ಮಂಗಳವಾರ, ಸೆಪ್ಟೆಂಬರ್ 28, 2021
21 °C
ನಮ್ಮನ್ನೂ ಗುರುತಿಸಿ ನೆರವು ನೀಡಬೇಕಿತ್ತು: ವಿತರಕರ ಮನದಾಳದ ಮಾತು

ಮಂಡ್ಯ | ಸುದ್ದಿ ತಲುಪಿಸುವಲ್ಲಿ ಪತ್ರಿಕಾ ವಿತರಕರೇ ಮುಂಚೂಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕೊರೊನಾ ಸೋಂಕಿನ ಭೀತಿ ನಡುವೆಯೂ ಮಳೆ, ಚಳಿ, ಗಾಳಿ ಲೆಕ್ಕಿಸದೆ ಸೂರ್ಯ ಉದಯಿಸುವ ಮುನ್ನವೇ ಮನೆ ಬಾಗಿಲಿಗೆ ಪತ್ರಿಕೆ ಹಾಕುವ ಮೂಲಕ ವಿಶ್ವಾಸಾರ್ಹ ಸುದ್ದಿ ತಿಳಿಸಲು ಪತ್ರಿಕಾ ವಿತರಕರು ಸಾಕಷ್ಟು ಶ್ರಮಿಸಿದ್ದಾರೆ.

ಲಾಕ್‌ಡೌನ್‌, ಸೀಲ್‌ಡೌನ್‌ ಪ್ರದೇಶಗಳು, ಕಂಟೈನ್‌ಮೆಂಟ್‌ ಜೋನ್‌ ಸೇರಿದಂತೆ ಕೊರೊನಾ ಭಯವಿದ್ದ ಪ್ರದೇಶಗಳಲ್ಲಿ ಪತ್ರಿಕೆ ವಿತರಿಸಲು ಭಯಪಟ್ಟ ಉದಾಹರಣೆಗಳು ಸಾಕಷ್ಟಿವೆ. ಬಂದ್‌ ಆಗಿದ್ದ ರಸ್ತೆಗಳಲ್ಲಿನ ಓದುಗರ ಮನೆಗೆ ಪತ್ರಿಕೆ ತಲುಪಿಸಲು ಹರಸಾಹಸ ಪಟ್ಟು, ಪೊಲೀಸ್‌ರ ಲಾಠಿ ಏಟು ತಿಂದಿದ್ದರು. ಕೊರೊನಾ ಸಂಕಷ್ಟ ಕಾಲದಲ್ಲಿ ಕೇವಲ ಪತ್ರಕರ್ತರನ್ನು ಗುರುತಿಸಿ ನೆರವಿನ ಹಸ್ತ ನೀಡಿದರೇ ಹೊರತು ಮನೆ ಮನೆಗೆ ಪತ್ರಿಕೆ ತಲುಪಿಸಲು ಮುಂಚೂಣಿಯಲ್ಲಿದ್ದ ನಮ್ಮನ್ನು ಗುರುತಿಸಲಿಲ್ಲ ಎಂಬ ಅಸಮಾಧಾನ ವಿತರಕರ ಮನದಲ್ಲಿ ಹಾಗೇ ಇದೆ.

ಕೆಲವೆಡೆ 60 ವರ್ಷ ಮೇಲ್ಪಟ್ಟ ವಿತರಕರೂ ಇದ್ದು, ಹುಡುಗರು ಬಾರದೆ ವಿಧಿ ಇಲ್ಲದೆ ಪತ್ರಿಕೆ ಹಂಚಲು ಅವರೇ ಮುಂದಾಗಿದ್ದು ಮಾತ್ರ ಈಗ ಇತಿಹಾಸ.

ಪತ್ರಿಕೆಯಿಂದ ಕೊರೊನಾ ರೋಗ ಹರಡುವುದಿಲ್ಲ ಎಂದು ಸಾಕಷ್ಟು ಜಾಗೃತಿ ಮೂಡಿಸಿದರೂ, ಮುನ್ನೆಚ್ಚರಿಕೆ ತೆಗೆದುಕೊಂಡರೂ ಪತ್ರಿಕೆಯಿಂದ ಕೊರೊನಾ ಹರಡುತ್ತದೆ ಎಂಬ ಸುಳ್ಳು ಸುದ್ದಿಗೆ ಜೋತು‌ ಬಿದ್ದು, ಪತ್ರಿಕೆ ನಿಲ್ಲಿಸಿದಾಗ ನೋವುಂಟಾಗಿ, ದಿಕ್ಕೇ ತೋಚದಂತಾಯಿತು. ಹಣ ಪಾವತಿ ಸಂದರ್ಭದಲ್ಲಿ ನೇರ ಪಾವತಿ ಮಾಡುವುದನ್ನು ತಪ್ಪಿಸಲು ಆನ್‌ಲೈನ್‌ ಪೇಮೆಂಟ್‌ ಮೊರೆ ಹೋದರೂ ಎಲ್ಲರೂ ಹಣ ಪಾವತಿಸಲಿಲ್ಲ ಎಂಬುದೂ ಸೇರಿದಂತೆ ವಿವಿಧ ಅನುಭವವನ್ನು ವಿತರಕರು ಹಂಚಿಕೊಂಡಿದ್ದಾರೆ.

ನೆರವು ನೀಡದಿರುವುದು ನೋವು ತಂದಿದೆ

ಕೊರೊನಾ ಆರಂಭದ ಸಮಯದಲ್ಲಿ ಭಯದ ವಾತಾವರಣದಿಂದ ಪತ್ರಿಕೆ ಹಾಕುವ ಹುಡುಗರು ಬಾರದೆ ಪತ್ರಿಕೆ ಹಂಚುವ ಹೊರೆ ನಮ್ಮ ಮೇಲೆ ಬಿದ್ದಿತ್ತು. 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಹೋಗಬೇಡಿ ಎಂದು ಸರ್ಕಾರ ಆದೇಶಿಸಿತ್ತು. ನನಗೆ 65 ವರ್ಷವಾದರೂ ಬೇರೆ ದಾರಿ ಇಲ್ಲದೆ ಕೆಲ ಹುಡುಗರ ಸಹಾಯದಿಂದ ಪತ್ರಿಕೆ ಹಂಚಿದೆ. ವಿದ್ಯಾವಂತರೇ ಹೆಚ್ಚಾಗಿ ಪತ್ರಿಕೆ ನಿಲ್ಲಿಸಿದ್ದು, ಪತ್ರಿಕಾ ವಿತರಕರನ್ನು ಗುರುತಿಸಿ ನೆರವು ನೀಡದಿರುವುದು ಬಹಳ ನೋವುಂಟು ಮಾಡಿತು. ಕಳೆದ 5 ತಿಂಗಳಿನಿಂದ ಬಿಲ್‌ ಹಣ ಪಾವತಿಯಾಗದೆ ನಷ್ಟದಲ್ಲೇ ಪತ್ರಿಕೆ ಹಂಚುತ್ತಿದ್ದೇನೆ.

ಎ.ಎಸ್‌.ಪ್ರಭಾಕರ್‌, ಮಳವಳ್ಳಿ

****

ಪತ್ರಿಕೆ ಹಾಕಿಸಿಕೊಂಡವರಿಗೆ ವಂದನೆ

ಪತ್ರಿಕೆಯಿಂದ ಕೊರೊನಾ ಹರಡುತ್ತದೆ ಎಂದು ಪತ್ರಿಕೆ ನಿಲ್ಲಿಸಿದ ಬಹುತೇಕ ಮಂದಿ ಇಂದಿಗೂ ಪತ್ರಿಕೆ ಹಾಕಿಸಿಕೊಳ್ಳುತ್ತಿಲ್ಲ. ಹಾಕಿಸಿಕೊಂಡವರಿಂದ ಸಾಕಷ್ಟು ಬಿಲ್‌ ಇನ್ನೂ ಪಾವತಿಯಾಗಿಲ್ಲ. ಸರ್ಕಾರ ಪತ್ರಿಕೆಯಿಂದ ಹರಡುವುದಿದ್ದರೆ ವಿತರಣೆಯನ್ನು ಸಂಪೂರ್ಣ ನಿಲ್ಲಿಸುತ್ತಿತ್ತು. ಆದರೆ ಜನರು ಇದನ್ನು ಅರ್ಥೈಸಿಕೊಳ್ಳುವುದರಲ್ಲಿ ವಿದ್ಯಾವಂತರೂ ವಿಫಲರಾದರು. ಸತ್ಯಾಂಶ ತಿಳಿದು ಪತ್ರಿಕೆ ಹಾಕಿಸಿಕೊಂಡು ಸಹಕರಿಸಿದವರಿಗೆ ಅನಂತ ವಂದನೆಗಳು.

ನರಸಿಂಹಶೆಟ್ಟಿ, ಡಾಮಡಹಳ್ಳಿ

***

ಓದುಗರ ಸ್ನೇಹಿಯಾಗಿ ಪತ್ರಿಕೆ ವಿತರಣೆ

ಸೋಂಕು ಹರಡದ ರೀತಿಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡೆವು. ಆದರೂ ಕೆಲವರು ಪತ್ರಿಕೆ ಹಾಕಬೇಡಿ ಎಂದು ಹೇಳಿದರು. ಅವರಿಗೆ ಮನವರಿಕೆ ಮಾಡಿಕೊಟ್ಟು ಪತ್ರಿಕೆ ಹಾಕಿಸಿಕೊಳ್ಳುವಂತೆ ಮಾಡಿದೆ. ಮತ್ತು ಬಿಲ್‌ ಪಾವತಿ ಮಾಡಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ, ಓದುಗರ ಸ್ನೇಹಿಯಾಗಿ ಪತ್ರಿಕೆ ವಿತರಿಸಿದೆ.

ಬಿ.ಎಸ್‌.ನಾರಾಯಣಸ್ವಾಮಿ, ಬಿ.ಜಿ.ನಗರ, ಬೆಳ್ಳೂರು ಕ್ರಾಸ್‌

***

ಕೆಲವರು ಪತ್ರಿಕೆ ಬೇಡ ಎಂದಿದ್ದೇ ಬೇಸರ

ಮುಖಗವಸು, ಸ್ಯಾನಿಟೈಸರ್ ಬಳಸುತ್ತಿದ್ದು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಪತ್ರಿಕೆ ಹಂಚಲಾಯಿತು. ಆದರೂ ಜನರು ಭಯದಿಂದ ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಟ್ಟಿಸಿದ್ದು, ಬೇಸರ ತರಿಸಿತು.

ನರಸಿಂಹರಾಜು, ಕೊಡಿಯಾಲ

************

ಕಷ್ಟದಲ್ಲೂ ಪತ್ರಿಕೆ ವಿತರಿಸಿದ ಸಂತಸ

ಷುಗರ್ ಟೌನ್, ಅಸಿಟೇಟ್ ಟೌನ್‌ನಲ್ಲಿ ಕಳೆದ 40ವರ್ಷಗಳಿಂದ ‘ಪ್ರಜಾವಾಣಿ’ ವಿತರಕನಾಗಿದ್ದೇನೆ. ಇಷ್ಟು ವರ್ಷದಲ್ಲಿ ಇದು ‌ಅತ್ಯಂತ ಸಂಕಷ್ಟದ ಕಾಲ. ಅದ್ಯಾವುದನ್ನೂ ಲೆಕ್ಕಿಸದೆ ಸೂರ್ಯ ಮೂಡುವುದರೊಳಗೆ ಮನೆ, ಮನೆಗೆ ಸತ್ಯ ಸುದ್ದಿಯನ್ನು ಹೊತ್ತು ತರುವ ‘ಪ್ರಜಾವಾಣಿ’ ತಲುಪಿದ ಸಂತಸ ಇದೆ.

ಆರ್.ನಾಗೇಶ್, ಅಸಿಟೇಟ್ ಟೌನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು