ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ವಿವಿ: 11 ತಿಂಗಳಿಂದ ಫಲಿತಾಂಶ ಬಂದಿಲ್ಲ

ಗೊಂದಲಗಳ ಗೂಡಾದ ಸಂಸ್ಥೆಯ ಆವರಣ; ಅಡಕತ್ತರಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳ ಭವಿಷ್ಯ
Last Updated 20 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಮಂಡ್ಯ: ನೂತನ ಮಂಡ್ಯ ವಿಶ್ವವಿದ್ಯಾಲಯದ ಪ್ರಥಮ ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆ ನಡೆದು ವರ್ಷವಾಗುತ್ತಿದ್ದರೂ ಈವರೆಗೂ ಫಲಿತಾಂಶ ಪ್ರಕಟವಾಗಿಲ್ಲ. ವಿವಿ ಅಂಗಳ ಗೊಂದಲದ ಗೂಡಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.

ಆರಂಭದ ದಿನದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ವಿಶ್ವವಿದ್ಯಾಲಯ ಸುದ್ದಿಯಾಗುತ್ತಲೇ ಇದೆ. ವರ್ಷದ ಹಿಂದೆ ನಡೆದ ನೇಮಕಾತಿ ಗೊಂದಲಗಳಿಂದಾಗಿ ವಿವಿ ಮಾನ್ಯತೆಯೇ ರದ್ದಾಗುವ ಅಪಾಯ ಎದುರಾಗಿತ್ತು. ಸಿಬ್ಬಂದಿಯು ಸರ್ಕಾರಿ ಮಹಾವಿದ್ಯಾಲಯದ ಅಡಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದರು. ಇದರ ವಿರುದ್ಧ ಅನಿರ್ದಿಷ್ಟಾವಧಿ ಧರಣಿ ನಡೆಸಿದ ವಿದ್ಯಾರ್ಥಿಗಳು ಮಂಡ್ಯ ವಿವಿ ಅಡಿ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾದರು.

2019 ನವೆಂಬರ್‌–ಡಿಸೆಂಬರ್‌ ತಿಂಗಳಲ್ಲಿ ಪದವಿ ತರಗತಿಗಳ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ನಡೆದವು. ಪರೀಕ್ಷೆ ನಡೆದು 11 ತಿಂಗಳಾಗಿದ್ದು ಇಲ್ಲಿಯವರೆಗೂ ಫಲಿತಾಂಶ ಪ್ರಕಟವಾಗದಿರುವುದು ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಿದೆ. ಅದೇ ರೀತಿ 2020 ಮಾರ್ಚ್‌ ತಿಂಗಳಲ್ಲಿ ಸ್ನಾತಕೋತ್ತರ ಪದವಿ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ನಡೆದಿದೆ. 8 ತಿಂಗಳಾದರೂ ಫಲಿತಾಂಶ ಪ್ರಕಟಗೊಳ್ಳದೇ ಇರುವುದು ವಿದ್ಯಾರ್ಥಿಗಳನ್ನು ಕಂಗೆಡಿಸಿದೆ.

ನಿಯಮಾನುಸಾರ ಪರೀಕ್ಷೆ ನಡೆದ ತಿಂಗಳಲ್ಲಿ ಫಲಿತಾಂಶ ನೀಡಬೇಕು. ಆದರೆ ಇಲ್ಲಿ ವರ್ಷ ಸಮೀಪಿಸುತ್ತಿದ್ದರೂ ಫಲಿತಾಂಶ ಪ್ರಕಟವಾಗಿಲ್ಲ. ಮಂಡ್ಯ ವಿವಿ ಹೆಸರಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ದೊರೆಯಲಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ದಾಖಲಾಗಿದ್ದರು. ಅದಕ್ಕಾಗಿ ಪ್ರತಿಭಟನೆಯ ಹಾದಿಯನ್ನೂ ತುಳಿದಿದ್ದರು. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಂಡ್ಯ ವಿವಿಯ ಗೊಂದಲಗಳನ್ನು ಪರಿಹಾರ ಮಾಡಲು ಸಾಧ್ಯವಾಗಿಲ್ಲ.

‘ಕೋವಿಡ್‌ ಸಂದರ್ಭದಲ್ಲಿ ಪ್ರಥಮ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳನ್ನು ಆಧರಿಸಿ 2ನೇ ಸೆಮಿಸ್ಟರ್‌ ಉತ್ತೀರ್ಣ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಪ್ರಥಮ ಸೆಮಿಸ್ಟರ್‌ ಫಲಿತಾಂಶವೇ ಬಂದಿಲ್ಲದ ಹಿನ್ನೆಲೆಯಲ್ಲಿ 2ನೇ ಸೆಮಿಸ್ಟರ್‌ಗೂ ಸಮಸ್ಯೆಯಾಗಿದೆ. ಮೈಸೂರು ವಿವಿಗೆ ದಾಖಲಾಗುವ ಉದ್ದೇಶವಿದ್ದ ಹಲವು ವಿದ್ಯಾರ್ಥಿಗಳು ಮಂಡ್ಯ ವಿವಿ ಸ್ಥಾಪನೆಯಾಗಿದೆ ಎಂಬ ಕಾರಣಕ್ಕೆ ಇಲ್ಲಿಗೆ ದಾಖಲಾದೆವು. ಆದರೆ ಈಗ ತಪ್ಪು ಮಾಡಿದ್ದೇವೆ ಎನಿಸುತ್ತಿದೆ’ ಎಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಭತ್ಯೆಗಳೂ ಬಂದಿಲ್ಲ: ಪ್ರಥಮ ಸೆಮಿಸ್ಟರ್‌ ಪದವಿ, ಸ್ನಾತಕೋತ್ತರ ಪದವಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದ ಪರೀಕ್ಷಾ ಮಂಡಳಿ ಸಿಬ್ಬಂದಿಯ ಭತ್ಯಗಳೂ ಇಲ್ಲಿಯವರೆಗೆ ಬಂದಿಲ್ಲ. ಮಂಡಳಿ ಸಭೆಯಲ್ಲಿ ಸರ್ಕಾರಿ ಮಹಾವಿದ್ಯಾಲಯ ಸೇರಿದಂತೆ ಹೊರಗಿನ ಕಾಲೇಜುಗಳ ಪ್ರಾಧ್ಯಾಪಕರು ಭಾಗವಹಿಸಿದ್ದರು. ಸಭೆ ನಡೆದು ವರ್ಷ ಕಳೆದರೂ ಅವರಿಗೆ ನೀಡಬೇಕಾಗಿದ್ದ ಭತ್ಯೆ ಬಂದಿಲ್ಲ.

ಜೊತೆಗೆ ಪಠ್ಯ ಸಿದ್ಧತೆಗಾಗಿ ಅಧ್ಯಯನ ಮಂಡಳಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಾಧ್ಯಾಪಕರಿಗೂ ಇಲ್ಲಿಯವರೆಗೆ ಭತ್ಯೆಗಳು ಬಂದಿಲ್ಲ. ವಿವಿ ಆವರಣದಲ್ಲಿ ಇಲ್ಲಗಳ ಪಟ್ಟಿ ದೊಡ್ಡದಾಗಿ ಬೆಳೆದಿದ್ದು ಇವುಗಳಿಗೆ ಉತ್ತರ ಸಿಗದಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಪಾಠ ಮಾಡುವವರು ಯಾರು?: ನವೆಂಬರ್‌ 1ರಿಂದ ಪದವಿ, ಸ್ನಾತಕೋತ್ತರ ಪದವಿ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಆದರೆ ಮಂಡ್ಯ ವಿವಿಯಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ, ಹೀಗಾಗಿ ತರಗತಿ ಆರಂಭಗೊಂಡರೆ ಪಾಠ ಮಾಡುವವರು ಯಾರು ಎಂಬ ಪ್ರಶ್ನೆ ಸೃಷ್ಟಿಯಾಗಿದೆ.

ಈಗಿರುವ ಅತಿಥಿ ಉಪನ್ಯಾಸಕರಿಗೆ 10 ತಿಂಗಳಿಂದ ಸಂಬಳ ಕೊಟ್ಟಿಲ್ಲ. ಬಹುತೇಕ ಮಂದಿ ಮಂಡ್ಯ ವಿವಿ ಬಿಟ್ಟು ಬೇರೆಡೆ ತೆರಳಿದ್ದಾರೆ. ಹೊಸದಾಗಿ ರೂಪಿಸಲಾದ ವಿವಿ ಆವರಣ ಗೊಂದಲಗಳ ಗೂಡಾಗಿದ್ದು ಉನ್ನತ ಶಿಕ್ಷಣ ಇಲಾಖೆ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಎಲ್ಲದಕ್ಕೂ ಸರ್ಕಾರದ ಅನುಮತಿ ಬೇಕು

‘ಮಂಡ್ಯ ವಿವಿಯಲ್ಲಿ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಾದುದು ಅನಿವಾರ್ಯವಾಗಿದೆ. ಸಮಸ್ಯೆಗಳ ಇತ್ಯರ್ಥಕ್ಕೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ, ಸರ್ಕಾರದ ಸೂಚನೆ ಇಲ್ಲದೇ ಯಾವುದೇ ಕೆಲಸ ಮಾಡುವುದು ಅಸಾಧ್ಯವಾಗಿದೆ’ ಎಂದು ಮಂಡ್ಯ ವಿವಿ ವಿಶೇಷಾಧಿಕಾರಿ ಪ್ರೊ.ಮಹದೇವ ನಾಯಕ್‌ ಅಸಹಾಯಕತೆ ವ್ಯಕ್ತಪಡಿಸಿದರು.

‘ಫಲಿತಾಂಶ ನೀಡಲು ಸರ್ಕಾರದ ಅನುಮತಿ ಸಿಕ್ಕಿದೆ. ಕೆಲ ಪ್ರಾಯೋಗಿಕ ವಿಷಯಗಳ ಅಂಕ ಸೇರ್ಪಡೆ ಕೆಲಸ ಬಾಕಿ ಇದ್ದ ಕಾರಣ ಇಲ್ಲಿಯವರೆಗೆ ಫಲಿತಾಂಶ ನೀಡಲು ಸಾಧ್ಯವಾಗಿರಲಿಲ್ಲ. ಎಲ್ಲಾ ಕೆಲಸ ಮುಗಿದಿದ್ದು ಶೀಘ್ರ ಫಲಿತಾಂಶ ಪ್ರಕಟಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT