ಬುಧವಾರ, ಜನವರಿ 20, 2021
17 °C
ಐದು ವರ್ಷದ ಹಿಂದಿನ ಪ್ರಕರಣ ಭೇದಿಸಿದ ಪೊಲೀಸರು, ಇದು ಮರ್ಯಾದೆಗೇಡು ಹತ್ಯೆಯಲ್ಲ

ಮಂಡ್ಯ: ಬಸ್‌ ಮಿಸ್‌ ಮಾಡಿಸಿ ಪತ್ನಿಯನ್ನು ಹತ್ಯೆ ಮಾಡಿದ ಪತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಐದು ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿ, ನಾಪತ್ತೆಯಾಗಿದ್ದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪತ್ನಿಯನ್ನು ಊರಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ನಾಲೆಗೆ ಎಸೆದಿದ್ದಾನೆ ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದ ಆರೋಪಿ ಟಿ.ಕೆ.ಸ್ವಾಮಿಗೌಡ (33)ನನ್ನು ನ.21ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಹಾಗೂ ಆತನ ಮನೆಯವರು ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯ ತಾಯಿ ಮಹದೇವಯ್ಯ ಈಚೆಗೆ ದೂರು ಸಲ್ಲಿಸಿದ್ದ ಕಾರಣ ಪ್ರಕರಣವನ್ನು ಮರ್ಯಾದೆಗೇಡು ಹತ್ಯೆ ಎಂದು ಶಂಕಿಸಲಾಗಿತ್ತು.

ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಇದು ಮರ್ಯಾದೆಗೇಡು ಹತ್ಯೆಯಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದವನಾದ ಆರೋಪಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ವಾಸವಿದ್ದ ವೇಳೆ ಮಹದೇವಮ್ಮ ಅವರ ಪುತ್ರಿಯನ್ನು ಪ್ರೀತಿಸಿ ವಿವಾಹವಾಗಿದ್ದ. ನಂತರ ಪತ್ನಿಯನ್ನು ತನ್ನ ಊರಿಗೆ ಕರೆದುಕೊಂಡು ಹೋಗದೆ ತನ್ನ ಚಿಕ್ಕಪ್ಪನ ಮನೆಯಲ್ಲಿ ಇರಿಸಿದ್ದ. ಪತ್ನಿ–ಪತ್ನಿಯ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಅವರನ್ನು ಮನೆಯಿಂದ ಖಾಲಿ ಮಾಡಿಸಿದ್ದರು.

ನಂತರ ಚಿಕ್ಕಪ್ಪನೇ ಬಾಡಿಗೆ ಮನೆ ಮಾಡಿಕೊಟ್ಟಿದ್ದರು. 2015, ಮಾರ್ಚ್‌ 22ರಂದು ಊರಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಶ್ರೀರಂಗಪಟ್ಟಣಕ್ಕೆ ಕರೆತಂದು ಲಾಡ್ಜ್‌ನಲ್ಲಿ ಇರಿಸಿದ್ದ. ಮರುದಿನ ಪಾಂಡವಪುರಕ್ಕೆ ಕರೆದುಕೊಂಡು ಬಂದು ಸಂಜೆ 5 ಗಂಟೆಗೆ ಊರಿಗೆ ಬಸ್‌ ಇದೆ ಎಂದು ತಿಳಿಸಿ ಅಲ್ಲಿಯೇ ಸುತ್ತಾಡಿಸಿದ್ದ, ಮತ್ತೆ ಸಂಜೆ 5 ಗಂಟೆಯ ಬಸ್‌ ತಪ್ಪಿ ಹೋಯಿತೆಂದು ತಿಳಿಸಿದ್ದ.

ಮತ್ತೆ ರಾತ್ರಿ 9 ಗಂಟೆಗೆ ಬಸ್‌ ಇರುವ ಕಾರಣ ಊರಿಗೆ ನಡೆದುಕೊಂಡೇ ಕರೆದುಕೊಂಡು ಹೋಗಿದ್ದ. ಹತ್ತಿರದ ದಾರಿಯಲ್ಲಿ ಹೋಗುವುದಾಗಿ ತಿಳಿಸಿ ವಿಶ್ವೇಶ್ವರಯ್ಯ ನಾಲೆ ಏರಿ ಮೇಲೆ ಕರೆದುಕೊಂಡು ಬಂದಿದ್ದ. ಕತ್ತಲಾದ ನಂತರ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಶವವನ್ನು ನಾಲೆಗೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

‘ಪತಿ–ಪತ್ನಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಮಹಿಳೆಯನ್ನು ಊರಿಗೆ ಕರೆದುಕೊಂಡು ಹೋಗುವ ಮೊದಲೇ ಘಟನೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು