ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

600 ಜನರ ಜೀವ ಉಳಿಸಿದ ಸ್ವಾಮಣ್ಣ

30 ವರ್ಷಗಳಿಂದ ಗಿಡಮೂಲಿಕೆಗಳ ಔಷಧಿ ನೀಡುತ್ತಿರುವ ನಾಟಿ ವೈದ್ಯ
Last Updated 25 ಏಪ್ರಿಲ್ 2019, 20:35 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ದಸರಗುಪ್ಪೆ ಗ್ರಾಮದ ಸ್ವಾಮಣ್ಣ ಎಂಬಿಬಿಎಸ್ ಓದಿದವರಲ್ಲ. ಶಾಲೆಯ ಮೆಟ್ಟಿಲು ಹತ್ತದ ಇವರು ವಿಷದ ಹಾವು ಕಚ್ಚಿ ಸಾವಿನ ದವಡೆಗೆ ಸಿಲುಕಿದ್ದ 600ಕ್ಕೂ ಹೆಚ್ಚು ಮಂದಿಯ ಜೀವ ಉಳಿಸಿದ್ದಾರೆ!

ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೂ ಆಗಿರುವ ಸ್ವಾಮಣ್ಣ ಅವರ ಬಳಿಗೆ ವಾರದಲ್ಲಿ ಹಾವು ಕಚ್ಚಿಸಿಕೊಂಡ ಮೂರ್ನಾಲ್ಕು ಮಂದಿ ಬರುತ್ತಾರೆ. ಅರ್ಧ ರಾತ್ರಿಯಲ್ಲಿ ಬಂದವರಿಗೂ ಚಿಕಿತ್ಸೆ ನೀಡಿ, ವಿಷ ಕಕ್ಕಿಸಿ ಜೀವ ಉಳಿಸಿದ್ದಾರೆ. ಸುತ್ತಮುತ್ತಲ ಹಳ್ಳಿಗಳ ಜನರು ಮಾತ್ರವಲ್ಲದೆ ಹಾಸನ, ಕೆ.ಆರ್‌.ಪೇಟೆ, ನಾಗಮಂಗಲ ಸೇರಿದಂತೆ ವಿವಿಧ ಕಡೆಗಳಿಂದಲೂ ಹಾವು ಕಚ್ಚಿಸಿಕೊಂಡವರು ಸ್ವಾಮಣ್ಣ ಅವರ ಬಳಿ ಚಿಕಿತ್ಸೆ ಪಡೆದಿದ್ದಾರೆ. ಇವರ ಬಳಿ ಚಿಕಿತ್ಸೆ ಪಡೆದಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದು ಗಮನಾರ್ಹ ಸಂಗತಿ.

ವಿಷ ಜಂತು ಕಚ್ಚಿದವರಿಗೆ ಚಿಕಿತ್ಸೆ ನೀಡುವ ಕಾಯಕ ತಂದೆ ದಾಸಪ್ಪ ಅವರಿಂದ ಬಳುವಳಿಯಾಗಿ ಬಂದಿದೆ. ಕಳೆದ 30 ವರ್ಷಗಳಿಂದ ಹಾವು ಕಚ್ಚಿ ವಿಷ ಏರಿದವರಿಗೆ ಸ್ವಾಮಣ್ಣ ಚಿಕಿತ್ಸೆ ಕೊಡುತ್ತಿದ್ದಾರೆ. ಅವರು ಮನೆಯಲ್ಲಿ ಇಲ್ಲದಿದ್ದಾಗ ಪತ್ನಿ ದೇವಮ್ಮ ಅಥವಾ ಪುತ್ರ ಎಸ್.ಹರೀಶ್ ಚಿಕಿತ್ಸೆ ನೀಡುತ್ತಾರೆ. ಚಿಕಿತ್ಸೆಗೆ ಬೇಕಾದ ಗಿಡಮೂಲಿಕೆಗಳನ್ನು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಕಾಡಿನಿಂದ ತರುತ್ತಾರೆ.

ಚಿಕಿತ್ಸೆ ವಿಧಾನ: ಹಾವು ಕಚ್ಚಿಸಿಕೊಂಡವರನ್ನು ಕೂರಿಸಿ ಯಾವ ಬಗೆಯ ಹಾವು ಕಚ್ಚಿದೆ, ದೇಹಕ್ಕೆ ವಿಷ ಏರಿದೆಯೇ, ರೋಗಿಯ ಸ್ಥಿತಿ ಹೇಗಿದೆ ಎಂಬುದನ್ನು ಸೂಜಿಯಿಂದ ಚುಚ್ಚಿ ರಕ್ತದ ಬಣ್ಣ ಪರೀಕ್ಷಿಸುತ್ತಾರೆ. ವಿಷದ ಹಾವು ಕಚ್ಚಿರುವುದು ಖಾತರಿಯಾದರೆ ತಕ್ಷಣ ಮಜ್ಜಿಗೆ ಜತೆಗೆ ಗಿಡಮೂಲಿಕೆ ಔಷಧ ಕುಡಿಸುತ್ತಾರೆ. ದೇಹಕ್ಕೆ ವಿಷ ಏರಿದ್ದರೆ ವ್ಯಕ್ತಿಗೆ ವಾಂತಿ ಶುರುವಾಗುತ್ತದೆ. ಅಂತಹ ವ್ಯಕ್ತಿಯನ್ನು ಮೂರು ತಾಸು ಮನೆಯಲ್ಲೇ ಇರಿಸಿಕೊಂಡು ದ್ರವಾಹಾರ ಕೊಟ್ಟು ಉಪಚರಿಸುತ್ತಾರೆ. ಅಪಾಯ ಇಲ್ಲ ಎಂಬುದು ಖಚಿತವಾದ
ಬಳಿಕ ಆಹಾರದ ಪಥ್ಯ ಹೇಳಿ ಕಳುಹಿಸುತ್ತಾರೆ.

ಹಾವು ಕಚ್ಚಿದರೆ ದೇಹಕ್ಕೆ ವಿಷ ಏರದಂತೆ ಅದು ಕಚ್ಚಿದ ಮೇಲ್ಭಾಗದಲ್ಲಿ ದಾರದಿಂದ ಬಿಗಿಯಾಗಿ ಕಟ್ಟಬೇಕು. ನಾಗರಹಾವು ಕಚ್ಚಿದರೆ ಹಲ್ಲು ಇಳಿದ ಜಾಗವನ್ನು ಕೊಯ್ದು ರಕ್ತ ಸುರಿಸಬೇಕು. ಮಂಡಲದ ಹಾವು ಕಚ್ಚಿದರೆ ಲೋಹದಿಂದ ಗಾಯ ಆಗದಂತೆ ಎಚ್ಚರ ವಹಿಸಬೇಕು. ನಾಗರಹಾವು ಕಚ್ಚಿದರೆ 30 ನಿಮಿಷಗಳ ಒಳಗೆ, ಮಂಡಲದ ಹಾವು ಕಚ್ಚಿದರೆ 3 ತಾಸಿನ ಒಳಗೆ ಕರೆತರಬೇಕು ಎಂದು ಸ್ವಾಮಣ್ಣ ಹೇಳುತ್ತಾರೆ. ಅವರ ಸಂಪರ್ಕ ಸಂಖ್ಯೆ: 9901479790.

ಚಿಕಿತ್ಸೆಗೆ ಹಣ ಕೇಳುವುದಿಲ್ಲ

ಹಾವು ಕಚ್ಚಿಸಿಕೊಂಡು ಯಾರೇ ಬಂದರೂ ಜಾತಿ, ಧರ್ಮ, ಮತವನ್ನು ಕೇಳದೆ ಉಚಿತ ಚಿಕಿತ್ಸೆ ನೀಡುತ್ತಾರೆ. ಕೂಲಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದರೂ ಸ್ವಾಮಣ್ಣ ತಾವು ನೀಡುವ ಚಿಕಿತ್ಸೆಗೆ ಹಣ ಕೇಳುವುದಿಲ್ಲ. ಸಾಕಷ್ಟು ಮಂದಿಗೆ ತಮ್ಮ ಹಣದಿಂದಲೇ ದ್ರವಾಹಾರ ಕೊಟ್ಟಿದ್ದಾರೆ. ಎಂತಹ ಘಟ ಸರ್ಪವಾದರೂ ಅದನ್ನು ಹಿಡಿದು ಕಾಡಿಗೆ ಬಿಡುತ್ತಾರೆ.

‘ಹಾವು ಸುಮ್ಮನೆ ಕಚ್ಚುವುದಿಲ್ಲ. ತನಗೆ ಅಪಾಯ ಎದುರಾದರೆ ಮಾತ್ರ ಕಚ್ಚುತ್ತದೆ. ತೋಟ, ತುಡಿಕೆಗಳಲ್ಲಿ ಇಲಿಗಳನ್ನು ತಿಂದು ರೈತನಿಗೆ ಅನುಕೂಲ ಮಾಡಿಕೊಡುವ ಹಾವನ್ನು ಕೊಲ್ಲಬಾರದು. ಹಾವು ಕಂಡ ಕೂಡಲೇ ಹೇಳಿದರೆ ಅದನ್ನು ಹಿಡಿಯುತ್ತೇನೆ. ಹಾವು ಕಚ್ಚಿದರೆ ತಕ್ಷಣ ಕರೆ ಮಾಡುವುದು ಒಳಿತು’ ಎನ್ನುತ್ತಾರೆ ಸ್ವಾಮಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT