ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಶಿಕ್ಷಕರ ತರಬೇತಿಗೆ ಚಿತ್ರಗಳೇ ಸೂತ್ರಗಳು!

Last Updated 31 ಆಗಸ್ಟ್ 2018, 17:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಗಣಿತದ ವಿಷಯ ಕಲಿಕೆಗೆ ಸೂತ್ರಗಳನ್ನು ಬಳಸುವುದು ಬಹು ಮುಖ್ಯ ಎಂಬುದು ನಿಜ. ಆದರೆ ಸಮಾಜ, ವಿಜ್ಞಾನ ಹಾಗೂ ಭಾಷಾ ವಿಷಯಗಳ ಕಲಿಕೆಗೆ ಚಿತ್ರಗಳನ್ನು ಸೂತ್ರ ರೂಪದಲ್ಲಿ ಬಳಸುವ ಪದ್ಧತಿಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ರೂಪಿಸಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಶಿಕ್ಷಕರ ಭವನದ ಆವರಣದಲ್ಲಿರುವ ‘ಶಿಕ್ಷಕರ ಪುನಶ್ಚೇತನ ತರಬೇತಿ ಕೇಂದ್ರ’ದಲ್ಲಿ ಶಿಕ್ಷಕರಿಗೆ ಚಿತ್ರಗಳನ್ನು ಬಳಸಿ ತರಬೇತಿ ನೀಡುವ ಪದ್ಧತಿ ಶುರುವಾಗಿದೆ. ತಾಲ್ಲೂಕಿನ ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಚಿತ್ರಗಳನ್ನು ಬರೆಸಿ ತರಬೇತಿಗೆ ಈ ಚಿತ್ರಗಳನ್ನು ಪ್ರೇರಕಗಳಾಗಿ ಬಳಸಿಕೊಳ್ಳಲಾಗುತ್ತಿದೆ.

ಅಪರೂಪದ ‘ಗಂಜೀಫಾ’ ಕಲೆ, ‘ವರ್ಲಿ’ ಕಲೆ, ‘ಚಿಕಣಿ’ ಕಲೆ, ‘ಅರೆ ಹಸೆ’ ಇತರ ಪಾರಂಪರಿಕ ಕಲೆಗಳ ಲೇಪವಿರುವ ಚಿತ್ರಗಳು ಇಲ್ಲಿ ಗಮನ ಸೆಳೆಯುತ್ತವೆ. ತರಬೇತಿ ಕೇಂದ್ರದ ಪ್ರತಿ ಗೋಡೆಯೂ ಬಗೆ ಬಗೆಯ ಚಿತ್ರಗಳಿಂದ ತುಂಬಿ ಹೋಗಿವೆ ‘ಈ ಚಿತ್ರಗಳನ್ನು ಬಳಸಿಕೊಂಡೇ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು ವಿನೂತನ ಪ್ರಯೋಗ ಯಶಸ್ವಿಯಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುಕ್ಸಾನಾ ನಾಜನೀನ್‌ ಹೇಳುತ್ತಾರೆ.

‘ಪುಸ್ತಕದ ವಿಷಯಗಳನ್ನು ಸುಲಭವಾಗಿ ಮಸ್ತಕಕ್ಕೆ ಇಳಿಸಲು ಈ ವಿಧಾನ ಅನುಸರಿಸಲಾಗುತ್ತಿದೆ. ಚಿತ್ರಕಲಾ ಶಿಕ್ಷಕರಾದ ನಗುವನಹಳ್ಳಿ ಶಾಲೆಯ ನಾಗರಾಜು, ಬಾಬುರಾಯನಕೊಪ್ಪಲು ಶಾಲೆಯ ಯೋಗರಾಜ್‌, ಗಂಜಾಂ ಶಾಲೆಯ ಯೋಗೇಶ್‌, ಕೆ.ಶೆಟ್ಟಹಳ್ಳಿ ಶಾಲೆಯ ದಾಕ್ಷಾಯಣಿ, ಹೊಸಹಳ್ಳಿ ಶಾಲೆಯ ಶೋಭಾ ಅವರನ್ನು ಒಳಗೊಂಡ ತಂಡ ಒಂದು ವಾರ ಕಾಲ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಚಿತ್ರಕಲೆಯ ಮೆರಗು ನೀಡಿದೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ತರಬೇತಿ ನೀಡಲು ಪೂರಕವಾದ ಚಿತ್ರಗಳನ್ನು ಚಿತ್ರಿಸಿಕೊಟ್ಟಿದೆ’ ಎಂದು ಶಿಕ್ಷಣ ಸಮನ್ವಯಾಧಿಕಾರಿ ಭಾನುಕುಮಾರ್‌ ತಿಳಿಸಿದ್ದಾರೆ.

‘ಇಲ್ಲಿರುವ ಪ್ರತಿ ಚಿತ್ರವೂ ಒಂದೊಂದು ವಿಷಯದ ಕಲಿಕೆಗೆ ಪೂರಕವಾದ ವಿಷಯ ವಸ್ತುವನ್ನು ಒಳಗೊಂಡಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಸುಲಭವಾಗಿ ಅರ್ಥವಾಗುತ್ತದೆ. ಅರ್ಥವಾಗದವರಿಗೆ ತರಬೇತಿ ನೀಡುವ ವಿಷಯ ತಜ್ಞರು ವಿವರಿಸುತ್ತಾರೆ. ಕನ್ನಡ, ಇಂಗ್ಲಿಷ್‌, ಹಿಂದಿ, ವಿಜ್ಞಾನ, ಗಣಿತ, ಸಮಾಜ, ಚಿತ್ರಕಲೆ ವಿಷಯಗಳ ಕಲಿಕೆಗೆ ಈ ಚಿತ್ರಗಳನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತಿದೆ’ ಎಂಬುದು ಭಾನುಕುಮಾರ್‌ ಅವರ ವಿವರಣೆ.

ಶಿಕ್ಷಕರದ್ದೇ ಖರ್ಚು : ಶಿಕ್ಷಕರ ಪುನಶ್ಚೇತನ ತರಬೇತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಲಾಗಿದೆ. ಪ್ರತಿ ಚಿತ್ರಕ್ಕೂ ಅದರದ್ದೇ ಆದ ಬಣ್ಣ ಬಳಸಲಾಗಿದೆ. ಕಲೆಯ ಮೂಲ ವಿನ್ಯಾಸಕ್ಕೆ ಕುಂದುಂಟಾಗದಂತೆ, ಶಿಕ್ಷಕರನ್ನು ಚಿಂತನೆಗೆ ಹಚ್ಚುವಂತೆ ಚಿತ್ರಗಳನ್ನು ಚಿತ್ರಿಸಲಾಗಿದೆ. ಇದಕ್ಕಾಗಿ ಸುಮಾರು ₹ 60 ಸಾವಿರ ಖರ್ಚು ಮಾಡಿದ್ದು, ಚಿತ್ರಕಲಾ ಶಿಕ್ಷಕರು ಹಾಗೂ ಅಧಿಕಾರಿಗಳು ವೆಚ್ಚವನ್ನು ಭರಿಸಿದ್ದಾರೆ. ಇನ್ನೂ ಹತ್ತಾರು ವರ್ಷಗಳವರೆಗೆ ಈ ಚಿತ್ರಗಳು ಮಾಸದೇ ಉಳಿಯುವಂತೆ ಚಿತ್ರಿಸಿದ್ದೇವೆ’ ಎಂಬುದು ಚಿತ್ರಕಲಾ ಶಿಕ್ಷಕ ಯೋಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT