ಸೋಮವಾರ, ಮೇ 17, 2021
22 °C
ಕಾರ್ಯಾದೇಶ ಇಲ್ಲದೆ ಕೆಲಸಕ್ಕೆ ಅನುಮತಿ ನೀಡಿದ್ದ ಯಾಸ್ಮಿನ್‌ ತಾಜ್‌

ನೀಲನಕೊಪ್ಪಲು: ಮುಖ್ಯ ಶಿಕ್ಷಕಿಗೆ ನೋಟಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ನೀಲನಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿಯಲು ಕಾರ್ಯಾದೇಶ ಇಲ್ಲದಿದ್ದರೂ ಕೆಲಸ ಮಾಡಲು ಗುತ್ತಿಗೆದಾರರಿಗೆ ಅವಕಾಶ ನೀಡಿರುವ ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್‌ ತಾಜ್‌ ಅವರಿಗೆ ನೋಟಿಸ್‌ ನೀಡಲಾಗಿದೆ.

‘ಶಿಥಿಲ ಶಾಲೆಯ ಹುಳುಕು ಮುಚ್ಚಲು ಬಣ್ಣ!’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಶುಕ್ರವಾರ ವರದಿ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಈ ನೋಟಿಸ್‌ ನೀಡಲಾಗಿದೆ.

ಶಿಕ್ಷಣ ಸಂಯೋಜಕ ರಾಮಚಂದ್ರ ಶುಕ್ರವಾರ ಶಾಲೆಗೆ ತೆರಳಿ ಮುಖ್ಯ ಶಿಕ್ಷಕಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದಾರೆ.

‘ಮುಖ್ಯ ಶಿಕ್ಷಕಿ ಯಾಸ್ಮಿನ್‌ ತಾಜ್‌ ಗುತ್ತಿಗೆದಾರನಿಂದ ಕೆಲಸ ಹಂಚಿಕೆ ಆದೇಶ ಪಡೆದಿಲ್ಲ. ಅದರೂ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯಲು ಅವಕಾಶ ನೀಡಿದ್ದಾರೆ. ಯಾವ ಅನುದಾನದಲ್ಲಿ ಬಣ್ಣ ಬಳಿಯಲಾಗುತ್ತಿದೆ ಎಂಬ ಬಗೆಗೂ ಅವರಲ್ಲಿ ಮಾಹಿತಿ ಇಲ್ಲ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ವರದಿ ಮಾಡುವಂತೆ ತಿಳಿಸಲಾಗಿದೆ’ ಎಂದು ರಾಮಚಂದ್ರ ತಿಳಿಸಿದ್ದಾರೆ.

‘ಗುತ್ತಿಗೆದಾರನಿಗೆ ಉಪಯೋಗಿತ ಪ್ರಮಾಣ ‍ಪತ್ರ ನೀಡದಂತೆಯೂ ಮುಖ್ಯ ಶಿಕ್ಷಕಿಗೆ ಸೂಚಿಸಲಾಗಿದೆ. ತಕ್ಷಣ ಕೆಲಸ ನಿಲ್ಲಿಸುವಂತೆ ಗುತ್ತಿಗೆದಾರನಿಗೆ ತಿಳಿಸಿದ್ದೇನೆ. ಇಲಾಖೆಯ ಗಮನಕ್ಕೆ ತರದೆ, ಕಟ್ಟಡದ ಶಿಥಿಲ ಭಾಗವನ್ನು ದುರಸ್ತಿ ಮಾಡದೆ ಬಣ್ಣ ಬಳಿಯುತ್ತಿರುವ ಕುರಿತು ಅವರಿಂದಲೂ ಮಾಹಿತಿ ಕೇಳಲಾಗಿದೆ. ಖುದ್ದು ಕಚೇರಿಗೆ ಬಂದು ವಿವರಣೆ ನೀಡುವಂತೆ ಸೂಚಿಸ ಲಾಗಿದೆ’ ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ 15ನೇ ಹಣಕಾಸು ಯೋಜನೆಯ ಅನುದಾನ ಬಳಸಿಕೊಂಡು ಶಾಲೆಯ ಕಟ್ಟಡಕ್ಕೆ ಬಣ್ಣ ಬಳಿಯಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಾರ್ಯಾದೇಶ ಪಡೆಯದೆ, ಅನುದಾನವೂ ಬಿಡುಗಡೆ ಆಗದೆ ಕೆಲಸ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ. ತಾಲ್ಲೂಕಿನ ಇತರ ಶಾಲೆಗಳಲ್ಲಿಯೂ ಇಂತಹ ಕೆಲಸ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ’ ಎಂದು ರಾಮಚಂದ್ರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.