ಮಂಗಳವಾರ, ಮಾರ್ಚ್ 28, 2023
31 °C
ಕುಗ್ಗಿದ ವಹಿವಾಟು, ಬೇಡಿಕೆ ಇದ್ದರೂ ಮಾರಾಟಕ್ಕೆ ತೊಂದರೆ, ದಲ್ಲಾಳಿಗಳ ಕಾರುಬಾರು

ಮಾರ್ನೋಮಿ: ಆಡು–ಕುರಿ ಸಂತೆಗಿಲ್ಲ ಅನುಮತಿ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಸೆಪ್ಟೆಂಬರ್‌ ಆರಂಭವಾಗುತ್ತಿದ್ದಂತೆ ಜಿಲ್ಲೆಯ ಜನರಲ್ಲಿ ಮಾರ್ನೋಮಿ (ಪಿತೃಪಕ್ಷ) ಹಬ್ಬದ್ದೇ ಧ್ಯಾನ. ಕೋವಿಡ್‌ ಸಂಕಷ್ಟದಲ್ಲೂ ಈ ಬಾರಿ ಹಬ್ಬ ಆರಂಭಗೊಂಡಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸಂತೆಗಳ ಮೇಲಿನ ನಿಷೇಧ ತೆರವುಗೊಳ್ಳದ ಕಾರಣ ಆಡು–ಕುರಿ ಮಾರಾಟ ಹಾಗೂ ಖರೀದಿಗೆ ತೊಂದರೆಯಾಗಿದೆ.

ಮಹಾಲಯ ಅಮಾವಾಸ್ಯೆಗೂ ಮೊದಲು ಶೇ 80ರಷ್ಟು ಹಳ್ಳಿಗಳಲ್ಲಿ ಪಿತೃಪಕ್ಷ ಮುಕ್ತಾಯಗೊಳ್ಳುತ್ತದೆ. ಪ್ರತಿ ಮನೆಯಲ್ಲಿ ತಮ್ಮ ಶಕ್ತಿಗೆ ಅನುಸಾರವಾಗಿ ಮರಿ ಕಡಿದು ಮೃತರಾದವರ ಹಿರಿಯರಿಗೆ ಮಾಂಸಾಹಾರದ ಎಡೆ ಇಡುತ್ತಾರೆ. ಅಮಾವಾಸ್ಯೆಯ ಹಿಂದಿನ ವಾರ ವಿವಿಧೆಡೆ ‘ಹಬ್ಬದ ಸಂತೆ’ಗಳು ಭರ್ಜರಿಯಾಗಿ ನಡೆಯುತ್ತವೆ. ಆಡು–ಕುರಿಗಳ ವಹಿವಾಟು ಕೋಟಿ ರೂಪಾಯಿ ಮೀರುತ್ತದೆ. ಆದರೆ ಈ ಬಾರಿ ಜಿಲ್ಲಾಡಳಿತ ಸಂತೆಗಳಿಗೆ ಅವಕಾಶ ನೀಡದ ಕಾರಣ ಹಬ್ಬ ಆರಂಭವಾಗಿದ್ದರೂ ಆಡು–ಕುರಿ ವಹಿವಾಟು ಗರಿಗೆದರಿಲ್ಲ.

ಹಬ್ಬದ ಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿಯೇ ರೈತರು ಆಡು, ಕುರಿ, ಮೇಕೆಗಳನ್ನು ಕೊಬ್ಬಿಸಿರುತ್ತಾರೆ. ಈ ವೇಳೆ ಬೆಲೆ ಗಗನಕ್ಕೇರುವ ಕಾರಣ ಕುರಿ ಸಾಕಣೆದಾರರು ಅಪಾರ ಲಾಭ ಗಳಿಸುತ್ತಾರೆ. ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಸಂತೆಯಲ್ಲಿ ಮಾರಾಟ ಮಾಡಲು ಹೊರಜಿಲ್ಲೆ, ಹೊರರಾಜ್ಯಗಳಿಂದಲೂ ರೈತರು, ದಲ್ಲಾಳಿಗಳು ಬರುತ್ತಾರೆ.

ನಸುಕಿನ 5 ಗಂಟೆಯಿಂದಲೇ ವ್ಯಾಪಾರ ಆರಂಭವಾಗುತ್ತದೆ. ಆದರೆ ಈ ಬಾರಿ ಅನುಮತಿ ಇಲ್ಲದ ಕಾರಣ ಅಧಿಕಾರಿಗಳು ಎಪಿಎಂಸಿ ಗೇಟ್‌ ಬಂದ್‌ ಮಾಡಿದ್ದಾರೆ. ಇಷ್ಟಾದರೂ ರೈತರು ಎಪಿಎಂಸಿ ಬಳಿ ಇರುವ ಪೆಟ್ರೋಲ್‌ ಬಂಕ್‌ ಬಳಿ ವಹಿವಾಟು ನಡೆಸುತ್ತಿದ್ದಾರೆ.

‘ಹಬ್ಬದ ಸಂದರ್ಭದಲ್ಲಿ ವಹಿವಾಟು ನಡೆಸುವಂತೆ ಎಲ್ಲೆಡೆಯಿಂದ ಒತ್ತಡ ಬರುತ್ತಿದೆ. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅನುಮತಿ ಸಿಕ್ಕರೆ ಮಾತ್ರ ಸಂತೆಗೆ ಅವಕಾಶ ನೀಡಲಾಗುವುದು’ ಎಂದು ಕಿರುಗಾವಲು ಎಪಿಎಂಸಿ ಕಾರ್ಯದರ್ಶಿ ಸಾಕಮ್ಮ ಹೇಳಿದರು.

ಮಂಡ್ಯ ತಾಲ್ಲೂಕಿನ ಹಲ್ಲೇಗೆರೆ ಸಂತೆಯೂ ಆಡ ಕುರಿ ವಹಿವಾಟಿಗೆ ಪ್ರಸಿದ್ಧಿ ಪಡೆದಿದೆ. ಪ್ರತಿ ಬುಧವಾರ ನಡೆಯುವ ಈ ಸಂತೆಗೆ ವಿವಿಧ ಜಿಲ್ಲೆಗಳಿಂದ ರೈತರು, ವ್ಯಾಪಾರಿಗಳು ಬರುತ್ತಾರೆ. ಉತ್ತರ ಕರ್ನಾಟಕ ಭಾಗದ ನಾಟಿ ಆಡುಕುರಿಗಳನ್ನು ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತದೆ. ನಸುಕಿನ 5 ಗಂಟೆಗೆ ಆರಂಭವಾಗುವ ಸಂತೆ ಬೆಳಿಗ್ಗೆ10ಕ್ಕೆಲ್ಲಾ ಮುಕ್ತಾಯಗೊಳ್ಳುತ್ತದೆ. ಕೇವಲ ಐದಾರು ಗಂಟೆಯಲ್ಲಿ ವಹಿವಾಟಿ ಕೋಟಿ ದಾಟುತ್ತದೆ.

ವರ್ತಕರಿಗೆ ಹಬ್ಬ: ಸಂತೆಗೆ ಅನುಮತಿ ಇಲ್ಲದ ಕಾರಣ ವರ್ತಕರು, ದಲ್ಲಾಳಿಗಳು ಹಳ್ಳಿಗಳಿಗೆ ತೆರಳಿ ರೈತರಿಂದ ಆಡು, ಕುರಿ ಖರೀದಿ ಮಾಡುತ್ತಿದ್ದಾರೆ. ಈ ಬಾರಿ ಬೇಡಿಕೆ ಇಲ್ಲ ಎಂಬ ನೆಪ ಹೇಳಿ ಕಡಿಮೆ ಬೆಲೆಗೆ ಖರೀದಿ ಮಾಡುತ್ತಿದ್ದಾರೆ. ಆದರೆ ಅವರು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಕುರಿ ಸಾಕಣೆದಾರರು ಆರೋಪಿಸುತ್ತಾರೆ.

‘ಹಲ್ಲೇಗೆರೆ ಸಂತೆಗೆ ಅವಕಾಶ ಇಲ್ಲದಿದ್ದರೂ ದಲ್ಲಾಳಿಗಳು, ವರ್ತಕರು ಅಕ್ರಮವಾಗಿ ವಹಿವಾಟು ನಡೆಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ತೆರೆಮರೆಯಲ್ಲಿ ವರ್ತಕರಿಗೆ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಾರೆ. ಈ ಬಾರಿ ರೈತರಿಗೆ ನಷ್ಟ ಉಂಟಾಗಿದೆ, ಆದರೆ ವ್ಯಾಪಾರಿಗಳು ಅಪಾರ ಲಾಭ ಮಾಡುತ್ತಿದ್ದಾರೆ’ ಎಂದು  ಹಲ್ಲೇಗೆರೆಯ ರೈತ ಶಿವರಾಮೇಗೌಡ ಹೇಳಿದರು.

ನಾಗಮಂಗಲ ತಾಲ್ಲೂಕಿನ ಕದಬಹಳ್ಳಿ, ಬೋಗಾದಿ, ಕೆ.ಆರ್‌.ಪೇಟೆ ತಾಲ್ಲೂಕಿನ ತೆಂಡೇಕೆರೆಯಲ್ಲಿ ದೊಡ್ಡ ಮಟ್ಟದ ಆಡುಕುರಿ ಸಂತೆ ನಡೆಯುತ್ತವೆ. ವರ್ತಕರ ಆರ್ಭಟ ತಪ್ಪಿಸಲು ಹಬ್ಬದ ಸಂತೆಯಲ್ಲಿ ಆಡು–ಕುರಿ ಮಾರಾಟ ಮಾಡಲು ಸಾಕಣೆದಾರರಿಗೆ ಅವಕಾಶ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

***********

ವಿವಿಧೆಡೆ ಸರಳ ಆಚರಣೆ

ಕೊರೊನಾ ಸೋಂಕು ಹಳ್ಳಿಗಳಲ್ಲೂ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಲವರು ಸರಳ ಮಾರ್ನೋಮಿ ಆಚರಣೆಗೆ ಮುಂದಾಗಿದ್ದಾರೆ. ಬೇರೆ ಕಡೆ ವಲಸೆ ಹೋಗಿದ್ದವರು ಮನೆಗೆ ಬಂದಿದ್ದು ಮನೆಮಂದಿಯಷ್ಟೇ ಸೇರಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ಇನ್ನೂ ಕೆಲವೆಡೆ ಕೊರೊನಾ ಸೋಂಕಿನ ನಡುವೆಯೂ ವೈಭವದಿಂದಲೇ ಹಬ್ಬ ಆಚರಣೆ ಮಾಡಲು ಮುಂದಾಗಿದ್ದಾರೆ.

‘ಮಾರ್ನೋಮಿ ಹಬ್ಬ ನಮ್ಮ ಜಿಲ್ಲೆಯ ಸಾಂಸ್ಕೃತಿಕ, ಸಾಮಾಜಿಕ ಪರಂಪರೆಯಾಗಿದೆ. ಮೃತಪಟ್ಟಿರುವ ಹಿರಿಯರ ಆತ್ಮಕ್ಕೆ ಶಾಂತಿ ಲಭಿಸಬೇಕಾದರೆ ದೊಡ್ಡದಾಗಿಯೇ ಹಬ್ಬ ಆಚರಣೆ ಮಾಡಬೇಕು’ ಎಂದು ಕೆ.ಆರ್‌.ಪೇಟೆಯ ಸುರೇಶ್‌ ಹೇಳಿದರು.

**

ಸಂತೆಗಳಿಗೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಆದರೆ ಜನರು ಈ ಬಾರಿ ಪಿತೃಪಕ್ಷವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು

–ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.