ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆಯೇ ಇಲ್ಲ– ವಿನಾಶದತ್ತ ಶಾಸನ

ಮಳವಳ್ಳಿ: ಗಿಡಗಂಟಿಯೊಳಗೆ ಮುಳುಗಿದ ದೇವಾಲಯಗಳು l ಮರೆಯಾಗುತ್ತಿದೆ ಐತಿಹಾಸಿಕ ಹಿನ್ನೆಲೆ
Last Updated 23 ಆಗಸ್ಟ್ 2021, 9:27 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಐತಿಹಾಸಿಕ ದೇವಸ್ಥಾನಗಳು, ಷಡಕ್ಷರ ದೇವರ ವಾಸ ಸ್ಥಳ, ಚೋಳರ ಶಾಸನಗಳು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಪುರಾತತ್ವ ಇಲಾಖೆ ನಿರ್ಲಕ್ಷ್ಯದಿಂದ ನಶಿಸುವ ಹಂತಕ್ಕೆ ಬಂದಿವೆ.

ಶಿಲಾಯುಗದಿಂದ ಮೈಸೂರು ಒಡೆಯರವರೆಗಿನ ಹಲವು ಸ್ಮಾರಕ ಗಳು ತಾಲ್ಲೂಕಿನಲ್ಲಿವೆ. ಪಟ್ಟಣಕ್ಕೆ ಸಮೀಪದ, ಚೋಳರ ಕಾಲದ ಮಾರೇಹಳ್ಳಿಯ ಲಕ್ಷ್ಮೀ ನರಸಿಂಹ, ರಾಷ್ಟ್ರೀಯ ಹೆದ್ದಾರಿ-209ರ ಬಳಿ ಇರುವ ಅಮೃತೇಶ್ವರಸ್ವಾಮಿ, ಪೂರಿಗಾಲಿಯ ಮಹದೇಶ್ವರ, ಕುಂದೂರು ಬೆಟ್ಟದ ತಪ್ಪಲಿನಲ್ಲಿರುವ ಮಲ್ಲಿಕಾರ್ಜುನಸ್ವಾಮಿ, ಗಾಜನೂರಿನ ಆಂಜನೇಯಸ್ವಾಮಿ, ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಗಳಿವೆ.

ತಾಲ್ಲೂಕಿನಲ್ಲಿ 149 ಶಾಸನಗಳಿದ್ದು, ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿಯೇ 26 ಶಾಸನಗಳಿವೆ. ರಾವಣಿ ಗ್ರಾಮದಲ್ಲಿನ ಶಾಸನಗಳು, ಏಳು ಗ್ರಾಮಗಳ ಮಧ್ಯೆ ಇರುವ ಮತ್ತಿತಾ ಳೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಸ್ಮಾರಕಗಳು ಪುರಾತತ್ವ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾ‌ಗಿವೆ.

ಈಗಿನ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ಇರುವೆಡೆ ಚಿಕ್ಕದೇವರಾಜ ಒಡೆಯರ್ ಕ್ರಿ.ಶ.1685ರಲ್ಲಿ ನೀರಿನ ಕೊಳ (ಸಿಂಗಾರಕೊಳ) ನಿರ್ಮಿಸಿದ್ದರು ಎನ್ನಲಾದ ಶಾಸನವಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಆದರೆ, ಇದು ಕೆರೆ ಮುಚ್ಚಿದ ಸಂದರ್ಭದಲ್ಲಿ ಮರೆಯಾಗಿದೆ. ಅರ್ಕೇಶ್ವರಸ್ವಾಮಿ ದೇವಸ್ಥಾನದಲ್ಲಿರುವ 1672ರ ಶಾಸನ, ಗಂಗಾಧರೇಶ್ವರ ದೇವಸ್ಥಾನದ ಶಾಸನವು ದೇಗುಲ ನಿರ್ಮಾಣಕ್ಕೆ ಗಂಗಾ ಧರಯ್ಯ ಎಂಬುವರಿಗೆ ಸಸಿಯಾಲಪುರ ಗ್ರಾಮ ದತ್ತು ನೀಡಿ‌ರುವುದನ್ನು ಉಲ್ಲೇಖಿಸಲಾಗಿದೆ.

ರಾಮಂದೂರು ಗ್ರಾಮದಲ್ಲಿ 8ನೇ ಮತ್ತು 10ನೇ ಶತಮಾನಕ್ಕೆ ಸೇರಿದ ಎರಡು ಶಾಸನಗಳಿವೆ. ಜನರ ತೆರಿಗೆ ಪಾವತಿಯನ್ನು ಇವು ಹೇಳುತ್ತವೆ. ಹುಸ್ಕೂರು ಗ್ರಾಮದಲ್ಲಿ 1074ರ ಶಾಸನವಿದೆ. ಹುಲ್ಲಾಗಾಲ ಗ್ರಾಮದ ಹೆಬ್ಬಾಗಿಲ ಬಳಿಯಿರುವ 1780ರ ಶಾಸನ ಟಿಪ್ಪು, ಗ್ರಾಮದ ಗೌಡರಿಗೆ ಜಮೀನನ್ನು ಇನಾಮು ಆಗಿ ನೀಡಿದ್ದನ್ನು ಹೇಳುತ್ತದೆ.

ಹುಲ್ಲೇಗಾಲ ಗ್ರಾಮದಲ್ಲಿ 1077ರ ವೀರಗಲ್ಲು ಇದ್ದು, ಹೊಯ್ಸಳರ ಕಾಲದಲ್ಲಿ ಗೋವು ಕಳ್ಳತನ ನಡೆದಾಗ ಶಂಕರ ಮಗ ಗೊಡೆ ಎಂಬಾತ ಕಳ್ಳರ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದ ಇತಿಹಾಸವಿದೆ. ಕೋರೇಗಾಲದಲ್ಲಿ 1528ರ ಶಾಸನವಿದೆ. ಕುಂದೂರು ಮೂಲಸ್ಥಾನೇಶ್ವರಸ್ವಾಮಿ ದೇವಾಲಯದ ಬಲಗಡೆ ಕ್ರಿ.ಶ.1444ರ ಶಾಸನವಿದೆ.

ಕುಂದೂರು ಗ್ರಾಮದ ಮಹಾಮಂಡಲೇಶ್ವರ ದೇವಸ್ಥಾನದಲ್ಲಿ 1423ರ ಶಾಸನವಿದೆ. ಕಲ್ಕುಣಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಮುಂದೆ 10ನೇ ಶತಮಾನದ ಒಂದು ಶಾಸನವಿದ್ದು, ಯುದ್ಧದಲ್ಲಿ ಸಾವನ್ನಪ್ಪಿದ ರಾಜನಿಗಾಗಿ ಹೆಬ್ಬೆ ಬಸವನ ಎಂಬಾತ ತಲೆ ಕತ್ತರಿಸಿಕೊಂಡಿದ್ದ ಬಗ್ಗೆ ಎಂದು ತಿಳಿಸುತ್ತದೆ. ಈ ಶಾಸನಗಳಿಗೂ ರಕ್ಷಣೆ ಇಲ್ಲದಂತಾಗಿದೆ.

ಹಲಗೂರು ಸಮೀಪದ ಐತಿಹಾಸಿಕ ಬಸವನಹಳ್ಳಿ ಬಸವೇಶ್ವರ ಸ್ವಾಮಿ ದೇವಾಲಯ ಚೋಳರ ಆಳ್ವಿಕೆಯಲ್ಲಿ ನಿರ್ಮಾಣವಾಗಿದೆ. ದೇವಾಲಯ ಮುಜರಾಯಿ ಇಲಾಖೆ ಸೇರಿದ್ದು, ಸರ್ಕಾರದ ವತಿಯಿಂದ ಶೌಚಾಲಯ ಮತ್ತು ಪ್ರವಾಸಿ ಮಂದಿರವನ್ನೂ ನಿರ್ಮಿಸಲಾಗಿದೆ. ಆದರೆ, ಶೌಚಾಲಯ ಆವರಣದಲ್ಲಿ ಗಿಡಗಂಟಿಗಳು ಬೆಳೆ ದಿವೆ. ಮೂಲಸೌಕರ್ಯಗಳ ಜೊತೆಗೆ ದೇವಾ ಲಯ ಜೀರ್ಣೋದ್ಧಾರ ಮಾಡಬೇಕಿದೆ.

ನಿಟ್ಟೂರು ಗ್ರಾಮದ ಗಂಗರ ಕಾಲದ ಅರ್ಕೇಶ್ವರ ದೇವಾಲಯ ಶಿಥಿಲಗೊಂಡಿದೆ. ಆವರಣದಲ್ಲಿ ಕುಡಿಯುವ ನೀರು ಸಿಗುವುದಿಲ್ಲ. ಅಮೃತೇಶ್ವರಸ್ವಾಮಿ ದೇವಸ್ಥಾನವನ್ನು ದಾನಿಗಳ ಸಹಾಯದಿಂದ ಜೀರ್ಣೋದ್ಧಾರ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT