ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌: ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯ

ಕಾರ್ಖಾನೆ ಆರಂಭದ ಸಿದ್ಧತೆ ಇಲ್ಲ, ಸಂಸದೆ, ಶಾಸಕರ ವಿರುದ್ಧ ರೈತ ಮುಖಂಡರ ಆಕ್ರೋಶ
Last Updated 13 ಫೆಬ್ರುವರಿ 2022, 11:46 IST
ಅಕ್ಷರ ಗಾತ್ರ

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ಯಾವಾಗ ಆರಂಭವಾಗುತ್ತದೆ ಎಂದು ರೈತರು ಕಾದು ಕುಳಿತಿದ್ದಾರೆ. ಆದರೆ ಜಿಲ್ಲೆಯ ಜನಪ್ರತಿನಿಧಿಗಳು ಈ ಕುರಿತು ಯಾವುದೇ ಉತ್ತರ ನೀಡುತ್ತಿಲ್ಲ. ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಒಂದು ಸಭೆ ನಡೆಸಲೂ ಸಾಧ್ಯವಾಗಿಲ್ಲ’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಮ್‌ ವಾಗ್ದಾಳಿ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ಮೈಷುಗರ್‌ ಕಾರ್ಖಾನೆ ಬಳಿ ಹೋರಾಟಗಳನ್ನು ಮಾಡಿದ್ದೇವೆ. ಸಚಿವ ಕೆ.ಸಿ.ನಾರಾಯಣಗೌಡ ಅವರ ಜೊತೆಯಲ್ಲೂ ಮಾತನಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಕಾರ್ಖಾನೆ ಆರಂಭದ ಕುರಿತು ಯಾವುದೇ ಮುನ್ಸೂಚನೆ ಇಲ್ಲ, ಆರಂಭಿಕ ಚಟುವಟಿಕೆಗಳೂ ನಡೆಯುತ್ತಿಲ್ಲ’ ಎಂದರು.

‘ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ ಪ್ರಸಾದ್‌ ಅವರು ಈಗ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಅವರ ಮೂಲಕವೂ ಮುಖ್ಯಮಂತ್ರಿ ಅವರ ಬಳಿ ಫೋನ್‌ನಲ್ಲಿ ಸಂಪರ್ಕಿಸಿದಾಗ, ಅವರು ಆತಂಕ ಪಡಬೇಡಿ ಕಾರ್ಖಾನೆ ಆರಂಭವಾಗುತ್ತದೆ ಎಂದಿದ್ದಾರೆ. ಆದರೆ ಅದು ಭರವಸೆ ಆಗಿಯೇ ಉಳಿದಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಸಂಸತ್‌ ಸದಸ್ಯರು ಕಲ್ಲು ಎಸೆದು ಹೋಗುವ ಕೆಲಸ ಮಾಡುತ್ತಿದ್ದಾರೆ. ಅವರು ನೇರವಾಗಿ ರೈತರ ಜೊತೆ ಮಾತನಾಡುತ್ತಿಲ್ಲ. ಜಿಲ್ಲಾಧಿಕಾರಿ ಕೂಡ ಇಲ್ಲಿಯವರೆಗೆ ಮೈಷುಗರ್‌ ಆರಂಭದ ಕುರಿತು ಯಾವುದೇ ಸಭೆ ನಡೆಸಿಲ್ಲ. ಎಲ್ಲಾ ಏಳು ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಕಾರ್ಖಾನೆ ಆರಂಭವಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ’ ಎಂದರು.

‘ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರ ಗಮನಕ್ಕೂ ಮೈಷುಗರ್ ಆರಂಭದ ಕುರಿತು ವಿಷಯ ಪ್ರಸ್ತಾಪಿಸಲಾಗಿದೆ. ಮೈಷುಗರ್ ಕಾರ್ಖಾನೆ ಅಧ್ಯಕ್ಷರನ್ನು ಕೇಳಿದರೆ ಅವರು ಅವರ ಕಷ್ಟಗಳನ್ನೇ ಹೇಳುತ್ತಾರೆ. ಕಾರ್ಖಾನೆ ಆರಂಭದ ಬಗ್ಗೆ ಮಾತನಾಡುತ್ತಿಲ್ಲ. ಸಕ್ಕರೆ ಸಚಿವರ ಜೊತೆಯೂ ಮಾತನಾಡಲಾಗಿದೆ. ಸಭೆ ನಡೆಸುವ ಕುರಿತಂತೆ ಸರ್ಕಾರದ ಆದೇಶವಿದ್ದರೂ ಕೂಡ ಸಭೆ ನಡೆಸದೇ ನಿರ್ಲಕ್ಷ್ಯತನ ತೋರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ಮೈಷುಗರ್ ಕಾರ್ಖಾನೆ ಆರಂಭಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಮುಂದಿನ ಹಂಗಾಮಿನಲ್ಲಿ ಕಾರ್ಖಾನೆ ಆರಂಭಿಸುವ ಬಗ್ಗೆ ಸರ್ಕಾರ ಹೇಳುತ್ತಿದೆ. ಆದರೆ, ಕಾರ್ಖಾನೆ ಆರಂಭದ ಬಗ್ಗೆ ಸಿದ್ಧತೆ ನಡೆಯುತ್ತಿಲ್ಲ. ಸದನದಲ್ಲಿಯೂ ಕೂಡ ಮೈಷುಗರ್‌ ವಿಚಾರದ ಗಮನ ಸೆಳೆಯುತ್ತೇನೆ. ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಕುಳಿತರೆ ಜನರು ನಮ್ಮನ್ನು ಬಿಡುವುದಿಲ್ಲ, ರೈತರಿಗೆ ನಷ್ಟವಾಗಲು ನಾವು ಬಿಡುವುದಿಲ್ಲ, ಕೂಡಲೇ ಕಾರ್ಖಾನೆ ಆರಂಭಿಸಲು ಸದನದ ಒಳಗೆ ಮತ್ತು ಹೊರಗೆ ಹೋರಾಟ ಹೋರಾಟ ನಡೆಸಲಾಗುವುದು’ ಎಂದರು.

ನಿರ್ಣಯಗಳು: ಒಂದು ವಾರದೊಳಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಭೆ ನಡೆಸಬೇಕು, ಕಾರ್ಖಾನೆ ಪ್ರಾರಂಭಿಸುವ ಕುರಿತು ಕೊಟ್ಟಮಾತನ್ನು ಮುಖ್ಯಮಂತ್ರಿಗಳು ಉಳಿಸಿಕೊಳ್ಳಬೇಕು. ಅನುಷ್ಠಾನ ವಿಳಂಬವಾದರೆ, ಕೂಡಲೇ ಸಭೆ ಸೇರಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಸಲಾಗುವುದು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಸಮಿತಿಯ ಕಾರ್ಯದರ್ಶಿ ಕೆ.ಬೋರಯ್ಯ, ಮುಖಂಡರಾದ ತಗ್ಗಹಳ್ಳಿ ವೆಂಕಟೇಶ್, ಇಂಡುವಾಳು ಚಂದ್ರಶೇಖರ್, ಸಿ.ಕುಮಾರಿ, ಮುದ್ದೇಗೌಡ, ಮಂಜುನಾಥ್‌, ಭರತ್‌ರಾಜ್‌, ಟಿ.ಯಶವಂತ, ಕೃಷ್ಣ, ಸಾತನೂರು ವೇಣುಗೋಪಾಲ್‌, ನಾಗಣ್ಣ ಬಾಣಸವಾಡಿ, ಹುಲ್ಕೆರೆ ಮಹದೇವು, ಹುಲಿವಾನ ಕಾಳೇಗೌಡ, ಸುಶೀಲಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT