ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಿಂಗಳಿಂದ ಕಸ ಸಂಗ್ರಹ ವಾಹನ ಬಂದಿಲ್ಲ!

ಮಳೆ ಬಂದರೆ ಬೀಡಿ ಕಾರ್ಮಿಕರ ಕಾಲೊನಿ ನಿವಾಸಿಗಳು ಭಯ, ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ
Last Updated 27 ಸೆಪ್ಟೆಂಬರ್ 2020, 7:29 IST
ಅಕ್ಷರ ಗಾತ್ರ

ಮಂಡ್ಯ: ನಗರದ ಬೀಡಿ ಕಾರ್ಮಿಕರ ಕಾಲೊನಿಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು, ಬೇರೆ ನರಕ ನೋಡುವ ಅವಶ್ಯಕತೆ ಇಲ್ಲ. ಕಳೆದ ಐದು ತಿಂಗಳಿಂದ ನಗರಸಭೆ ಕಾರ್ಮಿಕರು ಮನೆಮನೆ ಕಸ ಸಂಗ್ರಹ ಮಾಡದ ಕಾರಣ ಅಲ್ಲಿಯ ನಿವಾಸಿಗಳು ನರಕ ಸದೃಶ ಜೀವನ ಸಾಗಿಸುತ್ತಿದ್ದಾರೆ.

ನಗರಸಭೆ ಸದಸ್ಯರಿಗೆ ಇಲ್ಲದ ಅಧಿಕಾರ, ನಗರಸಭೆಯಲ್ಲಿ ಅಧಿಕಾರಿಗಳ ಕಾರುಬಾರು, ಜನಪ್ರತಿನಿಧಿಗಳ ನಿರ್ಲಕ್ಷ್ಯ, ನಿರ್ಲಜ್ಜ ಮನೋಭಾವದಿಂದ ಶ್ರಮಿಕ ಜನರು ವಾಸಿಸುವ ಕಾಲೊನಿಯಲ್ಲಿ ಜನರು ಕಸದ ನಡುವೆ ಜೀವನ ಮಾಡುತ್ತಿದ್ದಾರೆ. ಮನೆಯ ಸುತ್ತಮುತ್ತಲೂ ಚೆಲ್ಲಾಡುತ್ತಿರುವ ಕಸದ ರಾಶಿಯ ನಡುವೆಯೇ ಇಲ್ಲಿಯ ಮಕ್ಕಳು ಆಟವಾಡುತ್ತಿದ್ದಾರೆ. ರಸ್ತೆಗಳಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಚರಂಡಿಗಳಲ್ಲಿ ಕಸ ಬಿದ್ದು ಚೆಲ್ಲಾಡುತ್ತಿದೆ. ಚರಂಡಿ ಸಾರಾಗವಾಗಿ ಹರಿಯಲು ಸಾಧ್ಯವಾಗದೇ ಬೀದಿಗಳಲ್ಲಿ ಕೊಳಚೆ ನಿಂತಿದೆ.
ಕೊಳಚೆಯ ಆರ್ಭಟದಿಂದಾಗಿ ಜನರಿಗೆ ನಿತ್ಯ ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಕೋವಿಡ್‌ ನಡುವೆ ಸಮರ್ಪಕ ಚಿಕಿತ್ಸೆಯೂ ಸಿಗದೆ ಅಲ್ಲಿಯ ಜನರ ನೋವು ಕೇಳದಾಗಿದೆ. ಹಲವು ದಿನಗಳಿಂದ ತುಂತುರು ಮಳೆಯೂ ಸುರಿಯುತ್ತಿದ್ದು ಕೊಳಚೆ ನೀರಿನೊಂದಿಗೆ ಮಳೆ ನೀರು ತುಂಬಿಕೊಂಡಿದೆ. ಮುಖ್ಯ ರಸ್ತೆಗಳು ಸೇರಿದಂತೆ ತಿರುವುಗಳು ರಾಡಿಯಿಂದ ತುಂಬಿದ್ದು ಜನರು ಓಡಾಡಲು ತೀವ್ರ ಹರಸಾಹಸ ಪಡುತ್ತಿದ್ದಾರೆ.

ಲಾಕ್‌ಡೌನ್‌ ಘೋಷಣೆಯಾದ ನಂತರ ನಗರಸಭೆ ಆಟೊಗಳು ಬೀಡಿ ಕಾರ್ಮಿಕರ ಕಾಲೊನಿ ಕಡೆಗೆ ಬಂದಿಲ್ಲ. ಒಂದು ಬಾರಿ ಮಾತ್ರ ಟಿಪ್ಪರ್‌ನಿಂದ ಕಸ ಸಾಗಿಸಿದ್ದು ಬಿಟ್ಟರೆ ಮತ್ತೆ ಈ ಕಡೆ ವಾಹನ ಬಂದಿಲ್ಲ. ರಸ್ತೆಗಳ ಪಕ್ಕದಲ್ಲಿ ರಾಶಿರಾಶಿಯಾಗಿ ಬಿದ್ದಿರುವ ಕಸವೇ ಇದಕ್ಕೆ ಸಾಕ್ಷಿಯಾಗಿದೆ. ಮನೆಗಳ ಅಕ್ಕಪಕ್ಕದಲ್ಲಿ ಮಾತ್ರವಲ್ಲದೇ ಸಮೀಪದಲ್ಲೇ ಇರುವ ವಿವೇಕಾನಂದ ನಗರದ ಮುಖ್ಯ ರಸ್ತೆ ಬದಿಯಲ್ಲೂ ಜನರು ಕಸ ಬಿಸಾಡಿದ್ದಾರೆ.

‘ಮನೆಯಲ್ಲೇ ಎಷ್ಟು ದಿನ ಕಸವನ್ನು ಡಬ್ಬಿಯಲ್ಲಿ ಇಟ್ಟುಕೊಳ್ಳೋಣ. ಕೋವಿಡ್‌ ಭಯದಿಂದಾಗಿ ನಗರಸಭೆ ಆಟೊ, ಟಿಪ್ಪರ್‌ಗಳು ಕೂಡ ಕಸ ಸಂಗ್ರಹ ಮಾಡಲು ಬರುತ್ತಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಮನೆಯ ಕಸವನ್ನು ರಸ್ತೆ ಬದಿಯಲ್ಲಿ ಸುರಿಯುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಬಡಾವಣೆಯ ನಿವಾಸಿ ಸಲೀಂ ನೋವು ವ್ಯಕ್ತಪಡಿಸಿದರು.

ರಸ್ತೆಗಳ ಬದಿಯಲ್ಲಿ ಸ ಕಚೆಲ್ಲಾಡುತ್ತಿರುವ ಕಾರಣ ಕಾಲೊನಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಕಸ ತಿನ್ನಲು ಬರುವ ನಾಯಿಗಳು ಮಕ್ಕಳನ್ನು ಕಚ್ಚುತ್ತಿವೆ. ಕಸ ಎಸೆಯಲು ತೆರಳುವ ಮಹಿಳೆಯರನ್ನು ಕಚ್ಚಿ ಗಾಯಗೊಳಿಸುತ್ತಿವೆ. ಪ್ರತಿದಿನ ಒಂದಲ್ಲಾ ಒಂದು ಕಡೆ ನಾಯಿ ಕಡಿತದ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ನಗರಸಭೆ ಸದಸ್ಯರು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

ಹೊರಗೆ ಬರಲು ಅಸಾಧ್ಯ: ಬೀಡಿ ಕಾರ್ಮಿಕರ ಕಾಲೊನಿ ನಿವಾಸಿಗಳು ಮಳೆ ಎಂದರೆ ಹೆದರುತ್ತಾರೆ. ಬಹುತೇಕ ಮನೆಗಳು ಇಳಿಜಾರಿನ ಜಾಗದಲ್ಲಿದ್ದು ಜೋರು ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತದೆ. ರಾತ್ರಿಯ ವೇಳೆ ಮಳೆ ಬಂದರೆ ನುಗ್ಗಿದ ನೀರನ್ನು ಹೊರಗೆ ಹಾಕುವಲ್ಲೇ ನಿವಾಸಿಗಳು ರಾತ್ರಿ ಕಳೆಯಬೇಕಾಗುತ್ತದೆ. ಸಮರ್ಪಕವಾಗಿ ಒಳಚರಂಡಿ ವ್ಯವಸ್ಥೆ ಮಾಡಿದ ಕಾರಣ ಜನರು ಸಂಕಷ್ಟ ಅನುಭವಿಸಬೇಕಾಗಿದೆ.

ದೊಡ್ಡ ಮಳೆ ಮಾತ್ರವಲ್ಲದೇ ಸೋನೆ ಮಳೆ ಬಂದರೂ ಜನರ ಜೀವನ ಅಸ್ತವ್ಯಸ್ಥಗೊಳ್ಳುತ್ತದೆ. ಕಳೆದ ಹಲವು ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು ಮನೆ ಬಾಗಿಲಿನ ಮುಂದೆಯೇ ರಾಡಿ ನೀರು ನಿಂತಿದೆ. ಹೊರಗೆ ಬಂದರೆ ಕೊಳಚೆ ನೀರಿನಲ್ಲಿ ಓಡಾಡಬೇಕಾಗುತ್ತದೆ. ಹೀಗಾಗಿ ಜನರು ಮನೆಯಿಂದ ಹೊರ ಬರಲೂ ಹಿಂದೇಟು ಹಾಕುತ್ತಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಜಾರಿ ಬಿದ್ದವರಿಗೆ ಲೆಕ್ಕವೇ ಇಲ್ಲ.

‘ನಮ್ಮ ಮನೆಯ ಮುಂದೆ ಹಲವು ವರ್ಷಗಳಿಂದ ರಸ್ತೆ ಮಾಡಿಲ್ಲ. ಈಗ ತುಂತುರು ಮಳೆ ಸುರಿಯುತ್ತಿದ್ದು ರಸ್ತೆಗೆ ಇಳಿದರೆ ಮಂಡಿಯುದ್ದ ಕಾಲು ಹೂತುಕೊಳ್ಳುತ್ತದೆ. ಹೀಗಾಗಿ ನಾವು ಮನೆಯಿಂದ ಹೊರಗೆ ಬರಲೂ ಸಾಧ್ಯವಾಗುತ್ತಿಲ್ಲ’ ಕಾರ್ಮಿಕರಾದ ಸಲ್ಮಾ ಹೇಳಿದರು.

ಈ ಬಡಾವಣೆ ರೂಪಿಸಿ 12 ವರ್ಷವಾಗಿದ್ದು ನಗರಸಭೆ ಇಲ್ಲಿಯ ಜನರಿಗೆ ಮೂಲಸೌಲಭ್ಯ ಒದಗಿಸಲು ವಿಫಲವಾಗಿದೆ. ಬೀಡಿ ಕಾರ್ಮಿಕ ನಿವಾಸಿಗಳ ಸಹಕಾರ ಸಂಘ ನಿವೇಶನ ಅಭಿವೃದ್ಧಿಗೊಳಿಸಿತ್ತು. 12 ವರ್ಷದ ಹಿಂದೆ ಬಡಾವಣೆಯನ್ನು ನಗರಸಭೆ ಸ್ವಾಧಿನಕ್ಕೆ ಪಡೆದಿದೆ. ಮಳೆ ಸುರಿದರೆ ಅಲ್ಲಿಯ ಜನರ ಬದುಕು ಕೊಳಚೆ ನೀರಿನಲ್ಲಿ ಮುಳುಗುತ್ತದೆ. ಸಾಂಕ್ರಾಮಿಕ ರೋಗಗಳಿಂದ ಜನರು ಪರಿತಪಿಸುತ್ತಾರೆ.

‘ನಗರಸಭೆಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸದಸ್ಯರಿಗೆ ಅಧಿಕಾರ ಇಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಿಗಳು ಜನರಿಗೆ ಮೋಸ ಮಾಡುತ್ತಿದ್ದಾರೆ. ಅಧಿಕಾರಿಗಳ ದರ್ಬಾರ್‌ ವಿಪರೀತವಾಗಿದೆ. ಜನರು ನಗರಸಭಾ ಸದಸ್ಯರನ್ನು ಪ್ರಶ್ನೆ ಮಾಡುತ್ತಾರೆ. ಅಧಿಕಾರಿಗಳಲ್ಲಿ ಇದೇ ಮನೋಭಾವ ಮುಂದುವರಿದರೆ ಜನರ ಜೊತೆಗೂಡಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ನಗರಸಭಾ ಸದಸ್ಯರೊಬ್ಬರು ಎಚ್ಚರಿಕೆ ನೀಡಿದರು.

ಟೆಂಡರ್‌ ಕತೆ ಹೇಳ್ತಾರೆ ಕಮೀಷನರ್‌!

‘ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಆಟೊಗಳು ಮನೆಮನೆಯಿಂದ ಕಸ ಸಂಗ್ರಹ ಮಡುತ್ತಿಲ್ಲ. ಈ ಬಗ್ಗೆ ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದಾಗ, ಹೊಸ ವಾಹನ ಚಾಲಕರ ಟೆಂಡರ್‌ ಆಗಿಲ್ಲ. ಟೆಂಡರ್‌ ಆದ ಕೂಡಲೇ ವಾಹನ ಕಳುಹಿಸುವುದಾಗಿ ಹೇಳಿಯೇ ಮೂರು ತಿಂಗಳಾಗಿದೆ’ ಎಂದು 3ನೇ ವಾರ್ಡ್‌ ಸದಸ್ಯ ಜಾಕೀರ್‌ ಪಾಷಾ ತಿಳಿಸಿದರು.

‘ಕಾಲೊನಿಯಲ್ಲಿ ಕಸ ಬಿದ್ದು ಚೆಲ್ಲಾಡುತ್ತಿರುವುದನ್ನು ನಗರಸಭೆಯ ಎಂಜಿನಿಯರ್‌ ಗಮನಕ್ಕೆ ತಂದಾಗ ಟಿಪ್ಪರ್‌ ತರಿಸಿ ಕಸ ಎತ್ತಿಸಿದರು. ಆದರೆ ಕಸ ಸಂಗ್ರಹ ನಿತ್ಯವೂ ನಡೆಯದ ಕಾರಣ ಇಡೀ ಕಾಲೊನಿಯಲ್ಲಿ ಕಸ ನಿರ್ವಹಣೆಯೇ ಒಂದು ಸಮಸ್ಯೆಯಾಗಿದೆ. ಅಧಿಕಾರಿಗಳಿಗೆ ಬರೀ ಮನವಿ ಕೊಡುವುದೇ ಆಗಿದೆ. ಆದರೆ ಕೆಲಸ ಮಾತ್ರ ಆಗುತ್ತಿಲ್ಲ’ ಎಂದರು.

‘ನಮ್ಮ ಕಾಲೊನಿ ಜೊತೆಗೆ ಕೆಎಚ್‌ಬಿ ಕಾಲೊನಿ, ಆಟೊ ಚಾಲಕರ ಕಾಲೊನಿ ಸೇರಿ 7 ಕಿ.ಮೀ ವ್ಯಾಪ್ತಿ ಪ್ರದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಇಷ್ಟು ದೊಡ್ಡ ಪ್ರದೇಶಕ್ಕೆ ಕೇವಲ ಇಬ್ಬರು ಪೌರಕಾರ್ಮಿರನ್ನು ನೇಮಿಸಲಾಗಿದೆ. ಅವರೂ ಸರಿಯಾಗಿ ಬಾರದ ಕಾರಣ ಬಡಾವಣೆ ಕಸದಿಂದ ತುಂಬಿ ತುಳುಕುತ್ತಿದೆ’ ಎಂದು ಹೇಳಿದರು.

ಅಧಿಕಾರಿಗಳೇ, ಇಲ್ಲಿ ಒಂದು ದಿನ ಇರಿ

‘ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳು ನಮ್ಮ ಕಾಲೊನಿಯಲ್ಲಿ ಬಂದು ಒಂದು ದಿನ ವಾಸ್ತವ್ಯ ಮಾಡಬೇಕು. ಆಗ ಮಾತ್ರ ನಾವು ಅನುಭವಿಸುತ್ತಿರುವ ಸಂಕಷ್ಟ ಅವರಿಗೆ ಅರ್ಥವಾಗುತ್ತದೆ’ ಎಂದು ಕಾಲೊನಿಯ ಶಬೀನಾ ಬೇಗಂ ಹೇಳಿದರು.

‘ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳು ಹಾಡು ಹೇಳಲು ಆರಂಭಿಸುತ್ತವೆ. ಅಧಿಕಾರಿಗಳು ಎಸಿ ಮನೆ, ಎಸಿ ಆಫೀಸ್‌ಗಳಲ್ಲಿ ಇರುತ್ತಾರೆ. ಅವರು ನಮ್ಮ ಬಡಾವಣೆಗೆ ಬಂದು ಒಂದು ದಿನ ಸೊಳ್ಳೆಗಳಿಂದ ಕಚ್ಚಿಸಿಕೊಂಡರೆ ಅವರಿಗೂ ಅರ್ಥವಾಗುತ್ತದೆ. ಜಿಲ್ಲಾಧಿಕಾರಿ, ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೂ ನಮ್ಮ ಬಡಾವಣೆಯ ಕಷ್ಟ ಮುಗಿದಿಲ್ಲ’ ಎಂದು ನೋವು ವ್ಯಕ್ತಪಡಿಸಿದರು.

***

ಆಟೊ ಕೊರತೆಯಿಂದ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಕಸ ಸಂಗ್ರಹಕ್ಕೆ ಸಮಸ್ಯೆಯಾಗಿತ್ತು. ಈಗ ಹೊಸದಾಗಿ 6 ಆಟೊಗಳು ಬಂದಿದ್ದು ಎರಡು ದಿನಕ್ಕೊಮ್ಮೆ ಕಸ ಸಂಗ್ರಹ ಮಾಡಲಾಗುವುದು
–ಎಸ್‌.ಲೋಕೇಶ್‌, ಪೌರಾಯುಕ್ತ, ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT