ಸ್ವರ್ಗಕ್ಕೆ ಸಂಗೀತವೇ ಹತ್ತಿರದ ದಾರಿ– ಹಂಸಲೇಖ

7

ಸ್ವರ್ಗಕ್ಕೆ ಸಂಗೀತವೇ ಹತ್ತಿರದ ದಾರಿ– ಹಂಸಲೇಖ

Published:
Updated:
Deccan Herald

ಶ್ರೀರಂಗಪಟ್ಟಣ: ‘ಸಂಗೀತವನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಕೇಳುವವರು ಸ್ವರ್ಗ ಸುಖ ಅನುಭವಿಸಬಹುದು. ಸ್ವರ್ಗಕ್ಕೆ ಸಂಗೀತವೇ ಹತ್ತಿರದ ದಾರಿ’ ಎಂದು ಚಲನಚಿತ್ರ ಗೀತ ರಚನೆಕಾರ ಹಂಸಲೇಖ ಹೇಳಿದರು.

ತಾಲ್ಲೂಕಿನ ಬಾಬುರಾಯನಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳ ಜತೆ ಅವರು ಸಂವಾದ ನಡೆಸಿದರು. ‘ಇದುವರೆಗೆ 360 ಚಲನಚಿತ್ರಗಳಿಗೆ ಸಮಾರು 3,500 ಗೀತೆಗಳನ್ನು ಬರೆದಿದ್ದೇನೆ. ಗೀತೆ ಬರೆಯುವುದರಲ್ಲೇ ನನಗೆ ಹೆಚ್ಚು ಸುಖ ಸಿಕ್ಕಿದೆ. ಎಸ್ಸೆಸ್ಸೆಲ್ಸಿ ಫೇಲಾಗಿದ್ದ ನನಗೆ ಲಾವಣಿ ನೀಲಕಂಠಪ್ಪ ಹಾಡುವುದನ್ನು ಕಲಿಸಿದರು. ಶಿವರಾಂ ಮತ್ತು ಸೆಬಾಸ್ಟಿಯನ್‌ ಶಾಸ್ತ್ರೀಯವಾಗಿ ಹಾಡುವುದನ್ನು ಮತ್ತು ಹಾಡು ಬರೆಯವುದನ್ನು ಹೇಳಿಕೊಟ್ಟರು. 12ನೇ ವಯಸ್ಸಿನಲ್ಲಿಯೇ ನಾಟಕ ಬರೆದಿದ್ದೆ. ಬಹಳ ವರ್ಷಗಳ ನಂತರ ಬೆಂಗಳೂರು ವಿವಿಯಿಂದ ಎಂ.ಎ ಪದವಿ ಪಡೆದೆ. ಅದೇ ವಿವಿ ನನಗೆ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದ್ದು ಅವಿಸ್ಮರಣೀಯ ಕ್ಷಣ’ ಎಂದರು. ‘ಎಂತಹ ಸಂದರ್ಭದಲ್ಲೂ ನಗುವುದನ್ನು ರೂಢಿಸಿಕೊಂಡರೆ ದುಃಖ ಹತ್ತಿರಕ್ಕೆ ಸುಳಿಯುವುದಿಲ್ಲ’ ಎಂದು ಖುಷಿಯ ಗುಟ್ಟನ್ನು ಬಿಚ್ಚಿಟ್ಟರು.

‘ಸೆ.3ರಂದು ಸೀನಿಯರ್‌ ಸರಿಗಮಪ ಸ್ಪರ್ಧೆ ಶುರುವಾಗಲಿದೆ. ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳು ಭಾಗವಹಿಸಬಹುದು. ಶಿಕ್ಷಕರು ಮಕ್ಕಳಿಗೆ ಸಂಗೀತದ ಪರಿಚಯ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂದೇಶ್‌, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಸದಸ್ಯ ಶ್ರೀನಿವಾಸ್‌, ಶಿಕ್ಷಕರಾದ ಸಮೀವುಲ್ಲಾ, ಸೀತಾರಾಮು ಇದ್ದರು.

ವಿದ್ಯಾರ್ಥಿಗಳಾದ ವಿನಯ್‌, ಸತ್ಯಮೂರ್ತಿ, ಶಿಲ್ಪಾ, ಅನುಷಾ ಇತರರು ಹಂಸಲೇಖ ಅವರಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಪ್ರಶ್ನೋತ್ತರ ಹೀಗಿತ್ತು:
ವಿದ್ಯಾರ್ಥಿಗಳು: ನಿಮ್ಮ ಮೊದಲ ಹೆಸರೇನು?
ಹಂಸಲೇಖ: ಗಂಗರಾಜು
ವಿ: ಮೂಲ ಊರು ಯಾವುದು?
ಹಂಸಲೇಖ: ಮಂಡ್ಯ ಜಿಲ್ಲೆಯ ಕನ್ನಂಬಾಡಿ
ವಿ: ತಂದೆ–ತಾಯಿ...?
ಹಂಸಲೇಖ: ಗೋವಿಂದರಾಜು– ರಾಜಮ್ಮ
ವಿ: ಎಷ್ಟು ಮಕ್ಕಳು?
ಹಂಸಲೇಖ: 13 ಮಕ್ಕಳಲ್ಲಿ ಕೊನೆಯವನೇ ನಾನು
ವಿ: ಅವರ ಮದುವೆ ಯಾವಾಗ ನಡೆಯಿತು?
ಹಂಸಲೇಖ: ಮದುವೆಯಾದಾಗ ನಮ್ಮಪ್ಪನಿಗೆ 16, ನಮ್ಮವ್ವನಿಗೆ 8 ವರ್ಷ.
ವಿ: ಹುಟ್ಟಿದ್ದೆಲ್ಲಿ?
ಹಂಸಲೇಖ: ಬೆಂಗಳೂರಿನ ತುಳಿಸಿ ತೋಟದ ಸರ್ಕಾರಿ ಆಸ್ಪತ್ರೆ.
ವಿ: ನಿಮ್ಮ ಇಷ್ಟದ ಗೀತೆ ಯಾವುದು
ಹಂಸಲೇಖ: ಜನಗಣಮನ
ವಿ: ನಿಮ್ಮ ಅಂತಿಮ ಆಸೆ ಯಾವುದು?

ಹಂಸಲೇಖ: ಮತ್ತೆ ಮಗುವಾಗುವಾಸೆ– ಹೀಗೆ ನಡೆದ ಸಂವಾದ ಗಮನ ಸೆಳೆಯಿತು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !