ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್‌ ಆಸೆಗೆ ಖಾಸಗೀಕರಣ ಹುನ್ನಾರ: ಲೀಲಾವತಿ ಆರ್ ಪ್ರಸಾದ್‌

ತಿಂಗಳು ಪೂರೈಸಿದ ಮೈಷುಗರ್‌ ಹೋರಾಟ, ರಾಜ್ಯದ ವಿವಿಧ ಸಂಘಟನೆಗಳಿಂದ ಬೆಂಬಲ
Last Updated 13 ಅಕ್ಟೋಬರ್ 2021, 12:54 IST
ಅಕ್ಷರ ಗಾತ್ರ

ಮಂಡ್ಯ: ‘ಕಮಿಷನ್‌ ಹೊಡೆಯುವ ಉದ್ದೇಶದಿಂದ ಮೈಷುಗರ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಜನಪ್ರತಿನಿಧಿಗಳ ಉದ್ದೇಶವಾಗಿದೆ. ಇದರಿಂದ ರೈತರಿಗೆ ತುಂಬಲಾರದ ನಷ್ಟವಾಗುತ್ತದೆ’ ಎಂದು ಮಾಜಿ ಸಚಿವೆ ಲೀಲಾವತಿ ಆರ್ ಪ್ರಸಾದ್‌ ವಿಷಾದಿಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವದಿ ಧರಣಿಯು ಸೋಮವಾರ 31 ದಿನ ಪೂರೈಸಿದ್ದು, ಧರಣಿಗೆ ಬೆಂಬಲ ನೀಡಿ ಅವರು ಮಾತನಾಡಿದರು.

‘ಕಾರ್ಖಾನೆ ಖಾಸಗೀಕರಣ ಆಗಬಾರದು ಎಂದು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಬೇಕು ಎಂಬ ಉದ್ದೇಶದಿಂದ ನಿರಂತರ ಧರಣಿ ಮಾಡುತ್ತಿರುವುದು ಉತ್ತಮ ಕೆಲಸ ಆಗಿದೆ. ಸರ್ಕಾರಿ ಸ್ವಾಮ್ಯದಲ್ಲಿಯೇ ನಡದರೆ ರೈತರಿಗೆ ಅನುಕೂಲ ಆಗುತ್ತದೆ. ಅದನ್ನು ಬಿಟ್ಟು ಖಾಸಗೀಕರಣ ಮಾಡುವ ಮೂಲಕ ಕಮಿಷನ್‌ ಹೊಡೆಯುವ ದಂಧೆಯಾಗಿ ಮಾಡುವುದು ಉಚಿತವಲ್ಲ,ಇದರಿಂದ ಅಪಾಯವೇ ಹೆಚ್ಚು ಎಂಬುವುದನ್ನು ಅರಿತುಕೊಳ್ಳಬೇಕು’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡುತ್ತೇನೆ, ಏಕೆಂದರೆ, ಅವರ ತಂದೆ ಜೊತೆ ನಾನೂ ಕೆಲಸ ಮಾಡಿದ್ದೇನೆ. ಹಾಗಾಗಿ ಅವರ ಜೊತೆ ಆತ್ಮೀಯತೆ ಇದೆ. ಜಿಲ್ಲೆಯ ರೈತರ ಪರವಾಗಿ ಮಾತನಾಡುತ್ತೇನೆ, ಕೇಳಲಿಲ್ಲ ಅಂದರೆ ಅವರ ಮನೆ ಮುಂದೆ ಧರಣಿ ಮಾಡೋಣ, ಕೇವಲ ಮಾತಿನಲ್ಲಿ ಹೇಳಿದರೆ ಸಾಲದು, ಕೆಲಸ ಮಾಡಿ ತೋರಿಸೋಣ’ ಎಂದು ತಿಳಿಸಿದರು.

ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್‌ ಮಾತನಾಡಿ ‘ಮೈಷುಗರ್ ಹೋರಾಟ ಕೇವಲ ಎಂದು ಸರ್ಕಾರ ಭಾವಿಸಬಾರದು, ಇದು ಜಿಲ್ಲೆಗೆ ಸೀಮಿತವಾಗಿಲ್ಲ ರಾಜ್ಯ ಮೂಲೆಮೂಲೆಯಿಂದ ಸಂಘಸಂಸ್ಥೆಗಳು ರಾಜಕೀಯ ಪ್ರತಿನಧಿಗಳು ಪಕ್ಷಭೇದ ಮರೆತು ಧರಣಿಗೆ ಬೆಂಬಲ ನೀಡುತ್ತಿದ್ದಾರೆ, ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ನಡೆಸಬೇಕು ಎಂಬುದು ಎಲ್ಲರ ಒಮ್ಮತ ಆಗಿದೆ. ಸಲ್ಲದ ಕಾನೂನುಗಳನ್ನು ಮಾಡಿ ಬ್ಯಾಂಕ್‌ಗಳು, ಕೃಷಿ ಚಟುವಟಿಕೆಗಳು ನೆಲ ಕಚ್ಚುವಂತೆ ಮಾಡಿರುವ ಇಂತಹ ಭ್ರಷ್ಟ ಸರ್ಕಾರವನ್ನು ಸ್ವಾತಂತ್ರ್ಯ ಬಂದಾಗಿನಿಂದ ನೋಡಿಲ್ಲ ಎಂದು’ ಹರಿಯಾಯ್ದರು.

ಧರಣಿಗೆ ಜಿಲ್ಲಾ ಅಂಗವಿಲಕರ ಸಂಘ, ಜಯಕರ್ನಾಟಕ ಅಂಗವಿಕಲರ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಬಲ ಸೂಚಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷಿ ಸುಂದರಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ರೈತ ಸಂಘ(ಮೂಲ ಸಂಘಟನೆ)ದ ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್‌, ಕನ್ನಡ ಸೇನೆ ಮಂಜುನಾಥ್, ಮುಖಂಡರಾದ ಸುಧೀರ್‌ಕುಮಾರ್, ಷಣ್ಮುಖೇಗೌಡ, ರಾಮಕೃಷ್ಣ, ಗುನ್ನಾಯಕನಹಳ್ಳಿ ಶಿವರತ್ನಮ್ಮ ಭಾಗವಹಿಸಿದ್ದರು.

*****

ಧರಣಿ ಸ್ಥಳಕ್ಕೆ ಗೃಹಸಚಿವರ ಭೇಟಿ

ಗೃಹಸಚಿವ ಆರಗ ಜ್ಞಾನೇಂದ್ರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಜೊತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಕುರಿತಂತೆ ಸಹಾನುಭೂತಿ ಹೊಂದಿದ್ದಾರೆ. ಮೈಷುಗರ್‌ ಕುರಿತಂತೆ ಸದನ ಸಮಿತಿ ರಚನೆಯಾಗಿದೆ, ಸಮಿತಿಯ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿದರು.

‘ಸರ್ಕಾರ ಏಕಪಕ್ಷೀಯವಾಗಿ ಯಾವುದೇ ನಿರ್ಣಯ ಕೈಗೊಳ್ಳುವುದಿಲ್ಲ. ದಸರಾ ಮುಗಿಯುತ್ತಿದ್ದಂತೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ರೈತರು ಸಾವಧಾನದಿಂದ ಕಾಯಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT