಿದೆ ಎಂದು ಅಧಿಕಾರಗಿಳು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.