ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಇಲ್ಲದೇ ಪರದಾಡಿದ ಪ್ರಯಾಣಿಕರು

ಸಾರಿಗೆ ನೌಕರರ ಮಷ್ಕರ; ಡಿಪೊ, ನಿಲ್ದಾಣದ ಆವರಣದಲ್ಲೇ ನಿಂತಿದ್ದ ಬಸ್‌ಗಳು
Last Updated 12 ಡಿಸೆಂಬರ್ 2020, 5:02 IST
ಅಕ್ಷರ ಗಾತ್ರ

ಮಂಡ್ಯ: ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ತೀವ್ರ ವ್ಯತ್ಯಯ ಉಂಟಾಯಿತು.

ಮಂಡ್ಯ ವಿಭಾಗದ 257 ಮಾರ್ಗಗಳ ಪೈಕಿ ಕೇವಲ 50 ಮಾರ್ಗಗಳಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು. ಉಳಿದ ಎಲ್ಲಾ ಮಾರ್ಗಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಪರ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡಬೇಕಾಯಿತು. ಮುಷ್ಕರದ ವಿಷಯ ತಿಳಿಯದೇ ನಿಲ್ದಾಣಕ್ಕೆ ಬಂದಿದ್ದ ಜನರು ಸಂಜೆಯವರೆಗೂ ಬಸ್‌ ಕಾಯುತ್ತಾ ಕುಳಿತುಕೊಳ್ಳಬೇಕಾಯಿತು.

ಬೆಂಗಳೂರು–ಮೈಸೂರು ನಡುವೆ ಓಡಾಡುವ ಬಸ್‌ಗಳ ಸಂಚಾರ ಶೇ 99ರಷ್ಟು ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಂಗಳೂರು–ಮೈಸೂರು ನಗರಗಳಿಗೆ ತೆರಳಬೇಕಾದ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು. ಸಂಜೆಯಾದರೂ ಬಸ್‌ ಸಂಚಾರ ಆರಂಭವಾಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು.

ಬಸ್‌ಗಳು ಸಿದ್ಧವಾಗಿ ನಿಂತಿದ್ದವು, ಆದರೆ ಸಿಬ್ಬಂದಿ ಬಾರದ ಕಾರಣ ಸಂಚಾರ ಸಾಧ್ಯವಾಗಲಿಲ್ಲ. ಹಲವು ಸಿಬ್ಬಂದಿ ನಿಲ್ದಾಣ, ಡಿಪೋದಲ್ಲೇ ಓಡಾಡಿಕೊಂಡಿದ್ದರು. ಆದರೆ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಯಿತು. ಹಲವು ಸಿಬ್ಬಂದಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದರು.

‘ಸಾರಿಗೆ ಸಚಿವರು ವಿಧಾನಸಭಾ ಅಧಿವೇಶನದಲ್ಲಿ ನೀಡಿರುವ ಹೇಳಿಕೆಯಿಂದ ನಮಗೆ ನೋವಾಗಿದೆ. ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವ ಯಾವುದೇ ಪ್ರಸ್ತಾವ ಇಲ್ಲ ಎಂದಿದ್ದಾರೆ. ಹೀಗಾಗಿ ನಾವು ಹೋರಾಟ ತೀವ್ರಗೊಳಿಸಿದ್ದೇವೆ. ಸರ್ಕಾರಿ ನೌಕರರು ಎಂದು ಪರಿಗಣಿಸುವವರೆಗೂ ಹೋರಾಟ ಮುಂದುವರಿಯಲಿದೆ. ತೋಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಖಾಸಗಿ ಬಸ್‌ಗಳ ಹಾವಳಿ: ನಗರದ ಬಸ್‌ ನಿಲ್ದಾಣದ ಮುಂದೆ ಖಾಸಗಿ ಬಸ್‌ಗಳು, ವ್ಯಾನ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ದೃಶ್ಯಗಳು ಸಾಮಾನ್ಯವಾಗಿದ್ದವು. ಕೋವಿಡ್‌ ಕಾರಣದಿಂದಾಗಿ ನಿಂತಲ್ಲೇ ನಿಂತಿದ್ದ ಖಾಸಗಿ ವಾಹನಗಳು ಮುಷ್ಕರವನ್ನು ಉಪಯೋಗಿಸಿಕೊಂಡವು. ಹೆಚ್ಚಿನ ದರ ವಸೂಲಿ ಮಾಡಿ ಸಂಚಾರ ನಡೆಸಿದವು.

ಮಂಡ್ಯದಿಂದ ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣಕ್ಕೆ ತೆರಳುವ ಮಾರ್ಗಗಳ ಪ್ರಯಾಣಿಕರು ಪರದಾಡಬೇಕಾಯಿತು. ‘ನಿತ್ಯ ಪಾಂಡವಪುರಕ್ಕೆ 15 ನಿಮಿಷಕ್ಕೆ ಒಂದರಂತೆ ಬಸ್‌ಗಳು ಇರುತ್ತಿದ್ದವು. ಆದರೆ ಈಗ ಬೆಳಿಗ್ಗೆಯಿಂದಲೂ ಒಂದು ಬಸ್‌ ಬಂದಿಲ್ಲ. ಮುಷ್ಕರದ ವಿಚಾರವೂ ಗೊತ್ತಿರಲಿಲ್ಲ. ಹೀಗಾಗಿ ಪರದಾಡುವಂತಾಗಿದೆ’ ಎಂದು ಪ್ರಯಾಣಿಕ ಶಿವಮೂರ್ತಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT