ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿತ್ವವೇ ಎಲ್ಲಕ್ಕಿಂತ ಮುಖ್ಯ: ನಿರ್ಮಲಾನಂದನಾಥ ಸ್ವಾಮೀಜಿ

ಗುರು ಸಂಸ್ಮರಣೆ, ಯುಪಿಎಸ್‍ಸಿ ಪರೀಕ್ಷೆ ಸಾಧಕರಿಗೆ ಸನ್ಮಾನ
Last Updated 26 ಸೆಪ್ಟೆಂಬರ್ 2020, 2:11 IST
ಅಕ್ಷರ ಗಾತ್ರ

ನಾಗಮಂಗಲ: ‘ವ್ಯಕ್ತಿಯ ದೈಹಿಕ ಸಾಮರ್ಥ್ಯ ಸೇರಿದಂತೆ ಗಾತ್ರ, ಎತ್ತರ, ತೂಕ ಮುಂತಾದವುಗಳಿಗಿಂತ ಆತನ ವ್ಯಕ್ತಿತ್ವವೇ ಎಲ್ಲಕ್ಕಿಂತ ಮುಖ್ಯವಾದುದ್ದು’ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಶುಕ್ರವಾರ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಗುರು ಸಂಸ್ಮರಣೆ ಮತ್ತು ಯುಪಿಎಸ್‍ಸಿ ಪರೀಕ್ಷೆ ಸಾಧಕರಿಗೆ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮನುಷ್ಯನಲ್ಲಿರುವ ಜ್ಞಾನಕ್ಕೆ ಸಮಾಜ ಹೆಚ್ಚು ಗೌರವ ನೀಡುತ್ತದೆ. ವ್ಯಕ್ತಿಯನ್ನು ಅವನಲ್ಲಿರುವ ಜ್ಞಾನದ ಆಧಾರದ ಮೇಲೆ ಅಳೆಯಲಾಗುತ್ತದೆ. ಆದ್ದರಿಂದ ಇಂದಿನ ಯುವ ಪೀಳಿಗೆಯು ಸಿನಿಮಾದ‌ ನಾಯಕರನ್ನು ಆದರ್ಶವೆಂದು ಭಾವಿಸಿಕೊಳ್ಳುವ ಬದಲಿಗೆ ಗ್ರಾಮೀಣ ಭಾಗದಲ್ಲಿದ್ದುಕೊಂಡು ತಮ್ಮ ಸ್ವಂತ ಜ್ಞಾನ ಸಾಮರ್ಥ್ಯದ ಆಧಾರದ ಮೇಲೆ ಸಾಧನೆ ಮಾಡಿರುವ ಸಾಧಕರಿಂದ ಪ್ರೇರಣೆ ಪಡೆದು ಸಾಧನೆ ಮಾಡಿ’ ಎಂದು ಸಲಹೆ ನೀಡಿದರು.

‘ಮಕ್ಕಳು ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಒಳ್ಳೆಯ ಗುರಿಯೆಡೆಗೆ ಸಾಗುವ ಮೂಲಕ ಉತ್ತಮ‌ ವಿದ್ಯಾಭ್ಯಾಸ ಪಡೆಯಬೇಕು. ಆಗ ಮಾತ್ರವೇ ಸಮಾಜ ಗುರ್ತಿಸುವಂತಹ ಸಾಧನೆ ಮಾಡಲು ಸಾಧ್ಯ. ಅಲ್ಲದೇ ದೇಶದಲ್ಲಿ ಉನ್ನತ ಸ್ಥಾನದ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ದೇಶವನ್ನು ಬೆಳವಣಿಗೆಯಲ್ಲಿ ಕೊಡುಗೆ ನೀಡಬಹುದು. ಜೊತೆಗೆ ಉತ್ತಮ ಕಾರ್ಯಕ್ರಮಗಳು ಮತ್ತು ಉತ್ತಮ ವ್ಯಕ್ತಿಗಳ ಒಡನಾಟದಿಂದ ಮನಸ್ಸಿನಲ್ಲಿ ಒಳ್ಳೆಯ ಚಿಂತನೆ ಮೂಡಲು ಸಹಕಾರಿಯಾಗುತ್ತದೆ. ಆದ್ದರಿಂದ ಮಕ್ಕಳು ಜೀವನದಲ್ಲಿ ಶಿಸ್ತು, ಸಂಸ್ಕಾರ, ಸಮಯಪಾಲನೆ ಅಳವಡಿಸಿಕೊಂಡಾಗ ಸಾಧನೆ ಮಾಡಲು ಸಾಧ್ಯ’ ಎಂದರು.

ಪ್ರೊ.ಕೃಷ್ಣೇಗೌಡ ಮಾತನಾಡಿ, ‘ಭೂಮಿಯ ಮೇಲೆ ಬದುಕಿರುವ ಎಲ್ಲಾ ಜೀವಿಗಳು ಸುತ್ತಮುತ್ತಲಿನ ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳುತ್ತವೆ. ಆದರೆ, ಮಾನವ ಮಾತ್ರ ಮನುಷ್ಯ ಪ್ರಕೃತಿಯನ್ನೇ ತನ್ನ ಅನುಕೂಲಕ್ಕೆ ಸಂಬಂಧಿಸಿದಂತೆ ಬದಲಾವಣೆ ಮಾಡಿಕೊಳ್ಳುತ್ತಾ ಸಾಗಿರುವುದೇ ಪ್ರಪಂಚದ ಇಂದಿನ ದುಃಸ್ಥಿತಿಗೆ ಕಾರಣವಾಗಿದೆ. ಕೃಷಿಯೂ ಸಮಾಜಕ್ಕೆ ಸಂಸ್ಕೃತಿಯನ್ನು ಪಸರಿಸುತ್ತಾ ಬಂದಿದೆ. ರೈತ ಕುಟುಂಬದಿಂದ ಬಂದವರು ಇಂದು ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ಡಾ.ಅಭಿಷೇಕ್‍ ಗೌಡ, ಎಚ್.ಎನ್.ಮಿಥುನ್, ವಿವೇಕ ರೆಡ್ಡಿ, ಸಿ.ಕೆ.ಯೋಗೇಶ್, ಎಚ್.ವೆಂಕಟಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಶುಕ್ರವಾರ ನಿಧನರಾದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ಮರಣಾರ್ಥ ಸಂತಾಪ ವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚಿತ್ರದುರ್ಗದ ಕಬೀರ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಮತ್ತು ವಿವಿಧ ಶಾಖಾ ಮಠಗಳ ಸ್ವಾಮೀಜಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT