ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಲಗೂರು: ಮುತ್ತತ್ತಿ ಜನ ಜೀವನ ಅಸ್ತವ್ಯಸ್ತ

ದಿನನಿತ್ಯ ತಪ್ಪದ ವಿದ್ಯಾರ್ಥಿಗಳ ಪರಿಪಾಟಲು
Published 3 ಆಗಸ್ಟ್ 2024, 13:59 IST
Last Updated 3 ಆಗಸ್ಟ್ 2024, 13:59 IST
ಅಕ್ಷರ ಗಾತ್ರ

ಹಲಗೂರು: ಸದಾ ಜನರಿಂದ ಗಿಜಿಗುಡುತ್ತಿದ್ದ ಮುತ್ತತ್ತಿ ಗ್ರಾಮದಲ್ಲಿ ಅಕಾಲಿಕ ಮಳೆಯ ಪ್ರವಾಹಕ್ಕೆ ಸಿಲುಕಿ ಬಿಕೋ ಎನ್ನುತ್ತಿದೆ. ಇಲ್ಲಿನ ನಿವಾಸಿಗಳು ಜೀವನ ನಡೆಸಲು ಹರಸಾಹಸ ಪಡುತ್ತಿರುವ ದೃಶ್ಯ ಮನ ಕಲಕುವಂತಿದೆ.

ಕೆ.ಆರ್.ಎಸ್ ಮತ್ತು ಕಬಿನಿ ಜಲಾಶಯಗಳಿಂದ ಕಾವೇರಿ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಸಿದ್ದರಿಂದ ನದಿ ಪಾತ್ರದ ಮುತ್ತತ್ತಿ ಜನವಸತಿ ಪ್ರದೇಶದ ನಿವಾಸಿಗಳು ಕಂಗಾಲಾಗಿದ್ದಾರೆ.

ಗ್ರಾಮದಿಂದ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬ್ಯಾಡರಹಳ್ಳಿ ಮತ್ತು ಹಲಗೂರಿನ ಶಾಲೆಗಳಿಗೆ ತೆರಳಬೇಕಿದ್ದು, ನಿಷೇಧಾಜ್ಞೆಯಿಂದಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಾವೇರಿ ವನ್ಯಜೀವಿ ವಲಯದ ಚೆಕ್ ಪೋಸ್ಟ್‌ನಿಂದ ಪೋಷಕರು ಖಾಸಗಿ ವಾಹನಗಳಲ್ಲಿ ಕರೆತರಬೇಕಾದ ಅನಿವಾರ್ಯತೆ ಎದುರಾಗಿದೆ.

ಮುತ್ತತ್ತಿ ಪ್ರವಾಸಿ ತಾಣವಾಗಿದ್ದು, ದಿನನಿತ್ಯ ಸಾವಿರಾರು ಪ್ರವಾಸಿಗರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ನಿವಾಸಿಗಳು ಪ್ರವಾಸಿಗರ ವ್ಯಾಪಾರವನ್ನೇ ಜೀವನ ನಿರ್ವಹಣೆಗೆ ನಂಬಿಕೊಂಡಿದ್ದಾರೆ. ಸುಮಾರು 40 ಸೋಲಿಗ ಕುಟುಂಬ ಕಾಡಿನಲ್ಲಿನ ದೂಪ ಕಿತ್ತು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಇವರ ವ್ಯಾಪಾರಕ್ಕೂ ಕಂಟಕ ಶುರುವಾಗಿದೆ.

‘ಮಳೆಗಾಲ ಬಂದಾಗಲೆಲ್ಲಾ ತಗ್ಗು ಪ್ರದೇಶದಲ್ಲಿರುವ ಕೆಸರಕ್ಕಿ ಹಳ್ಳದ ಸೇತುವೆ ಮೇಲೆ ನೀರು ಹರಿದು ಮುತ್ತತ್ತಿ ಜನವಸತಿ ಪ್ರದೇಶದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎತ್ತರದ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ರವಿ ಒತ್ತಾಯಿಸಿದ್ದಾರೆ.

‘ನದಿಯ ಪ್ರವಾಹ ಪರಿಸ್ಥಿತಿ ಮನಗಂಡು ಮುಂಜಾಗ್ರತಾ ಕ್ರಮವಾಗಿ ಯಾವುದೇ ಪ್ರವಾಸಿಗರಿಗೂ ಅವಕಾಶ ಕಲ್ಪಿಸುತ್ತಿಲ್ಲ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದರೇ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಭೀಮೇಶ್ವರಿ ಜಂಗಲ್ ಲಾಡ್ಜ್ ಆ್ಯಂಡ್‌ ರೆಸಾರ್ಟ್ ವ್ಯವಸ್ಥಾಪಕ ಲೋಕೇಶ್ ಹೇಳುತ್ತಾರೆ.

ತಾಲ್ಲೂಕು ಆಡಳಿತದಿಂದ ಕಾವೇರಿ ನದಿಗೆ ಕಾವಲು ನಿಯೋಜನೆ ಮಾಡಿರುವುದು
ತಾಲ್ಲೂಕು ಆಡಳಿತದಿಂದ ಕಾವೇರಿ ನದಿಗೆ ಕಾವಲು ನಿಯೋಜನೆ ಮಾಡಿರುವುದು
ಜನರಿಲ್ಲದೇ ಬಿಕೋ ಎನ್ನುತ್ತಿರುವ ಮುತ್ತತ್ತಿ ಅಂಗಡಿ ಬೀದಿ
ಜನರಿಲ್ಲದೇ ಬಿಕೋ ಎನ್ನುತ್ತಿರುವ ಮುತ್ತತ್ತಿ ಅಂಗಡಿ ಬೀದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT