ಶುಕ್ರವಾರ, ಜೂಲೈ 10, 2020
22 °C
ಜಾನಪದ, ಐತಿಹಾಸಿಕ ಮಹತ್ವ ಹೊಂದಿರುವ ಊರು

ಶಾಂತಿ, ಸಾಮರಸ್ಯದ ತಾಣ ‘ಚಿಕ್ಕಾಡೆ‘

ಹಾರೋಹಳ್ಳಿ ಪ್ರಕಾಶ್ Updated:

ಅಕ್ಷರ ಗಾತ್ರ : | |

Deccan Herald

ಪಾಂಡವಪುರ: ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದಿರುವ, ಸಾಮರಸ್ಯ ಸಾರುತ್ತಿರುವ, ಕಲೆ ಮತ್ತು ಜಾನಪದ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ತಾಲ್ಲೂಕಿನ ‘ಚಿಕ್ಕಾಡೆ’ ಗ್ರಾಮ ಜಿಲ್ಲೆಯ ಹೆಮ್ಮೆಯ ಗ್ರಾಮವಾಗಿದೆ. ಪುರಾಣ ಮತ್ತು ಜಾನಪದದ ಹಿನ್ನೆಲೆ ಹೊಂದಿರುವ ಈ ಗ್ರಾಮದೊಡಲು ಹಲವು ವಿಶೇಷತೆ ಹೊಂದಿದೆ.

ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಚಿಕ್ಕಾಡೆ ಗ್ರಾಮ ಸುಮಾರು 3 ಸಾವಿರ ಜನಸಂಖ್ಯೆ ಹೊಂದಿದೆ. ವಿ.ಸಿ.ನಾಲೆ ಹಾಗೂ ಹಿರೋಡೆ ಕೆರೆ ನೀರಿನಿಂದ ಈ ಗ್ರಾಮವು ಸಂಪೂರ್ಣ ಕೃಷಿ ಅವಲಂಬಿತ‌ವಾಗಿದೆ. ಇಲ್ಲಿನ ಬಹುತೇಕ ಜನರು ಕೃಷಿಕರೇ ಆಗಿದ್ದಾರೆ. ಹಳೆಯ ತೊಟ್ಟಿಹಟ್ಟಿಗಳು ಮತ್ತು ಮಂಗಳೂರು ಹೆಂಚಿನ ಮನೆಗಳು ಇಲ್ಲಿ ಗಮನ ಸೆಳೆಯುತ್ತವೆ. ಆದರೆ ಆಧುನಿಕತೆಯ ಕಡೆಗೆ ತೆರೆದುಕೊಂಡಿರುವ ಗ್ರಾಮದಲ್ಲಿ ತಾರಸಿ ಮನೆಗಳೂ ಇವೆ.

ಅತೀ ಹೆಚ್ಚು ವಿದ್ಯಾವಂತರನ್ನೂ ಹೊಂದಿದ ಈ ಗ್ರಾಮದಲ್ಲಿ ಸಕಲ ಸೌಲಭ್ಯಗಳಿವೆ. ಈ ಗ್ರಾಮದ ಜನರು ಬೇರೆ ಬೇರೆ ನಗರಗಳಲ್ಲಿ ನೆಲೆಸಿ ಉನ್ನತ ಸ್ಥಾನದಲ್ಲಿ ಇದ್ದಾರೆ. ಈ ಊರಿನ ಗ್ರಾಮ ದೇವತೆ ‘ಚಿಕ್ಕಮ್ಮನ’ಹೆಸರಿನಲ್ಲಿ ಚಿಕ್ಕಾಡೆ ಸೇರಿಕೊಂಡಿದೆ. ಚಿಕ್ಕಮ್ಮನ ಚಿಕ್ಕ ಎಡೆ ಪಾಠಾಂತರ ಮುಂದುವರಿದು ‘ಚಿಕ್ಕಾಡೆ’ಯಾಗಿದೆ ಎಂಬುದು ಜಾನಪದ ಹಿನ್ನೆಲೆ.

ಪುರಾಣದ ಕತೆಯ ಪ್ರಕಾರ ಇಲ್ಲಿನ ಕುಂತಿ ಬೆಟ್ಟಕ್ಕೂ ಈ ಊರಿಗೂ ಪುರಾಣ ಸಂಬಂಧವಿದೆ. ಈ ಗ್ರಾಮದ ಸಮೀಪದಲ್ಲಿರುವ ಕುಂತಿಬೆಟ್ಟದಲ್ಲಿ ಬಕಾಸುರನೆಂಬ ರಾಕ್ಷನಿದ್ದನೆಂದೂ, ಈತನಿಗೆ ಸುತ್ತಮುತ್ತಲಿನ ಗ್ರಾಮಗಳು ಒಂದೊಂದು ದಿನ ಒಬ್ಬ ಮನುಷ್ಯನೊಂದಿಗೆ ಎಡೆ ಕಳುಹಿಸಬೇಕಾಗಿತ್ತು. ಚಿಕ್ಕಾಡೆ ಗ್ರಾಮದಿಂದಲೂ ಎಡೆ ಹೋಗುತ್ತಿತ್ತು. ಹಾಗಾಗಿ ಚಿಕ್ಕಾಡೆ ಎಂಬ ಹೆಸರು ಬಂದಿದೆ ಎಂದು ಪುರಾಣ ಹೇಳುತ್ತದೆ.

ಸಾಮರಸ್ಯದ ಬೀಡು: ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ನಂತರ ನಡೆಯುವ ಗ್ರಾಮ ದೇವತೆ ‘ದೇವಿರಮ್ಮ’ಜಾತ್ರಾ ಮಹೋತ್ಸವವದಲ್ಲಿ ಈ ಊರಿನ ಎಲ್ಲ ಸಮುದಾಯದ ಜನರು ಸಾಂಸ್ಕೃತಿಕವಾಗಿ ಒಂದಾಗಿ ಸಾಮರಸ್ಯವನ್ನು ಎತ್ತಿಹಿಡಿಯುತ್ತಾರೆ. ಈ ಹಬ್ಬದಲ್ಲಿ ಗ್ರಾಮದ ದಲಿತ ದೇವರ ಗುಡ್ಡರದ್ದೇ ಪಾರುಪತ್ಯ. ಹಬ್ಬ ಪ್ರಾರಂಭದ 2 ವಾರಗಳ ಮುಂಚೆ ಗ್ರಾಮದ ಮೇಲ್ಜಾತಿಯ ಸಮುದಾಯದವರು ದಲಿತ ಕೇರಿಗೆ ಹೋಗಿ ಹಬ್ಬ ನಡೆಸಿಕೊಡಬೇಕು ಎಂದು ದಲಿತ ದೇವರು ಗುಡ್ಡರಿಗೆ ಆಹ್ವಾನ ನೀಡುತ್ತಾರೆ. ಕರಕು ಹಾಕದ ಮೇಲೆ ಮಾಂಸಮಡ್ಡಿ ಮುಟ್ಟುವ ಆಗಿಲ್ಲ. ಹಬ್ಬದ ತನಕ ನಿತ್ಯ ಬೆಳಗಿನ ಕುಣಿತ ನಡೆಯುತ್ತದೆ.

ದೇವಿರಮ್ಮ ಹಬ್ಬದ ಒಂದೆರಡು ಮುಂಚಿತವಾಗಿ ಒಂದು ದಿನ ಚಿಕ್ಕಮ್ಮನ ಹಬ್ಬ ನಡೆಯುತ್ತದೆ. ನಂತರ ನಡೆಯುವ ದೇವಿರಮ್ಮನ ಹಬ್ಬದಲ್ಲಿ ದಲಿತ ದೇವರು ಗುಡ್ಡರು ಹೊತ್ತು ಮೆರೆಸುವ ‘ಹೆಬ್ಬಾರೆ’ಉತ್ಸವ ಪ್ರಸಿದ್ಧಿಯಾಗಿದೆ. ದಲಿತರು ಹದಮಾಡಿದ ಚರ್ಮದಿಂದ ಹೆಬ್ಬಾರೆಗಳನ್ನು ಕಟ್ಟಿ ಸಿದ್ದಪಡಿಸುತ್ತಾರೆ. ದಲಿತ ದೇವರು ಗುಡ್ಡರು ತುಂಬ ತೂಕದ ಹೆಬ್ಭಾರೆಗಳನ್ನು ಹೊತ್ತು ಕುಣಿಯತ್ತಾ ಮೆರೆಸುತ್ತಾರೆ. ಈ ವೇಳೆ ಎಲ್ಲ ಸಮುದಾಯದ ಜನ ಹೆಬ್ಬಾರೆಗಳಿಗೆ ಕೈಮುಗಿದು ಭಕ್ತಿಭಾವ ಮೆರೆಯುತ್ತಾರೆ. ಹೆಬ್ಬಾರೆ ಉತ್ಸವ ನಡೆಯುವಾಗ ಹೆಂಗಸರು ಮಕ್ಕಳೆನ್ನದೆ ಕೆಳಗೆ ಅಡ್ಡಡ್ಡ ಮಲಗುತ್ತಾರೆ. ಹೆಬ್ಬಾರೆ ಹೊತ್ತ ದಲಿತ ದೇವರ ಗುಡ್ಡರು ಇವರನ್ನು ದಾಟುತ್ತಾ ಹೋಗುತ್ತಾರೆ.

ಜನಪದ ಹಾಡುಗಳ ಕಣಜ : ಹೊನ್ನಮ್ಮ ಕಳೆದ 60 ವರ್ಷಗಳಿಂದಲೂ ಸೋಬಾನೆ ಪದ ಹಾಡುತ್ತಾ ರಾಜ್ಯಮಟ್ಟದ ಖ್ಯಾತಿ ಪಡೆದಿದ್ದಾರೆ. ಇವರಿಗೆ  ಜೀಶಂಪ ಪ್ರಶಸ್ತಿ ಲಭಿಸಿದೆ. ಜಾನಪದ ಲೋಕದ ರೂವಾರಿ ಡಾ.ಎಚ್.ಎಲ್.ನಾಗೇಗೌಡರು ಹೊನ್ನಮ್ಮ ಅವರ ಎಲ್ಲ ಶೋಭಾನೆ ಪದಗಳನ್ನು ದಾಖಲಿಸಿದ್ದಾರೆ. ಸೋಬಾನೆ ಹೊನ್ನಮ್ಮ ಅವರು ಬೆಂಗಳೂರು ಆಕಾಶವಾಣಿ ಮತ್ತು ಮೈಸೂರು ಆಕಾಶವಾಣಿಯಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದಾರೆ. ಈ ಗ್ರಾಮದ ಬಿದ್ದೋಳಮ್ಮ ಕೂಡ ಶೋಭಾನೆ ಪದ ಹಾಡುತ್ತಾ ಎಲ್ಲರ ಗಮನಸೆಳೆದಿದ್ದಾರೆ.

ಊರು ಕಟ್ಟಿದವರು: ಕಬ್ಬು ಭತ್ತ ಹೇರಳವಾಗಿ ಬೆಳೆಯುವ ಈ ಗ್ರಾಮವನ್ನು 27ಮಂದಿ ಹಿರಿಯರು ತರಗು ಗುಡಿಸಿ ಊರು ಕಟ್ಟಿದ್ದಾರೆ ಎಂಬ ಮಾತಿದೆ. ಗ್ರಾಮ ದೇವತೆ ಹಬ್ಬದಲ್ಲಿ ಈ 27 ಮಂದಿ ಹಿರಿಯರಿಗೆ ಎಡೆಯಿಟ್ಟು ಪೂಜೆ ಸಲ್ಲಿಸುವ ಪ್ರತೀತಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು