ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಪಟ್ಟು ವಾಹನ ಶುಲ್ಕ ವಸೂಲಿ: ದೂರು

Last Updated 4 ಮೇ 2019, 20:14 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಬರುವ ವಾಹನಗಳಿಂದ ನಿಗದಿಗಿಂತ ದುಪ್ಪಟ್ಟು ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹಾಗೂ ಪ್ರವಾಸಿಗರು ದೂರಿದ್ದಾರೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯ ಸಮ್ಮುಖದಲ್ಲಿ ನಡೆದಿರುವ 2018-19ನೇ ಸಾಲಿನ ಟೆಂಡರ್‌ನಲ್ಲಿ ನಮೂದಿಸಿರುವ ಶುಲ್ಕಕ್ಕಿಂತ ಹೆಚ್ಚು ಶುಲ್ಕವನ್ನು ಬಿಡ್ಡುದಾರರು ವಸೂಲಿ ಮಾಡುತ್ತಿದ್ದಾರೆ. ಬಸ್‌, ಮಿನಿ ಬಸ್‌ಗೆ ₹50, ಟೆಂಪೊ, ಕ್ವಾಲಿಸ್‌ಗೆ ₹30 ಹಾಗೂ ಕಾರು, ಜೀಪ್‌ಗಳಿಗೆ ₹20 ಶುಲ್ಕನಿಗದಿ ಮಾಡಲಾಗಿದೆ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ.

ಆದರೆ, ವಾಹನಪಾರ್ಕಿಂಗ್ ಶುಲ್ಕ ವಸೂಲಿ ಮಾಡುವ ಟೆಂಡರ್ ಪಡೆದಿರುವವರು ಪ್ರತಿ ವಾಹನಕ್ಕೂ ನಿಗದಿಗಿಂತ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಿರುವುದು ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌, ಮಿನಿ ಬಸ್‌ಗೆ ₹100, ಟೆಂಪೊ, ಕ್ವಾಲಿಸ್‌ಗೆ ₹80 ಹಾಗೂ ಕಾರು, ಜೀಪ್‌ಗಳಿಗೆ ₹50 ಶುಲ್ಕ ವಸೂಲಿ ಮಾಡಲಾಗುತ್ತಿದೆ.

ಶುಲ್ಕದ ರಸೀದಿಗಳಲ್ಲಿ ವಿಭಿನ್ನ ಒಕ್ಕಣೆ ನಮೂದಿಸಲಾಗುತ್ತಿದೆ. ಕೆಲವು ಟಿಕೆಟ್‌ಗಳಲ್ಲಿ ‘ಕರ್ನಾಟಕ ಸರ್ಕಾರ’ ಎಂದಿದ್ದರೆ, ಮತ್ತೆ ಕೆಲ ಟಿಕೆಟ್‌ಗಳಲ್ಲಿ ‘ರಂಗನಾಥ ದೇವಾಲಯ’ ಎಂದಷ್ಟೇ ಇದೆ.ನಿಗದಿಗಿಂತ ಅಧಿಕ ಶುಲ್ಕ ಮುದ್ರಣಗೊಂಡಿರುವ ಹಾಗೂ ವಿಭಿನ್ನ ಒಕ್ಕಣೆಯ ಟಿಕೆಟ್‌ಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

‘ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ ಬರುವ ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಮೋಸ ನಡೆಯುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಶುಲ್ಕ ವಸೂಲಿದಾರರಿಗೆ ಈಗಾಗಲೇ ಎರಡು ಬಾರಿ ಎಚ್ಚರಿಕೆ ನೀಡಲಾಗಿದೆ. ಮತ್ತೆ ನಿಯಮ ಉಲ್ಲಂಘಿಸಿ ನಿಗದಿತ ದರಕ್ಕಿಂತ ಹೆಚ್ಚು ಶುಲ್ಕ ವಸೂಲಿ ಮಾಡುತ್ತಿರುವುದು ಖಚಿತವಾದರೆ ಟೆಂಡರ್ ರದ್ದುಪಡಿಸಲಾಗುವುದು’ ಎಂದು ತಹಶೀಲ್ದಾರ್ ನಾಗ ಪ್ರಶಾಂತ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT