ಗುರುವಾರ , ಅಕ್ಟೋಬರ್ 22, 2020
22 °C
ಬೆಂಗಳೂರು– ಮಂಗಳೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ

ನಾಗಮಂಗಲ: ಭೂಸ್ವಾಧೀನಕ್ಕೆ ರೈತರ ತೀವ್ರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ತಾಲ್ಲೂಕಿನ ಕಾಳಿಂಗನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಹಟ್ನ ,ಬಿಳಗುಂದ, ಗರುಡನಹಳ್ಳಿ, ಗೊಲ್ಲರಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ವಶಪಡಿಸಿಕೊಂಡಿರುವ ಭೂಮಿಯನ್ನು ಸ್ವಾಧೀನದಿಂದ ಕೈ ಬಿಡುವಂತೆ ರೈತಸಂಘ ಮತ್ತು ಗ್ರಾಮಸ್ಥರು ಹೆದ್ದಾರಿ ಬಂದ್ ಮಾಡಿ ಗುರುವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಬೆಳ್ಳೂರು ಹೋಬಳಿಯ ಕಾಳಿಂಗನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ 1,200ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಫವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡಿರುವ ಕ್ರಮ ಖಂಡನೀಯ ಎಂದು  ರಾಜ್ಯ ರೈತಸಂಘ, ಹಸಿರು ಸೇನೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ, ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಘೋಷಣೆ ಕೂಗಿದರು.

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರ ಒಪ್ಪಿಗೆ ಪಡೆಯದೆ ಅವರ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ರಾಜ್ಯ ಸರ್ಕಾರ ಸ್ಥಳೀಯ ರೈತರ ಒಪ್ಪಿಗೆಯನ್ನು ಪಡೆಯದೇ ಭೂಮಿಯನ್ನು ವಶಪಡಿಸಿಕೊಳ್ಳಲು‌ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಜೊತೆಗೆ ‌ಕೈಗಾರಿಕಾ ಸಚಿವರು ಈ ಪ್ರದೇಶದಲ್ಲಿ ಮತ್ತೆ ತಿದ್ದುಪಡಿ, ಬದಲಾವಣೆಗಳನ್ನು ಮಾಡದೇ ನೇರವಾಗಿ ಸ್ವಾಧೀನಪಡಿಸಿಕೊಂಡಿರುವ ಸಂಪೂರ್ಣ ಭೂಮಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ರೈತರೊಂದಿಗೆ ಸರ್ಕಾರ ಸಮಾಲೋಚನೆ ಮಾಡಿದ ನಂತರವಷ್ಟೇ ಸ್ವಾಧೀನಕ್ಕೆ ಅವಕಾಶ. ಎಲ್ಲೋ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕುಳಿತು ಭೂಪ್ರದೇಶದ ಸ್ವಾಧೀನಕ್ಕೆ ಅಧಿಸೂಚನೆ ಮಾಡುವ ಕಾಲ ಹೋಗಿದೆ. ಈಗ ಏನಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಸಾಧಕ– ಬಾಧಕಗಳನ್ನು ಮೊದಲು ಪರಿಶೀಲಿಸಿ ಅನಂತರ ಕ್ರಮ ಕೈಗೊಳ್ಳಬೇಕು. ಸರ್ಕಾರ ಏನಾದರೂ ಸಂಘರ್ಷಕ್ಕೆ ಇಳಿಯುವುದಾದರೆ ನಾವು ಕೂಡ ತಯಾರಾಗಿದ್ದೇವೆ ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡೋಣ ಎಂದರು.

ಅಲ್ಲದೇ ಗ್ರಾಮಸ್ಥರು, ರೈತಸಂಘದ ಸದಸ್ಯರು, ಮಹಿಳೆಯರು, ಮಕ್ಕಳು , ಗ್ರಾಮಗಳ ಮುಖಂಡರು ಸೇರಿದಂತೆ ಸಾವಿರಾರು ಜನರು ಬೆಳಗುಂದ ಗ್ರಾಮದಿಂದ ಪ್ರಾರಂಭಿಸಿ ಹಟ್ನ ಗೇಟ್ ವರೆಗೆ 8 ಕಿ.ಮೀ ದೂರ ಮೆರವಣಿಗೆ ನಡೆಸಿದರು. ಹಸಿರು ಶಾಲುಗಳನ್ನು ಮೇಲೆತ್ತಿ ತಿರುಗಿಸುತ್ತಾ ರಾಜ್ಯ ಸರ್ಕಾರ ಮತ್ತು ಕೈಗಾರಿಕಾ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸುಮಾರು ಎರಡು ಗಂಟೆಗೂ ಅಧಿಕ ಸಮಯ ಬೆಂಗಳೂರು‌– ಮಂಗಳೂರು ಹೆದ್ದಾರಿಯನ್ನು ಪ್ರತಿಭಟನಾಕಾರರು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿ ತಡೆ ನಡೆಸಿದ್ದರಿಂದ ಹೆದ್ದಾರಿಯ ಎರಡು ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ‌ಕಂಡುಬಂತು. ಜೊತೆಗೆ ಹೆದ್ದಾರಿ ಬಂದ್ ಮಾಡಿದ್ದರಿಂದ ಬೆಂಗಳೂರಿನ ಕಡೆಗೆ ಹೋಗುವ ವಾಹನಗಳು ಭೈರಸಂದ್ರ ಗ್ರಾಮ ಮೂಲಕ‌ ಹಾದು ಹೋದವು. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಪೊಲೀಸರು ಹರಸಾಹಸ ಪಟ್ಟರು.

ಪ್ರತಿಭಟನೆಯ ಸ್ಥಳಕ್ಕೆ ಬಂದ ತಹಶೀಲ್ದಾರ್ ಕುಂಞಿ ಅಹಮದ್ ಅವರು ಜಿಲ್ಲಾಧಿಕಾರಿ ಅವರು ಕೋವಿಡ್ ನಿಯಂತ್ರಣ ಕ್ರಮ ಕುರಿತ ಸಭೆಯಲ್ಲಿ ಭಾಗಿಯಾಗಿದ್ದು, ಒಂದು ವಾರದೊಳಗೆ ರೈತ ಮುಖಂಡರು ಮತ್ತು ಗ್ರಾಮಸ್ಥರ ಸಭೆ ಕರೆದು ಚರ್ಚಿಸುವ ಬಗ್ಗೆ ತಿಳಿಸಿದ್ದಾರೆ ಎಂದು ಮಾಹಿತಿ ನಿಡಿದರು. ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ಸುರೇಶ್, ರಮೇಶ್, ರಜನಿ, ವಾಸು,ಮುಕುಂದಣ್ಣ, ಮಹೇಶ್,ಎಲ್.ಐ.ಸಿ ಗೌಡ, ಶಿವಕುಮಾರ್, ಬಸವರಾಜು ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.