ಭಾನುವಾರ, ನವೆಂಬರ್ 17, 2019
20 °C

ನಿಖಿಲ್‌ ವಿರುದ್ಧ ವೈರತ್ವವಿಲ್ಲ: ಚಲುವರಾಯಸ್ವಾಮಿ

Published:
Updated:

ಮಂಡ್ಯ: ‘ಎಚ್‌.ಡಿ.ಕುಮಾರಸ್ವಾಮಿಗೂ ನನಗೂ ವೈರತ್ವವಿದೆ. ಆದರೆ, ನಿಖಿಲ್‌ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈರತ್ವವಿಲ್ಲ, ಆತನೂ ನನ್ನ ಮಗನಿದ್ದಂತೆ’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಿಖಿಲ್‌ ರಾಜಕಾರಣಕ್ಕೆ ಬರಲು ಇನ್ನೂ ಸಾಕಷ್ಟು ಸಮಯವಿತ್ತು. ಆದರೆ ಕೆಲವರು ಮೀಸೆ ತಿರುವಿ ತಂದು ನಿಲ್ಲಿಸಿ ಸೋಲಿಸಿದರು. ಅವರು ಎಲ್ಲೋ ಒಂದು ಕಡೆ ರಾಜಕಾರಣ ಮಾಡಿಕೊಳ್ಳುತ್ತಿದ್ದರು. ಜೆಡಿಎಸ್‌ನ ಪ್ರಶ್ನಾತೀತ ನಾಯಕರಾದ ಸಿ.ಎಸ್‌.ಪುಟ್ಟರಾಜು ಅವರು ಚುನಾವಣೆಯ ಜವಾಬ್ದಾರಿ ಹೊತ್ತಿದ್ದರು. ನಿಖಿಲ್‌ ಸೋಲಿಗೆ ಪರೋಕ್ಷವಾಗಿ ಪುಟ್ಟರಾಜು ಅವರೇ ಕಾರಣ’ ಎಂದು ಆರೋಪಿಸಿದರು.

‘ರಾಜ್ಯಕ್ಕೆ ದೇವೇಗೌಡರು ಹೇಗೋ ಹಾಗೆಯೇ ಜಿಲ್ಲೆಗೆ ಶಾಸಕ ಪುಟ್ಟರಾಜು ಇದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಸಚಿವರಾಗಿದ್ದಾಗ ಕುದುರೆ ಮೇಲಿದ್ದರು. ಸಾಕಷ್ಟು ಮಾತುಗಳನ್ನಾಡುತ್ತಿದ್ದರು. ಕುದುರೆ ಮೇಲಿಂದ ಇಳಿದ ನಂತರ ಈಗ ಎಲ್ಲೂ ಮಾತನಾಡುತ್ತಿಲ್ಲ. ಎರಡೂವರೆ ಲಕ್ಷ ಲೀಡ್‌ ಬಾರದಿದ್ದರೆ ರಾಜಕಾರಣದಿಂದ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆಮೇಲೆ ತಮಾಷೆಗೆ ಮಾತನಾಡಿದ್ದೇನೆ ಎನ್ನುತ್ತಿದ್ದಾರೆ. ರಾಜಕಾರಣದಲ್ಲಿ ಸ್ವಲ್ಪ ಹಿಡಿತದಲ್ಲಿ ಮಾತನಾಡುವುದನ್ನು ಕಲಿಯಬೇಕು’ ಎಂದು ಹೇಳಿದರು.

‘ಜೆಡಿಎಸ್‌ ಮುಖಂಡರು, ಜಿಲ್ಲೆಗೆ ₹ 8 ಸಾವಿರ ಕೋಟಿ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಎಲ್ಲಿ ಟೆಂಡರ್‌ ಆಗಿದೆ, ಯಾವ ಕೆಲಸದ ಕಾಮಗಾರಿ ಆರಂಭವಾಗಿದೆ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕು. ತಪ್ಪು ಮಾಹಿತಿ ನೀಡಿ ಜನರ ಕಣ್ಣಿಗೆ ಮಣ್ಣು ಎರಚಲಾಗಿದೆ. ಕೆ.ಆರ್‌.ಪೇಟೆ ವಿಧಾನಸಭಾ ಉಪ ಚುನಾವಣೆ ನಡೆಯುವುದಕ್ಕೂ ಮೊದಲು ಜೆಡಿಎಸ್‌ ಮುಖಂಡರು ಈ ಬಗ್ಗೆ ಉತ್ತರ ನೀಡಬೇಕು’ ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)