ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನರಲ್ಲಿದೆ ಅಗಾಧ ಶಕ್ತಿ: ಎಂವಿವಿ

15 ದಿನಗಳ ರಾಷ್ಟ್ರೀಯ ಯುವ ಸ್ವಯಂಸೇವಕರ ತರಬೇತಿ ಶಿಬಿರಕ್ಕೆ ಚಾಲನೆ
Last Updated 27 ಸೆಪ್ಟೆಂಬರ್ 2019, 12:51 IST
ಅಕ್ಷರ ಗಾತ್ರ

ಮಂಡ್ಯ: ‘ಯುವಜನರಲ್ಲಿ ಅಗಾಧ ಶಕ್ತಿ ಅಡಗಿದ್ದು, ಅದನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು. ಉತ್ತಮ ಸಮಾಜ ನಿರ್ಮಿಸುವತ್ತ ಯುವಜನರು ಗಮನ ಹರಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರದ ವತಿಯಿಂದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆದ 15 ದಿನಗಳ ವಸತಿ ಸಹಿತ ರಾಷ್ಟ್ರೀಯ ಯುವ ಸ್ವಯಂ–ಸೇವಕರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಯುವಜನರು ಯಾವ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದರ ಮೇಲೆ ರಾಷ್ಟ್ರ, ರಾಜ್ಯದ ಅಭಿವೃದ್ಧಿ ನಿಂತಿರುತ್ತದೆ. ಅವರ ಕೊಡುಗೆ ಆಧಾರದ ಮೇಲೆ ಅಭಿವೃದ್ಧಿಯನ್ನು ಅಳೆಯಬಹುದು. ಯುವಜನರು ತಮ್ಮಲ್ಲಿ ಇರುವ ಅಗಾಧ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕೇವಲ ಪಠ್ಯ ಪುಸ್ತಕದಿಂದ ಏನೂ ಅಭಿವೃದ್ಧಿಯಾಗುವುದಿಲ್ಲ. ವಾಸ್ತವವಾಗಿ ನಾವು ಸಮಾಜದೊಂದಿಗೆ ಬೆರೆತು ಸಾಮಾಜಿಕ ಪಿಡುಗಗಳಾದ ಅನಕ್ಷರತೆ, ಮಹಿಳೆ, ಮಕ್ಕಳ ಶೋಷಣೆ, ಅಸಮಾನತೆಯನ್ನು ಪ್ರತಿ ಮನೆ, ಮನಸ್ಸಿನಿಂದ ಹೋಗಲಾಡಿಸಿ ಸಮ ಸಮಾಜ ನಿರ್ಮಾಣ ಮಾಡುವತ್ತ ಯುವಕರು ಕಾರ್ಯೋನ್ಮುಖರಾಗಬೇಕು’ಎಂದು ಹೇಳಿದರು.

‘ಭಾರತ ಪ್ರಪಂಚದಲ್ಲಿ ಒಂದು ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಯುವಕರು ಅದನ್ನು ಮತ್ತಷ್ಟು ಬಲಪಡಿಸಲು ಕೈಜೋಡಿಸಬೇಕು. ಜೀವನದಲ್ಲಿ ಶಿಸ್ತು ರೂಢಿಸಿಕೊಂಡು ಸ್ವಚ್ಛ, ನೈರ್ಮಲ್ಯ, ಉತ್ತಮ ಪರಿಸರ ನಿರ್ಮಾಣ, ಸಾರ್ವಜನಿಕ ಆಸ್ತಿ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಾಮಾಜಿಕ ಅರಣ್ಯ ವಿಭಾಗದ ಅಧಿಕಾರಿ ವೆಂಕಟೇಶ್‌ ‘ವಿದ್ಯಾಭ್ಯಾಸದ ನಂತರ ಯುವಜನರು ವೃತ್ತಿ ಆಯ್ಕೆಯಲ್ಲಿ ಬಹಳ ಎಚ್ಚರ ವಹಿಸಬೇಕು. ಯಾವುದೇ ವೃತ್ತಿಯ ಬಗ್ಗೆ ಗೌರವ, ಸ್ವಾಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ಜಾಗತಿಕ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುವ ನಿಟ್ಟಿನಲ್ಲಿ ಯುವಕರು ಗಟ್ಟಿ ಹೆಜ್ಜೆ ಇಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಮಾತನಾಡಿ ‘ರೈತರು ಕೇವಲ ಒಂದೇ ಬೆಳೆಗೆ ಸೀಮಿತವಾಗಬಾರದು. ಮಿಶ್ರ ಬೇಸಾಯಕ್ಕೆ ಒತ್ತು ನೀಡಿ ಒಂದು ನಷ್ಟವಾದರೆ ಮತ್ತೊಂದರಲ್ಲಿ ಲಾಭ ಕಾಣುವಂತಾಗಬೇಕು. ಸಾಂಪ್ರದಾಯಿಕವಾಗಿ ಬೆಳೆಯುವ ಕಬ್ಬು, ಭತ್ತ ಬಿಟ್ಟು ವಿಭಿನ್ನ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದರು.

ನೆಹರೂ ಯುವ ಕೇಂದ್ರದ ಉಪ ನಿರ್ದೇಶಕ ಡಿ.ದಯಾನಂದ್‌, ಜಿಲ್ಲಾ ಘಟಕದ ಸಮನ್ವಯಾಧಿಕಾರಿ ಅನಂತಪ್ಪ, ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಎ.ಸಿ.ರಮೇಶ್‌, ಗೋವಿಂದ ಭಟ್‌, ಲೆಕ್ಕಾಧಿಕಾರಿ ಬಸವರಾಜು, ವಾರ್ತಾ ಇಲಾಖೆಯ ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT