ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ: ಡಿ.ಕೆ.ಶಿವಕುಮಾರ್‌

ಕುಮಾರಸ್ವಾಮಿ ಗಣಿ ಹಗರಣದ ಬಗ್ಗೆ ಲೋಕಾಯುಕ್ತಕ್ಕೆ ದೂರು
Published 5 ಆಗಸ್ಟ್ 2024, 15:26 IST
Last Updated 5 ಆಗಸ್ಟ್ 2024, 15:26 IST
ಅಕ್ಷರ ಗಾತ್ರ

ಮದ್ದೂರು (ಮಂಡ್ಯ ಜಿಲ್ಲೆ): ‘ವಿಜಯೇಂದ್ರ, ಅಶೋಕ್‌, ಕುಮಾರಸ್ವಾಮಿ ಅವರೇ ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ, ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ನಿಮಗೆ ಸಹಿಸಲು ಆಗುತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ಸೋಮವಾರ ಇಲ್ಲಿ ಕಾಂಗ್ರೆಸ್‌ ‌ಹಮ್ಮಿಕೊಂಡಿದ್ದ ‘ಜನಾಂದೋಲನ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿ, ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

‘10 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ತೆಗೆಯುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಗೆ ಮಾಡಲು ಬ್ರಿಟಿಷರ ಕೈಯಲ್ಲೇ ಆಗಲಿಲ್ಲ. ಜನರ ಆಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, 10 ವರ್ಷಗಳ ಸರ್ಕಾರ’ ಎಂದು ತಿರುಗೇಟು ನೀಡಿದರು. 

‘ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಯಾರು? ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು? ಎಂಬುದನ್ನು ನೀವೇ ಚರ್ಚಿಸಿಕೊಳ್ಳಿ. ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲದಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೇ? ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ’ ಎಂದು ತಿರುಗೇಟು ನೀಡಿದರು.

‘ಕುಮಾರಸ್ವಾಮಿ, ನಾವು ನಿಮ್ಮ ಪೆನ್ ಡ್ರೈವ್ ವಿಚಾರಕ್ಕೆ ಬಂದಿದ್ದೇವೆಯೇ? ನೀನುಂಟು ನಿಮ್ಮ ಅಣ್ಣ, ತಮ್ಮಂದಿರು ಉಂಟು. ಪೆನ್ ಡ್ರೈವ್ ಹಿಂದೆ ಮಹಾನಾಯಕ ಇದ್ದಾರೆ ಎಂದು ಹೇಳಿದ್ದ ನೀನು ಮಾತಿಗೆ ಬದ್ಧನಾಗಿ ಇರಬೇಕಿತ್ತು. ನನ್ನ ಬಗ್ಗೆ ಮಾತನಾಡಲಿಲ್ಲ ಅಂದರೆ ನಿನಗೆ ನಿದ್ರೆ ಬರುವುದಿಲ್ಲ ಎನ್ನುವುದು ಗೊತ್ತಿದೆ. ಇದು ಇವತ್ತಿನದಲ್ಲ, 1985ರಿಂದ ನಿಮ್ಮ ಕುಟುಂಬದ ಹಾಗೂ ನನ್ನ ನಡುವೆ ತಿಕ್ಕಾಟ ನಡೆಯುತ್ತಿದೆ’ ಎಂದರು.

‘ಲೂಟಿ ಹಗರಣಕ್ಕೆ ಉತ್ತರ ಕೊಡಿ’
‘ನನ್ನ ನಿನ್ನ ಆಸ್ತಿಯ ಪಟ್ಟಿಯಿದೆ. ನಿನ್ನ ಬೇನಾಮಿಯಾದ ಸಹೋದರನ ಆಸ್ತಿಯ ಪಟ್ಟಿ ಕೊಡಪ್ಪ ಕುಮಾರಣ್ಣ. ನೀನು ಅಧಿಕಾರದಲ್ಲಿದ್ದಾಗ ಕನಕಪುರ ಸೇರಿದಂತೆ ಇತರೆಡೆ ಮಾಡಿರುವ ಪಟ್ಟಿ ಹೇಳಿದ್ದೇನೆ. ನೀನು ಒಂದು ಪಟ್ಟಿ ಕೊಡು ಹಾಗೂ ಮೊದಲು ಪಾದಯಾತ್ರೆ ಏಕೆ ಬೇಡ ಎಂದು ಹೇಳಿದೆ? ನಂತರ ಏಕೆ ಒಪ್ಪಿಕೊಂಡೆ? ಇದಕ್ಕೆ ಮೊದಲು ಉತ್ತರಿಸು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು. ‘ಯಡಿಯೂರಪ್ಪ ಬೊಮ್ಮಾಯಿ ಕಾಲದಲ್ಲಿ ಎಪಿಎಂಸಿಯಿಂದ ₹47 ಕೋಟಿ ಲೂಟಿ. ಭೋವಿ ಅಭಿವೃದ್ದಿ ನಿಗಮದಲ್ಲಿ ₹87 ಕೋಟಿ ದೇವರಾಜು ಅರಸು ಟ್ರಕ್ ಟರ್ಮಿನಲ್ ₹50 ಕೋಟಿ ಗಂಗಾ ಕಲ್ಯಾಣ ಯೋಜನೆಯಲ್ಲಿ ₹430 ಕೋಟಿ ಪಿಎಸ್ಐ ಹಗರಣ ಪರಶುರಾಮ ಪ್ರತಿಮೆ ಹಗರಣ ಸೇರಿದಂತೆ ಹಲವಾರು ಹಗರಣಗಳು ನಡೆದಿವೆ’ ಎಂದರು. ‘ಯಡಿಯೂರಪ್ಪ ಅವರ ಆಪ್ತ ಉಮೇಶ್ ಮನೆಯಲ್ಲಿ ₹700 ಕೋಟಿಗೂ ಹೆಚ್ಚು ಅಕ್ರಮ ಹಣದ ದಾಖಲೆಗಳು ದೊರೆಯಿತು. ಕೋವಿಡ್‌ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದರು. ಈ ಎಲ್ಲ ಲೂಟಿ ಹಗರಣಗಳಿಗೆ ಮೊದಲು ‌ಉತ್ತರಿಸಿ’ ಎಂದು ಆಗ್ರಹಿಸಿದರು. 

‘ನನ್ನ ಅಧ್ಯಕ್ಷತೆಯಲ್ಲಿ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 136 ಸ್ಥಾನಗಳನ್ನು ಗೆದ್ದಿದೆ. ನಿನ್ನ ಅಧ್ಯಕ್ಷತೆಯಲ್ಲಿ ಗೆದ್ದಿದ್ದು ಕೇವಲ 19 ಸ್ಥಾನಗಳು ಮಾತ್ರ. ಲೋಕಸಭೆ ಚುನಾವಣೆಯಲ್ಲಿ ಎರಡು ಸೀಟು ಗೆದ್ದು, ಬಿಜೆಪಿಯವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದೀಯಾ. ನಿನ್ನ ಮಗ ಹಾಗೂ ಜಿ.ಟಿ.ದೇವೇಗೌಡರು ಪಾದಯಾತ್ರೆಗೆ ಹೋಗುವುದಿಲ್ಲ ಎಂದು ಏಕೆ ಹೇಳಿದರು’ ಎಂದು ವ್ಯಂಗ್ಯವಾಡಿದರು.

ಸಮಾವೇಶದಲ್ಲಿ ಸಚಿವರಾದ ಎಚ್‌.ಕೆ.ಪಾಟೀಲ್‌, ಎಚ್‌.ಸಿ.ಮಹದೇವಪ್ಪ, ಎನ್‌.ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್‌, ಶಿವಾನಂದ ಪಾಟೀಲ, ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್‌ ಹಾಗೂ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮಾಜಿ ಸಚಿವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT