ಭಾನುವಾರ, ಡಿಸೆಂಬರ್ 8, 2019
21 °C

ನನ್ನ ಪತ್ನಿ ಟಿಕೆಟ್‌ ಆಕಾಂಕ್ಷಿಯಲ್ಲ: ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಕ್ಕೇರಿ: ‘ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಸ್ವ‌ಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅಂದಿನ ಸ್ಪೀಕರ್ ರಮೇಶ್‌ಕುಮಾರ್ ನಮ್ಮನ್ನು ಅನರ್ಹಗೊಳಿಸಿದ್ದರು. ಸುಪ್ರೀಂ ಕೋರ್ಟ್‌ ತೀರ್ಪು ನಮ್ಮ ಪರವಾಗಿ ಬರಲಿದೆ ಎಂಬ ವಿಶ್ವಾಸವಿದೆ’ ಎಂದು ಅನರ್ಹ ಶಾಸಕ ಕೆ.ಸಿ. ನಾರಾಯಣಗೌಡ ಹೇಳಿದರು.

ಹೋಬಳಿಯ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಸಾಸಲು ಗ್ರಾಮದ ಸೋಮೇಶ್ವರ, ಶಂಭುಲಿಂಗೇಶ್ವರ, ನಾಗಬನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಜೆಡಿ‌ಎಸ್ ಪಕ್ಷದ ಮೈತ್ರಿ ಸರ್ಕಾರವಿದ್ದರೂ ಅನುದಾನ ತರಲು ಜೆಡಿ‌ಎಸ್ ಶಾಸಕನಾಗಿ ಹೋರಾಟ ಮಾಡಿದೆ. ಆದರೆ, ಎಚ್.ಡಿ.ರೇವಣ್ಣ ಅನುದಾನವನ್ನು ಹೊಳೆನರಸೀಪುರಕ್ಕೆ ಕಿತ್ತುಕೊಂಡು ಹೋದರು.
ತಾಲ್ಲೂಕಿನ ಅಭಿವೃದ್ಧಿಯನ್ನು ಮಾಡಲಾಗದ ಮೇಲೆ ಶಾಸಕನಾಗಿದ್ದು ಪ್ರಯೋಜನವಿಲ್ಲ ಎಂದು ರಾಜೀನಾಮೆ ನೀಡಿದೆ. ₹1 ಸಾವಿರ ಕೋಟಿ ಅನುದಾನ ನೀಡುವ ಭರವಸೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಿಜೆಪಿ ಸೇರಲಿದ್ದೇನೆ’ ಎಂದು ಅವರು ಹೇಳಿದರು.

‘ನನ್ನ ಪತ್ನಿ ದೇವಕಿ ಉಪ ಚುನಾವಣೆಯ ಆಕಾಂಕ್ಷಿಯಲ್ಲ. ನಾನು ಉಪಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ. ನ್ಯಾಯಾಲಯದ ತೀರ್ಪಿಗೆ ಕಾಯುತ್ತಿದ್ದೇನೆ’ ಎಂದು ಹೇಳಿದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್‌ಮುಲ್ ನಿರ್ದೇಶಕ ಕೆ.ಜಿ. ತಮ್ಮಣ್ಣ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು