ಸೋಮವಾರ, ಆಗಸ್ಟ್ 2, 2021
20 °C
ಖಾಸಗೀಕರಣ, ಸ್ಥಳಾಂತರ, ವಿಲೀನ; ಮೂರು ಆಯ್ಕೆಯೊಂದಿಗೆ ಸರ್ಕಾರಕ್ಕೆ ವರದಿ ನೀಡಿದ ತಜ್ಞರು

ಮೈಷುಗರ್‌ ಕಾರ್ಖಾನೆಗೆ ‘ಒ ಅಂಡ್‌ ಎಂ’ ಒಳ್ಳೆಯದಲ್ಲ!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಮಂಡ್ಯ: ಕಾರ್ಯಾಚರಣೆ ಹಾಗೂ ನಿರ್ವಹಣೆ (ಒ ಅಂಡ್‌ ಎಂ) ಮಾದರಿಯಲ್ಲಿ ಮೈಷುಗರ್‌ ಕಾರ್ಖಾನೆ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಜಿಲ್ಲೆಯ ಹಲವು ಸಂಘಟನೆಗಳ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಕೂಡ ಇದೇ ಮಾದರಿ ಪರವಾಗಿದ್ದಾರೆ. ಆದರೆ ಮೈಷುಗರ್‌ನಂತಹ ಕಾರ್ಖಾನೆಗೆ ‘ಒ ಅಂಡ್‌ ಎಂ’ ಒಳ್ಳೆಯದಲ್ಲ ಎಂದು ತಜ್ಞರ ಸಮಿತಿಯೊಂದು ಅಭಿಪ್ರಾಯಪಟ್ಟಿದೆ.

ಕಾರ್ಖಾನೆಗೆ ಪುನಶ್ಚೇತನ ನೀಡುವ ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಸಿಕ್ಕಿದೆ. ಸಹವಿದ್ಯುತ್‌ ಘಟಕ, ಡಿಸ್ಟೆಲರಿ ಹೊಂದಿರುವ ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂ ಮಾಡಬಾರದು. ದೇಶದ ವಿವಿಧೆಡೆ ಇದೇ ಮಾದರಿಯಲ್ಲಿ ಆರಂಭವಾದ ಸಕ್ಕರೆ ಕಾರ್ಖಾನೆಗಳು ಅವನತಿ ಹೊಂದಿವೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಒ ಅಂಡ್‌ ಎಂ ಜವಾಬ್ದಾರಿ ಪಡೆಯುವ ಖಾಸಗಿ ಏಜೆನ್ಸಿಗೆ ಕಬ್ಬು ಖರೀದಿ ಹಾಗೂ ಸಕ್ಕರೆ ಮಾರಾಟದ ಅವಕಾಶ ಇರುವುದಿಲ್ಲ. ಈ ಎರಡು ಪ್ರಮುಖ ಜವಾಬ್ದಾರಿಗಳು ಮತ್ತೆ ಸರ್ಕಾರಕ್ಕೆ ಹೊರೆಯಾಗುತ್ತವೆ. ಲಾಭದ ಉದ್ದೇಶದಿಂದ ಬರುವ ಏಜೆನ್ಸಿ ರೈತರ ಹಿತ ಕಾಯುವುದಿಲ್ಲ. ಆಗ ಮತ್ತೆ ಕಾರ್ಖಾನೆ ಸ್ಥಗಿತಗೊಳ್ಳುವ ಅಪಾಯವಿದೆ ಎಂದು ಹೇಳಲಾಗಿದೆ.

ಖಾಸಗೀಕರಣ: ಒ ಅಂಡ್‌ ಎಂಗೆ ಪರ್ಯಾಯವಾಗಿ ಸಮಿತಿ ಮೂರು ಆಯ್ಕೆಗಳನ್ನು ನೀಡಿದೆ. ಮೊದಲನೆಯದು ಖಾಸಗೀಕರಣ, ಮೈಷುಗರ್ ಆಸ್ತಿಯ ಮಾಲೀಕತ್ವ ಬದಲಾವಣೆ ಇಲ್ಲದೆ ಕೇವಲ ಕಾರ್ಖಾನೆಯನ್ನು ನಿಗದಿತ ಅವಧಿವರೆಗೆ ಗುತ್ತಿಗೆ ನೀಡುವುದು. ಖಾಸಗಿ ಮಾಲೀಕ ತನ್ನ ಅನುಕೂಲತೆಗಾಗಿ ಯಂತ್ರೋಪಕರಣಗಳ ದುರಸ್ತಿ, ಬದಲಾವಣೆಯೊಂದಿಗೆ ಕಾರ್ಖಾನೆ ನಡೆಸಬಹುದು. ಅವಧಿಯ ಅಂತ್ಯದಲ್ಲಿ ಕಾರ್ಖಾನೆ ಯಾವ ಸ್ಥಿತಿಯಲ್ಲಿದೆಯೋ ಅದೇ ಸ್ಥಿತಿಯಲ್ಲಿ ವಾಪಸ್‌ ನೀಡುತ್ತಾನೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

ಸ್ಥಳಾಂತರ: 2ನೇ ಆಯ್ಕೆಯಲ್ಲಿ ತಜ್ಞರು ಕಾರ್ಖಾನೆಯ ಸ್ಥಳಾಂತರಕ್ಕೆ ಶಿಫಾರಸು ಮಾಡಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕಾರ್ಖಾನೆಯನ್ನು 5 ಕಿ.ಮೀ.ಯೊಳಗಿನ ಜಾಗಕ್ಕೆ ಸ್ಥಳಾಂತರ ಮಾಡುವುದು. ಈಗಿರುವ ಕಾರ್ಖಾನೆ ಜಾಗ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು ಅದನ್ನು ಅನ್ಯ ಉದ್ದೇಶಕ್ಕೆ ಬಳಸುವುದು. ಹಣಕಾಸು ಉದ್ದೇಶಕ್ಕೆ ಜಾಗ (ಲ್ಯಾಂಡ್‌ ಮಾನಿಟೈಸಿಂಗ್‌) ಬಳಸಿ ಹಲವು ವರ್ಷಗಳಿಂದ ಉಂಟಾಗಿರುವ ನಷ್ಟವನ್ನು ತುಂಬಿಕೊಳ್ಳಬಹುದು. ಸ್ಥಳಾಂತರಗೊಂಡ ಕಾರ್ಖಾನೆಯನ್ನು ನಿಗದಿತ ಅವಧಿವರೆಗೆ ಖಾಸಗಿ ಮಾಲೀಕನಿಗೆ ಒಪ್ಪಿಸಿದರೆ ಆತ ಕಾರ್ಖಾನೆ ಮುನ್ನಡೆಸುತ್ತಾನೆ. 

ವಿಲೀನ: 3ನೇ ಆಯ್ಕೆಯಲ್ಲಿ ಮೈಷುಗರ್‌ ಕಾರ್ಖಾನೆಯನ್ನು ಜಿಲ್ಲೆಯ ಇತರ ಕಾರ್ಖಾನೆಗಳ ಜೊತೆ ವಿಲೀನಗೊಳಿಸುವ ಪ್ರಸ್ತಾಪ ಮಾಡಿದೆ. ಮೈಷುಗರ್ ವ್ಯಾಪ್ತಿಯಲ್ಲಿ 108 ಹಳ್ಳಿಗಳಿದ್ದು ಅವುಗಳನ್ನು ಇತರ ಕಾರ್ಖಾನೆ ವ್ಯಾಪ್ತಿಗೆ ಸೇರಿಸುವುದು. ಕಡ್ಡಾಯವಾಗಿ ಕಬ್ಬು ಅರೆಯಬೇಕು ಎಂಬ ಷರತ್ತಿನೊಂದಿಗೆ ವಿಲೀನ ಮಾಡಬೇಕು. ನಂತರ ಈಗಿರುವ ಕಾರ್ಖಾನೆಯನ್ನು ಮುಚ್ಚುವುದೇ ಒಳಿತು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

ಈ ವರದಿ ಅನ್ವಯ ಸರ್ಕಾರ ಖಾಸಗೀಕರಣದ ನಿರ್ಧಾರ ಕೈಗೊಂಡು ಅಧಿಸೂಚನೆ ಹೊರಡಿಸಿತ್ತು. ಆದರೆ ರೈತ ವಲಯದಲ್ಲಿ ವಿರೋಧ ವ್ಯಕ್ತವಾದ ಕಾರಣ ಅದನ್ನು ರದ್ದು ಮಾಡಿದೆ. ಸದ್ಯ, ಒ ಅಂಡ್‌ ಎಂ ಮೂಲಕವೇ ಕಾರ್ಖಾನೆ ಆರಂಭಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ತಜ್ಞರ ವಿರೋಧದ ನಡುವೆಯೂ ಮೈಷುಗರ್‌ ಒಂ ಅಂಡ್‌ ಎಂ ಆಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಸರ್ಕಾರಿ ಸ್ವಾಮ್ಯದ ಪ್ರಸ್ತಾಪ ಇಲ್ಲ

ತಜ್ಞರು ನೀಡಿರುವ ವರದಿಯಲ್ಲಿ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳುವ ಯಾವುದೇ ಪ್ರಸ್ತಾಪ ಇಲ್ಲ. ಸರ್ಕಾರವೇ ಕಾರ್ಖಾನೆ ನಡೆಸಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ನಡೆಸುತ್ತಿದೆ. ಆದರೆ ಸಮಿತಿ ಈ ಕುರಿತು ಕೈಚೆಲ್ಲಿದೆ.

‘ಐತಿಹಾಸಿಕ ಕಾರ್ಖಾನೆಯನ್ನು ಮುನ್ನಡೆಸುವ ಕಾಳಜಿಯಾಗಲೀ, ಆಸಕ್ತಿಯಾಗಲೀ ಸರ್ಕಾರಕ್ಕೆ ಇಲ್ಲ. ತಜ್ಞರು ನೀಡಿರುವ ಪ್ರಸ್ತಾಪಗಳನ್ನು ಒಪ್ಪಲು ಸಾಧ್ಯವಿಲ್ಲ. ಸ್ಥಳೀಯ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ರೈತ ಮುಖಂಡ ಬೋರಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು