ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ನಿರ್ಲಕ್ಷ್ಯ, ರೋಗಿ ಸಾವು: ಆರೋಪ

ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಘಟನೆ, ಪರಿಹಾರಕ್ಕೆ ಕುಟುಂಬಸ್ಥರ ಒತ್ತಾಯ
Last Updated 5 ಮಾರ್ಚ್ 2021, 4:11 IST
ಅಕ್ಷರ ಗಾತ್ರ

ಕೆರಗೋಡು: ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರನ್ನು ಕೆರಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ತೆರಳಿದಾಗ ಅಲ್ಲಿ ಸಿಬ್ಬಂದಿ ಇಲ್ಲದ ಕಾರಣ ಚಿಕಿತ್ಸೆ ದೊರಕದೆ ಅವರು ನಿಧನರಾಗಿದ್ದಾರೆ. ಆರೋಗ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿ ಗುರುವಾರ ಕೇಂದ್ರದ ಬಳಿ ಸಂಬಂಧಿಕರು, ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಮಂಡ್ಯ ತಾಲ್ಲೂಕು ಬಸರಾಳು ಹೋಬಳಿ ಹೊಸಹಳ್ಳಿ ಗ್ರಾಮದ ನಿಂಗರಾಜಮ್ಮ (50) ಮೃತ ಮಹಿಳೆ.

ನಿಂಗರಾಜಮ್ಮ ಎರಡು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದರು. ಗುರುವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ಪ್ರಯಾಣಿಕರಿಂದ ಭರ್ತಿಯಾಗಿದ್ದ ಬಸ್‌ನಲ್ಲಿ ಕುಳಿತುಕೊಳ್ಳಲು ಆಸನ ಸಿಗದೆ ಸುಮಾರು ಇಪ್ಪತ್ತೈದು ಕಿ.ಮೀ ನಿಂತುಕೊಂಡೇ ಪ್ರಯಾಣಿಸಿದ್ದಾರೆ. ಕೆರಗೋಡು ತಲುಪುವ ಮುನ್ನವೇ ಬಸ್‌ನಲ್ಲಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಕೆರಗೋಡು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರನ್ನು ಕರೆ ತಂದಿದ್ದಾರೆ. ಕರ್ತವ್ಯ ನಿರತ ಆರೋಗ್ಯ ಸಿಬ್ಬಂದಿ ಇಲ್ಲದ ಕಾರಣ ಸೂಕ್ತ ಚಿಕಿತ್ಸೆ ಸಿಗದೆ ನಿಂಗರಾಜಮ್ಮ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆ: ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಮಹಿಳೆ ಮೃತಪಟ್ಟಿದ್ದು, ಪರಿಹಾರ ನೀಡಬೇಕು. ಅಗತ್ಯ ಸಿಬ್ಬಂದಿಯನ್ನು ನೇಮಕಮಾಡಬೇಕು ಎಂದು ಒತ್ತಾಯಿಸಿ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ಕರುನಾಡು ಸೇನಾನಿಗಳ ವೇದಿಕೆ ಮದ್ದೂರು ತಾಲ್ಲೂಕು ಘಟಕದ ಅಧ್ಯಕ್ಷ ಆದರ್ಶ್ ಮಾತನಾಡಿ, ಆಸ್ಪತ್ರೆಗೆ 9 ಗಂಟೆಗೆ ಬಂದರೂ ಸಿಬ್ಬಂದಿ ಇಲ್ಲದೆ ನಮ್ಮ ಕಣ್ಣ ಮುಂದೆಯೇ ರೋಗಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವಣ್ಣ, ಸಾರ್ವಜನಿಕರ ಜೀವ ಉಳಿಸಲು ಸಿಬ್ಬಂದಿಸಿದ್ಧರಿರಬೇಕು. ಇಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ಪರಿಹಾರ ನೀಡಲು ನಮ್ಮಲ್ಲಿ ಅವಕಾಶವಿಲ್ಲ. ಸಿಬ್ಬಂದಿ ರಾತ್ರಿ ಪಾಳಿ ಮುಗಿಸಿ ಕ್ವಾಟ್ರಸ್‌ಗೆ ಹೋಗಿದ್ದ 5 ನಿಮಿಷದಲ್ಲಿ ಘಟನೆ ನಡೆದಿದೆ. ಕೂಡಲೇ ಹೆಚ್ಚುವರಿ ಸಿಬ್ಬಂದಿ ನೇಮಿಸಿ ಸಿಬ್ಬಂದಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT