ಮಂಗಳವಾರ, ಅಕ್ಟೋಬರ್ 27, 2020
24 °C
ಭೂ ಸುಧಾರಣೆ, ಎಪಿಎಂಸಿ ಕಾಯ್ದೆ, ವಿದ್ಯುತ್‌ ಖಾಸಗೀಕರಣ ತಿದ್ದುಪಡಿಗೆ ವಿರೋಧ

ಮಂಡ್ಯ: ಜಿಲ್ಲಾ ಬಂದ್‌ಗೆ ವಿವಿಧ ಸಂಘಟನೆಗಳ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಭೂ ಸುಧಾರಣೆ ಹಾಗೂ ಎಪಿಎಂಸಿ ಕಾಯ್ದೆ, ವಿದ್ಯುತ್‌ ಖಾಸಗೀಕರಣ ಮಾಡಲು ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟದ ಅಡಿ ಸೆ. 28ರಂದು ಮಂಡ್ಯ ಜಿಲ್ಲೆಯಾದ್ಯಂತ ಬಂದ್‌ ಆಚರಿಸಲು  ವಿವಿಧ ಸಂಘಟನೆಗಳ ಮುಖಂಡರು ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಿದರು.

ರೈತ ಸಂಘ, ಕರ್ನಾಟಕ ಜನಶಕ್ತಿ, ದಸಂಸ, ಮಹಿಳಾ ಮುನ್ನಡೆ, ಸಿಐಟಿಯು, ಆಟೊ ಚಾಲಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಸೆ. 28ರಂದು ಬಂದ್‌ ನಡೆಸಲು ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಿ, ಬಂದ್‌ಗೆ ಸಿದ್ಧತೆ ನಡೆಸಲು ಸೂಚಿಸಲಾಯಿತು.

ಸಣ್ಣ ಹಿಡುವಳಿದಾರರನ್ನು ರಕ್ಷಿಸಿ ಸಹಕಾರಿ ಕೃಷಿಯನ್ನು ಪ್ರೋತ್ಸಾಹಿಸುವ ಬದಲಿ ಕಾರ್ಪೊರೆಟ್‌ ಗುತ್ತಿಗೆಯನ್ನು ಪೋತ್ಸಾಹಿಸುವ ಬದಲು ಕಾರ್ಪೊರೆಟ್‌ ಗುತ್ತಿಗೆ ಪ್ರೋತ್ಸಾಹಿಸಲಾಗುತ್ತಿದೆ. ಎಪಿಎಂಸಿಯನ್ನು ಸುವ್ಯವಸ್ಥಿತಗೊಳಿಸುವ ಬದಲು ಇದ್ದ ರಕ್ಷಣೆಯನ್ನು ಕಿತ್ತು ಕಾರ್ಪೊರೆಟ್‌ ಮಾರುಕಟ್ಟೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ರೈತರು, ಮಂಡಿ ಮಾಲೀಕರು, ಹಮಾಲಿಗಳು, ನೌಕರರು ಎಲ್ಲರೂ ಸಂಕಷ್ಟಗಳ ಸುಳಿಗೆ ಸಿಲುಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ನೀತಿ ಖಾಸಗೀಕರಣ ರೈತರ ಸಂಕಷ್ಟಕ್ಕೆ ಬರೆ ಎಳೆಯುತ್ತದೆ. ಕೈಗಾರಿಕೆ ನೀತಿಯನ್ನು ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಯಾರು ಬೇಕಾದರೂ ಎಷ್ಟು ಭೂಮಿಯನ್ನಾದರೂ ಖರೀದಿಸಲು ಅವಕಾಶ ನೀಡಲಾಗಿದ್ದು, ರೈತರ ಬದುಕು ಬೀದಿಗೆ ಬೀಳಲಿದೆ. ಇದನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಅವಕಾಶ ನೀಡದಂತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಂದ್‌ ಮಾಡಬೇಕು ಎಂದು ನಿರ್ಣಯಿಸಿದರು.

ಬಂದ್‌ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್‌.ಕೆಂಪೂಗೌಡ ಮಾತನಾಡಿ ‘ರೈತರಿಗೆ ಮರಣ ಶಾಸನವಾಗಲಿರುವ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ, ಸರ್ಕಾರ ಹಿಂದೆ ಸರಿದಿಲ್ಲ. ರೈತರ ಹಿತ ಕಾಯುವ ಬದಲು ಕಾರ್ಪೊರೆಟ್‌ ಬಂಡವಾಳ ಶಾಹಿಗಳ ಹಿತ ಕಾಯಲು ಸರ್ಕಾರ ಮುಂದಾಗಿದ್ದು, ಸುಗ್ರೀವಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಖಂಡಿಸಿ ಸೆ. 28ರಂದು ಬಂದ್‌ ನಡೆಸಲಾಗುತ್ತಿದ್ದು, ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲತಾ ಶಂಕರ್‌, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕರ್ನಾಟಕ ಜನಶಕ್ತಿ ಸಂಘಟನೆ ಸಿದ್ದರಾಜು,  ಕಮಲಾ, ಪೂರ್ಣಿಮಾ, ಮಧುಚಂದನ್‌, ರಾಮಕೃಷ್ಣಪ್ಪ, ಕನ್ನಲಿ ನವೀನ್‌, ಲಿಂಗಪ್ಪಾಜಿ, ರವಿಕುಮಾರ್‌, ಸತೀಶ್‌, ಕೃಷ್ಣೇಗೌಡ, ಹುರಗಲವಾಡಿ ರಾಮಯ್ಯ, ಕಲ್ಲಹಳ್ಳಿ ರವೀಂದ್ರ, ಎಂ.ಬಿ.ನಾಗಣ್ಣಗೌಡ,ಲಂಕೇಶ್‌ ಮಂಗಲ, ರಾಜಶೇಖರ್‌, ಇದ್ದರು.

ಪ್ರತ್ಯೇಕ ಪತ್ರಿಕಾ ಗೋಷ್ಠಿ: ಗೊಂದಲ

ಸೆ. 28ರಂದು ನಡೆಯಲಿರುವ ಬಂದ್‌ಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಜಿಲ್ಲಾ ಘಟಕದ ಸದಸ್ಯರು ಶನಿವಾರ ಪ್ರತ್ಯೇಕ ಪತ್ರಿಕಾ ಗೋಷ್ಠಿ ನಡೆಸಿದರು. ಇದರಿಂದಾಗಿ ರೈತ ರೈತ ಮುಖಂಡರಲ್ಲಿರುವ ಒಗ್ಗಟ್ಟಿನ ಕೊರತೆ ಎದ್ದು ಕಾಣಿಸಿತು.

‘ಭೂಸುಧಾರಣಾ ಮಸೂದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೆ. 28ರಂದು ಹಮ್ಮಿಕೊಂಡಿರುವ ಬಂದ್‌ಗೆ ಸಂಘ ಪೂರ್ಣವಾಗಿ ಬೆಂಬಲಿಸಿ, ಚಳವಳ್ಳಿ ಮಾಡಲಿದ್ದೇವೆ’ ಮೂಲಸಂಘಟನೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ ಹೇಳಿದರು. ಪ್ರಧಾನ ಕಾರ್ಯದರ್ಶಿ ಎಸ್‌.ಮಂಜೇಗೌಡ, ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್‌, ಕಾರ್ಯದರ್ಶಿ ಕೆ.ರಾಮಲಿಂಗೇಗೌಡ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು