ಭಾನುವಾರ, ನವೆಂಬರ್ 28, 2021
20 °C
ಸಿ.ಎಂ ಭರವಸೆಯಿಂದ ಪ್ರತಿಭಟನೆ ಕೈಬಿಟ್ಟ ಮುಖಂಡರು

ಮೈಷುಗರ್‌ ಅನಿರ್ಧಿಷ್ಟಾವಧಿ ಧರಣಿ ಅಂತ್ಯ; ಸೆ.13ರಂದು ಆರಂಭಗೊಂಡಿದ್ದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ ಹಿನ್ನೆಲೆಯಲ್ಲಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ 37 ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ರೈತ ಮಖಂಡರು ಮಂಗಳವಾರ ಅಂತ್ಯಗೊಳಿಸಿದರು.

ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸೇರಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಸೆ.13ರಿಂದ ಧರಣಿ ಆರಂಭಿಸಿದ್ದರು. ರಾಜ್ಯದ ಹಲವು ಸಂಘಟನೆಗಳು, ಮುಖಂಡರು ಹೋರಾಟಕ್ಕೆ ಬೆಂಬಲಿಸಿದ್ದರು. ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಶಕ್ತಿ ತುಂಬಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಕೂಡ ಹೋರಾಟಗಾರರ ಜೊತೆ ನಿಂತಿದ್ದರು.

ಮುಖ್ಯಮಂತ್ರಿ ಕೂಡ ಹೋರಾಟ ಸ್ಥಳಕ್ಕೆ ಭೇಟಿ ನೀಡಿ ರೈತ ಮುಖಂಡರಿಂದ ಮನವಿ ಸ್ವೀಕಾರ ಮಾಡಿದ್ದರು. ಅ.18ರಂದು ನಡೆದ ಸಭೆಯಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಅಧಿಕೃತವಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಹೋರಾಟಗಾರರು ಧರಣಿ ಅಂತ್ಯಗೊಳಿಸಿದರು.

ಸಿ.ಎಂ ಕ್ರಮಕ್ಕೆ ಶ್ಲಾಘನೆ: ‘ಮೈಷುಗರ್‌ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳಬೇಕೆಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಪಕ್ಷಾತೀತ ಹೋರಾಟಕ್ಕೆ ಮುಖ್ಯಮಂತ್ರಿ ಸ್ಪಂದಿಸಿ ಪ್ರಬುದ್ಧತೆ ಮೆರೆದಿದಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಸವರಾಜ ಬೊಮ್ಮಾಯಿ ಅವರು ಮೈಷುಗರ್‌ ವಿಷಯವಾಗಿ ಸೂಕ್ತ ನಿಲುವು ಕೈಗೊಂಡಿದ್ದಾರೆ, ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ಆಗ್ರಹದಂತೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದಿರುವುದು ಮೆಚ್ಚುಗೆ ಗಳಿಸಿದೆ. ರಾಜಕಾರಣ ಮರೆತು ತಾಳ್ಮೆ ಹಾಗೂ ಸಂಘಟನೆಯಿಂದ ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ಆ ಮೂಲಕ ಮಂಡ್ಯ ಜಿಲ್ಲೆ ಹೊರಾಟದ ಶಕ್ತಿ ರುಜುವಾತಾಗಿದೆ’ ಎಂದರು.

ಜಿಲ್ಲಾ ರೈತಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ ‘ಸೋಮವಾರ ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದೆ ಸುಮಲತಾ ಜಿಲ್ಲೆಯ ಯಾವುದೇ ಹೋರಾಟಗಾರರನ್ನು ಮಾತನಾಡಿಸದೆ ತಮ್ಮದೇ ಅಭಿಪ್ರಾಯವನ್ನು ಒತ್ತಡದ ರೂಪದಲ್ಲಿ ಅರ್ಥೈಸಲು ಮುಂದಾಗಿದ್ದು ಸರಿಯಲ್ಲ, ಸಭೆಯ ನಿರ್ಧಾರದ ಬಗ್ಗೆ ಸರ್ಕಾರಿ ಆದೇಶ ಹೊರಡಿಸುವ ಸಿದ್ದತೆಯಲ್ಲಿ ಮುಖ್ಯಮಂತ್ರಿಗಳಿದ್ದಾಗ, ನಿಜವಾದ ರೈತರ ಅಭಿಪ್ರಾಯ ಕೇಳಬೇಕಾಗುತ್ತದೆ ಎಂದು ಸಂಸದೆ ಹೇಳಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯ ಜನಪ್ರತಿನಿಧಿಗಳು, ಹೋರಾಟಗಾರರು ಹಾಗೂ ಕಬ್ಬು ಬೆಳೆಗಾರರೇ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಉಳಿಸಲು ಮುಂದಾಗಿದ್ದಾರೆ. ಇವರೆಲ್ಲರೂ ರೈತರೇ ಆಗಿದ್ದಾರೆ ಎಂಬುದನ್ನು ಜಿಲ್ಲೆಯ ಸಂಸದೆ ಸುಮಲತಾ ತಿಳಿದುಕೊಳ್ಳಬೇಕು. ಹರಕಲು ಬಟ್ಟೆ, ತಲೆಗೆ ಪೇಟ ಹೊಂದಿರುವವವರು ಮಾತ್ರ ರೈತರಲ್ಲ. ನಮ್ಮದು ಕೃಷಿ ಪ್ರಧಾನ ದೇಶ, ಸಂಸದರು ತಮ್ಮ ಹೇಳಿಕೆಯನ್ನು ತಿದ್ದಿಕೊಳ್ಳಬೇಕು. ದೇಶವ್ಯಾಪಿ ಚರ್ಚೆಯಲ್ಲಿರುವ ಮೂರು ಕೃಷಿ ಕಾಯ್ದೆಗಳ ಬಗ್ಗೆ ಸಂಸದರು ಲೋಕಸಭೆಯಲ್ಲಿ ಏನು ಮಾತನಾಡಿದ್ದಾರೆ ತಿಳಿಸಬೇಕು’ ಎಂದರು.

ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಮುಖಂಡರಾದ ಕೃಷ್ಣೇಗೌಡ, ಎಂ.ಬಿ.ಶ್ರೀನಿವಾಸ್, ಇಂಡುವಾಳು ಚಂದ್ರಶೇಖರ್, ಶಂಭೂನಹಳ್ಳಿ ಕೃಷ್ಣ, ಸಿ.ಕುಮಾರಿ, ಸುಧೀರ್‌ಕುಮಾರ್ ಇದ್ದರು.

********

ಸರ್ಕಾರದ ನಿರ್ಧಾರ ಸ್ವಾಗತಾರ್ಹ

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾಗಿದ್ದು, ಮುಖ್ಯಮಂತ್ರಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದು ಮೈಷುಗರ್‌ ಅಧ್ಯಕ್ಷ ಜೆ.ಶಿವಲಿಂಗೇಗೌಡ ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಶ್ರಮ ಹಾಗೂ ಬಿಜೆಪಿ ಮುಖಂಡರು ಕೂಡ ಕಾರ್ಖಾನೆ ಬಗ್ಗೆ ಹಲವು ಮಾಹಿತಿ ನೀಡುತ್ತಲೇ ಇದ್ದರು. ಜೊತೆಗೆ ಜಿಲ್ಲೆಯ ಸಂಘಟನೆಗಳ ಹೋರಾಟ ಸೇರಿದಂತೆ ಪ್ರಗತಿಪರರ ಮನವಿಯನ್ನು ಆಲಿಸಿದ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಂಡಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ನಡೆಯುವಂತಾಗಿರುವುದು ಜಿಲ್ಲೆಯ ರೈತರಲ್ಲಿ ಸಂತಷ ಮೂಡಿದೆ. ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಅರೆಯುವ ಸಂಬಂಧ ಆಗಬೇಕಿರುವ ಪುನಶ್ಚೇತನ ಹಾಗೂ ಸಿಬ್ಬಂದಿ ಬಗ್ಗೆ ಮಾಹಿತಿ ನೀಡಲಾಗಿದೆ. ನವೆಂಬರ್‌ನಲ್ಲಿ ತಜ್ಞರು ಸಮಿತಿ ವರದಿ ನೀಡಲಿದೆ’ ಎಂದರು. ಮುಖಂಡರಾದ ಹರ್ಷ, ಮಂಜುನಾಥ್, ಜೋಗಿಗೌಡ, ಸಿ.ಟಿ.ಮಂಜುನಾಥ್, ನವನೀತ್‌ಗೌಡ ಇದ್ದರು.

*****

 

ಎಚ್‌ಡಿಕೆ ಶ್ರಮದಿಂದ ಉತ್ತಮ ನಿರ್ಧಾರ

ಮಂಡ್ಯ: ‘ಮೈಷುಗರ್ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಯುವಂತೆ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಒತ್ತಡ ಹಾಕಿದ್ದರು. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರ ಖುಷಿ ತಂದಿದೆ’ ಎಂದು ಶಾಸಕ ಕೆ.ಅನ್ನದಾನಿ ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಅವರೊಟ್ಟಿಗೆ ನಿಯೋಗ ತೆರಳಿ ಮನವಿ ಮಾಡಲಾಗಿತ್ತು, ಅದರಂತೆ ಅವರು ಸರ್ಕಾರಿ ಸ್ವಾಮ್ಯದಲ್ಲಿಯೇ ಕಾರ್ಖಾನೆ ಆರಂಭಿಸುವ ಮಾತು ಕೊಟ್ಟಿದ್ದರು, ಆ ಮಾತನ್ನು ಪ್ರಸ್ತುತ ಮುಖ್ಯಮಂತ್ರಿ ಆದೇಶ ನೀಡುವ ಮೂಲಕ ಉಳಿಸಿಕೊಂಡಿದ್ದಾರೆ,. ಇದರಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹೋರಾಟ, ಜನಪ್ರತಿನಿಧಿಗಳ ಬೆಂಬಲದ ಪ್ರಮುಖ ಪಾತ್ರವಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೈಷುಗರ್ ಸರ್ಕಾರಿ ಸ್ವಾಮ್ಯದಲ್ಲೇ ನಡೆಯಬೇಕೆಂದು ನಾನು ಮಳವಳ್ಳಿಯಿಂದ ಮಂಡ್ಯದವರೆಗೆ ಪಾದಯಾತ್ರೆ ನಡೆಸಿದ್ದೆ. ಇದಕ್ಕೆ ಬೆಂಬಲಿಸಿದ ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರಿಗೆ ಹಾಗೂ ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಳವಳ್ಳಿ, ಶ್ರೀರಂಗಪಟ್ಟಣ, ಮಂಡ್ಯ ಕ್ಷೇತ್ರದ ಜನರಿಗೆ ಧನ್ಯವಾದ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು