ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ ಆವರಣದಲ್ಲಿ ಕಳ್ಳಕಾಕರ ಕಾಟ: ಭದ್ರತಾ ವೈಫಲ್ಯದಿಂದ ಅನೈತಿಕ ಚಟುವಟಿಕೆ

ಭದ್ರತಾ ವೈಫಲ್ಯದಿಂದ ಅನೈತಿಕ ಚಟುವಟಿಕೆ, ಕಾರ್ಮಿಕರೇ ಕಾವಲುಗಾರರು, ನೆಪಕ್ಕಷ್ಟೇ ರಾತ್ರಿಪಾಳಿ
Last Updated 23 ಡಿಸೆಂಬರ್ 2021, 5:49 IST
ಅಕ್ಷರ ಗಾತ್ರ

ಮಂಡ್ಯ: ರೈತರ ನಂಬಿಕೆಯ ಸಂಕೇತವಾಗಿದ್ದ ಮೈಷುಗರ್‌ ಕಾರ್ಖಾನೆ ಆವರಣ ಈಗ ಕಳ್ಳಕಾಕರ ತಾಣವಾಗಿದೆ. ಕಾರ್ಖಾನೆಯ ಭದ್ರತಾ ವ್ಯವಸ್ಥೆ ಸಂಪೂರ್ಣವಾಗಿದ್ದು ವೈಫಲ್ಯ ಕಂಡಿದ್ದು ಆವರಣದಲ್ಲಿರುವ ಬೆಲೆಬಾಳುವ ವಸ್ತುಗಳು ಕಳ್ಳಕಾಕರ ಪಾಲಾಗುತ್ತಿವೆ.

ನಿರಾಣಿ ಗ್ರೂಪ್‌ ಸಿಬ್ಬಂದಿ ಟರ್ಬೈನ್‌ ಕೊಂಡೊಯ್ಯಲು ಮೈಷುಗರ್‌ ಆವರಣವನ್ನು ಅನಧಿಕೃತವಾಗಿ ಪ್ರವೇಶ ಮಾಡಿದ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಕಳ್ಳತನ ಪ್ರಕರಣಗಳು ಬಹಿರಂಗವಾಗಿವೆ. ನಿವೃತ್ತ ಕಾರ್ಮಿಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮೈಷುಗರ್‌ ಕಾರ್ಖಾನೆ ವರ್ಕ್‌ಶಾಪ್‌ನಲ್ಲಿದ್ದ ಬೆಲೆ ಬಾಳುವ ಯಂತ್ರೋಪಕರಣಗಳು, ಲೋಹದ ವಸ್ತುಗಳು ನಾಪತ್ತೆಯಾಗಿರುವ ವಿಚಾರಗಳು ತೆರೆದುಕೊಳ್ಳುತ್ತಿವೆ. ಸುತ್ತಮುತ್ತಲಿನ ನಿವಾಸಿಗಳು, ದಾರಿಹೋಕರ ಸಮ್ಮುಖದಲ್ಲಿ ಬಹಿರಂಗವಾಗಿಯೇ ಕಳ್ಳತನ ನಡೆಯುತ್ತಿದ್ದು ಅಲ್ಲಿ ಹೇಳುವವರು, ಕೇಳೂವವರು ಯಾರೂ ಇಲ್ಲವಾಗಿದ್ದಾರೆ.

ಮೈಷುಗರ್‌ ಕಾರ್ಖಾನೆಯ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಿದ ನಂತರ 30 ಮಂದಿ ಕಾರ್ಮಿಕರು ಉಳಿದಿದ್ದಾರೆ. ಅವರಿಗೇ ಕಾರ್ಖಾನೆ ಭದ್ರತೆಯ ಜವಾಬ್ದಾರಿ ವಹಿಸಲಾಗಿದೆ. ಆದರೆ ಅವರ ನಿರ್ಲಕ್ಷ್ಯದಿಂದಾಗಿ ಕಾರ್ಖಾನೆ ಆವರಣದ ವಸ್ತುಗಳಿಗೆ ಉಳಿಗಾಲವಿಲ್ಲದಂತಾಗಿದೆ. ಹಲವು ಪ್ರಕರಣಗಳಲ್ಲಿ ಕಾರ್ಮಿಕರೇ ಶಾಮೀಲಾಗಿರುವುದು ಅನುಮಾನಾಸ್ಪದವಾಗಿದೆ. ಆ ಭಾಗದಲ್ಲಿ ಪೊಲೀಸ್‌ ಬೀಟ್‌ ವ್ಯವಸ್ಥೆಯೂ ಇಲ್ಲದ ಕಾರಣ ಕಾರ್ಖಾನೆ ಆವರಣ ‘ಹಾಳು ಹಂಪಿ’ಯಂತಾಗಿದೆ.

ರಾತ್ರಿಯ ವೇಳೆಯಲ್ಲಿ ಕಾರ್ಖಾನೆ ಗೇಟ್‌ ಅನಾಥವಾಗಿರುತ್ತದೆ. ಯಾರೇ ಬಂದರೂ ಯಾವುದೇ ಭಯವಿಲ್ಲದೇ ಕಾರ್ಖಾನೆ ಆವರಣ ಪ್ರವೇಶ ಮಾಡಬಹುದಾಗಿದೆ. ಇಡೀ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಹಗಲಿನಲ್ಲಿ ಕಾರ್ಮಿಕರು ಭದ್ರತೆಯಲ್ಲಿರುತ್ತಾರೆ. ಆದರೆ ರಾತ್ರಿಯಲ್ಲಿ ಅಲ್ಲಿ ಯಾರೂ ಇರುವುದಿಲ್ಲ, ರಾತ್ರಿಪಾಳಿ ಎಂಬುದು ಕೇವಲ ನೆಪಕ್ಕೆ ಮಾತ್ರವೇ ಇದೆ. ಕಳ್ಳತನ ಬಹಿರಂಗವಾಗಿಯೇ ನಡೆಯುತ್ತಿದ್ದರೂ ಪೊಲೀಸ್‌ ಠಾಣೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗುತ್ತಿಲ್ಲ.

ಯಂತ್ರೋಪಕರಣಗಳು ಮಾತ್ರವಲ್ಲದೇ ಕಾರ್ಖಾನೆ ಆವರಣದಲ್ಲಿರುವ 250 ತೆಂಗಿನ ಮರದಲ್ಲಿ ಬೀಳುವ ಕಾಯಿ, ಎಳನೀರು ಕೂಡ ಕಳ್ಳಕಾಕರ ಪಾಲಾಗುತ್ತಿವೆ. ಮೊದಲು ತೆಂಗಿನ ಕಾಯಿಯನ್ನು ಟೆಂಡರ್‌ ಮೂಲಕ ಹರಾಜು ಹಾಕಲಾಗುತ್ತಿತ್ತು. ಈಗ ಅದೂ ಇಲ್ಲದ ಕಾರಣ ಅವು ಕಳ್ಳರ ಜೇಬು ತುಂಬಿಸುತ್ತಿವೆ. ಕಳ್ಳತನಕ್ಕೆ ಕಾರ್ಮಿಕರ ಬೆಂಬಲವಿದೆ ಎಂಬ ಆರೋಪ ಇದೆ.

‘ಕಾರ್ಖಾನೆಯ ಹೊರಗೆ ಒಬ್ಬರು ವಾಹನ ನಿಲ್ಲಿಸಿಕೊಂಡಿರುತ್ತಾರೆ. ಕೆಲವರು ಕಾರ್ಖಾನೆ ಒಳಗೆ ತೆರಳಿ ಯಂತ್ರೋಪಕರಣಗಳನ್ನು ತರುತ್ತಾರೆ. ನಂತರ ಗಾಡಿಯಲ್ಲಿ ಹಾಕಿಕೊಂಡು ತೆರಳುತ್ತಾರೆ, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಭದ್ರತಾ ಸಿಬ್ಬಂದಿಯ ನೆರವಿನಿಂದಲೇ ಕಳ್ಳತನವಾಗುತ್ತಿದೆ. ನಮಗೆ ಇನ್ನೂ ನಿವೃತ್ತಿ ಸೌಲಭ್ಯಗಳು ಬರಬೇಕು, ಕೇಸ್‌ ಕೊಡಲೂ ಆಗದ ಸ್ಥಿತಿಯಲ್ಲಿದ್ದೇವೆ, ಕಂಡರೂ ಕಾಣದಂತಿದ್ದೇವೆ’ ಎಂದು ಸ್ವಯಂ ನಿವೃತ್ತಿ ಪಡೆದಿರುವ ಕಾರ್ಮಿಕರೊಬ್ಬರು ನೋವು ವ್ಯಕ್ತಪಡಿಸಿದರು.

ಮಾಜಿ ಸೈನಿಕರೊಬ್ಬರನ್ನು ಕಾರ್ಖಾನೆಯ ಭದ್ರತಾ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಅವರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆದರೆ ಅವರ ಮಾತುಗಳನ್ನು ಕಾರ್ಖಾನೆಯ ಇತರ ಭದ್ರತಾ ಕಾರ್ಮಿಕರು ಕೇಳುತ್ತಿಲ್ಲ. ಕಾರ್ಖಾನೆ ಆವರಣದಲ್ಲಿ ನಡೆಯುತ್ತಿರುವ ಕಳ್ಳತನಗಳ ಬಗ್ಗೆ ಅವರು ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಅವರು ತಮ್ಮನ್ನು ಬಿಡುಗಡೆ ಮಾಡುವಂತೆಯೂ ಮನವಿ ಮಾಡಿದ್ದಾರೆ. ಆದರೆ ವ್ಯವಸ್ಥಾಪಕ ನಿರ್ದೇಶಕ ಅವರ ಮಾತು ಕೇಳಿಸಿಕೊಳ್ಳುತ್ತಿಲ್ಲ.

‘ಗೋಪಾಲಕೃಷ್ಣ ಅವರು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕೊಂಡು 2 ತಿಂಗಳಾಗಿವೆ. ಒಮ್ಮೆಯೂ ಅವರು ಕಾರ್ಖಾನೆಗೆ ಭೇಟಿ ನೀಡಿಲ್ಲ. ಹೆಚ್ಚುವರಿಯಾಗಿ ನೇಮಕಗೊಂಡಿರುವ ಕಾರಣ ಅವರು ಮೈಷುಗರ್‌ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದು ನಿವೃತ್ತ ಕಾರ್ಮಿಕರು ಹೇಳುತ್ತಾರೆ.

ತಾಂತ್ರಿಕ ಎಂಜಿನಿಯರ್‌ ವಜಾ

ನಿರಾಣಿ ಗ್ರೂಪ್‌ನಿಂದ ಸಿಬ್ಬಂದಿಯನ್ನು ಕರೆತಂದಿದ್ದ ಮೈಷುಗರ್‌ ತಾಂತ್ರಿಕ ಮುಖ್ಯ ಎಂಜಿನಿಯರ್‌ ಪ್ರಕಾಶ್‌ ಬಾಬು ಅವರನ್ನು ಕಾರ್ಖಾನೆ ಅಧ್ಯಕ್ಷರಾದ ಶಿವಲಿಂಗೇಗೌಡ ಅವರನ್ನು ವಜಾ ಮಾಡಿದ್ದಾರೆ. ಜೊತೆಗೆ ಭದ್ರತಾ ಸಿಬ್ಬಂದಿಗೆ ಷೋಕಾಸ್‌ ನೋಟಿಸ್‌ ನೀಡಿದ್ದಾರೆ.

ನಿರಾಣಿ ಗ್ರೂಪ್‌ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಇಲ್ಲಿಯವರೆಗೆ ಎಫ್‌ಐಆರ್‌ ದಾಖಲಾಗಿಲ್ಲ. ಈಗಲೂ ಪೊಲೀಸರು ಮಹಜರು ಮಾಡುತ್ತಾ ಕಾಲ ಕಳೆಯುತ್ತಿರುವುದು ಅನುಮಾನಾಸ್ಪದವಾಗಿದೆ. ಕೂಡಲೇ ಆರೋಪಿಗಳ ವಿರುದ್ಧ ಎಫ್‌ಐಆರ್‌ ಹಾಕಿ ಅವರನ್ನು ಬಂಧಿಸಬೇಕು ಎಂದು ರೈತ ಹೋರಾಟಗಾರರು ಒತ್ತಾಯಿಸಿದರು.

ಸ್ಮಶಾನ ಕಾಯುತ್ತಿದ್ದೇನೆ: ಅಧ್ಯಕ್ಷ

‘ನಾನು ಅಕ್ಷರಶಃ ಸ್ಮಶಾನ ಕಾಯುತ್ತಿದ್ದೇನೆ. ಕಾರ್ಖಾನೆ ಸಮೃದ್ಧವಾಗಿ ನಡೆಯುತ್ತಿದ್ದ ಕಾಲದಲ್ಲಿ ಎಲ್ಲರೂ ತಿಂದು, ತೇಗಿ ಹೋಗಿದ್ದಾರೆ. ಕಾರ್ಖಾನೆ ಸ್ಮಶಾನವಾಗಿರುವ ಕಾಲದಲ್ಲಿ ನಾನು ಅಧ್ಯಕ್ಷನಾಗಿದ್ದೇನೆ. ನಾನು ಈಗಲೂ ಬಿಪಿಎಸ್‌ (ಬಡತನ ರೇಖೆಗಿಂತ ಕೆಳಗೆ) ಸ್ಥಿತಿಯಲ್ಲಿದ್ದೇನೆ. ನಮ್ಮ ಪಕ್ಷ (ಬಿಜೆಪಿ) ಕೊಟ್ಟ ಜವಾಬ್ದಾರಿಯನ್ನು ಬದ್ಧತೆಯಿಂದ ನಿರ್ವಹಿಸುತ್ತಿದ್ದೇನೆ’ ಎಂದು ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

‘ಸದ್ಯ ನಾವು ಕಾರ್ಖಾನೆ ಒಳಗಿನ ಭದ್ರತೆಗೆ ಹೆಚ್ಚು ಒತ್ತು ನೀಡಿದ್ದೇವೆ. ಹೊರಗಿನ ಭದ್ರತೆಗೆ ಪೊಲೀಸರು ಗಮನ ಹರಿಸಬೇಕು. ಈ ಬಗ್ಗೆ ಕೇಂದ್ರ ಪೊಲೀಸ್‌ ಠಾಣೆಗೆ ಮನವಿ ಮಾಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT