ಗುರುವಾರ , ಜುಲೈ 29, 2021
23 °C
ಹೊಸದಾಗಿ ಮೂವರಿಗೆ ರೋಗಪತ್ತೆ, ಆಸ್ಪತ್ರೆಯಿಂದ 10 ಮಂದಿ ಬಿಡುಗಡೆ

ಮಂಡ್ಯ: 333ಕ್ಕೆ ಏರಿಕೆಯಾದ ಕೋವಿಡ್‌ ರೋಗಿಗಳ ಸಂಖ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Coronavirus

ಮಂಡ್ಯ: ಹೊಸದಾಗಿ ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್‌–19 ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.

ಮೂರು ಮಂದಿಯಲ್ಲಿ ಇಬ್ಬರು ನಾಗಮಂಗಲ ತಾಲ್ಲೂಕಿಗೆ ಸೇರಿದ್ದು ಒಬ್ಬರು ಪಾಂಡವಪುರ ತಾಲ್ಲೂಕಿನವರಾಗಿದ್ದಾರೆ. ಇಬ್ಬರು ಮುಂಬೈನಿಂದ ಬಂದಿದ್ದರೆ ಒಬ್ಬರು ಗುಜರಾತ್‌ ರಾಜ್ಯದಿಂದ ಹಿಂದಿರುಗಿದವರಾಗಿದ್ದಾರೆ. ಇಬ್ಬರು ಪುರಷರಾಗಿದ್ದು ಒಬ್ಬರು ಮಹಿಳೆಯಾಗಿದ್ದಾರೆ. ಮೂವರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ.

‘ಕ್ವಾರಂಟೈನ್‌ನಲ್ಲಿ ಇರುವ ಬಹುತೇಕ ಮಂದಿ 14 ದಿನ ಅವಧಿ ಪೂರೈಸುತ್ತಿದ್ದಾರೆ. ಅವರನ್ನು ಮೂರು ಬಾರಿ ಕೋವಿಡ್‌ ಪರೀಕ್ಷೆಗೆ ಒಳಪಡಿಸಿ ಮನೆಗೆ ಕಳುಹಿಸಲಾಗುತ್ತಿದೆ. ಅಂತಿಮ ಹಂತದ ಪರೀಕ್ಷೆ ವೇಳೆ ಅವರಿಗೆ ಕೆಲವರಲ್ಲಿ ಕೋವಿಡ್‌ ಪತ್ತೆಯಾಗುತ್ತಿದೆ. ಅಂತರ ರಾಜ್ಯಗಳಿಂದ ವಲಸಿಗರು ಬರುತ್ತಿಲ್ಲವಾದ್ದರಿಂದ ಇನ್ನುಮುಂದೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಲಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

10 ಮಂದಿ ಬಿಡುಗಡೆ: ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾದ 10 ಮಂದಿಯನ್ನು ಶನಿವಾರ ಮನೆಗೆ ಕಳುಹಿಸಲಾಯಿತು. ಅವರಲ್ಲಿ 9 ಮಂದಿ ಕೆ.ಆರ್‌.ಪೇಟೆ, ಒಬ್ಬರು ನಾಗಮಂಗಲ ತಾಲ್ಲೂಕಿಗೆ ಸೇರಿದವರಾಗಿದ್ದಾರೆ. ವೈದ್ಯಕೀಯ ಪ್ರಮಾಣ ಪತ್ರ ಪಡೆದ ಅವರಿಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಬೀಳ್ಕೊಡುಗೆ ನೀಡಿದರು.

ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. 151 ಸಕ್ರಿಯ ಪ್ರಕರಣಗಳಿವೆ. ಕಳೆದ 15 ದಿನಗಳ ಹಿಂದೆ ಸಕ್ರಿಯ ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದ ಜಿಲ್ಲೆ ಈಗ 6ನೇ ಸ್ಥಾನಕ್ಕೆ ಇಳಿಕೆಯಾಗಿದೆ.

‘ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಕೋವಿಡ್‌ ರೋಗಿಗಳು ಗುಣಮುಖರಾಗುತ್ತಿರುವುದು ಸಂತೋಷದ ವಿಷಯ. ಕೆಲವೇ ದಿನಗಳಲ್ಲಿ ಎಲ್ಲರೂ ರೋಗಮುಕ್ತರಾಗಿ ಮನೆಗೆ ತೆರಳಲಿದ್ದಾರೆ. ಮಂಡ್ಯ ಜಿಲ್ಲೆ ಕೋವಿಡ್‌ ಮುಕ್ತವಾಗುವ ದಿನ ದೂರವಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

***

ಇಂದು 42 ಮಂದಿ ಬಿಡುಗಡೆ

ಕೋವಿಡ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ 42 ಮಂದಿಯನ್ನು ಭಾನುವಾರ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ಅಂತಿಮ ಹಂತದ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿದ್ದು ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸದ್ಯ 159 ಸಕ್ರಿಯ ಪ್ರಕರಣಗಳು ಇದ್ದು 42 ಮಂದಿ ಬಿಡುಗಡೆಯಾದರೆ 109 ಮಂದಿ ಉಳಿಯಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು