ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಸ್ತಿತ್ವ ಭದ್ರಪಡಿಸಲು ಮಂಡ್ಯ ಜಿಲ್ಲೆಗೆ ಮೋದಿ ಭೇಟಿ: ಆರ್‌.ಅಶೋಕ

Last Updated 26 ಜನವರಿ 2023, 5:48 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಬೆಂಗಳೂರು– ಮೈಸೂರು ಹೆದ್ದಾರಿ ಲೋಕಾರ್ಪಣೆಗಾಗಿ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಡ್ಯಕ್ಕೆ ಕರೆಸುತ್ತೇವೆ. ಇದರಿಂದ ಈ ಭಾಗದಲ್ಲಿ ಬಿಜೆಪಿ ಮತ್ತಷ್ಟು ಗಟ್ಟಿಯಾಗಲಿದೆ. ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜೆಡಿಎಸ್‌ ಮತ್ತಷ್ಟು ದುರ್ಬಲವಾಗಲಿದೆ’ ಎಂದು ಸಚಿವ ಆರ್‌.ಅಶೋಕ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಬಿಜೆಪಿ ಕಚೇರಿ ಉದ್ಘಾಟನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಗೆಲ್ಲುವುದಿಲ್ಲ: ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ ಮತ್ತು ಡಿ.ಕೆ.ಶಿವಕುಮಾರ್‌ ಒಟ್ಟಾಗಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಸೇಡು ತೀರಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ’ ಎಂದರು.

ಜೆಡಿಎಸ್‌ ಜೋಕರ್‌: ‘ಕಾಂಗ್ರೆಸ್‌ ಅಥವಾ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬಹುದು ಎಂದು ಜೆಡಿಎಸ್‌ ಕನಸು ಕಾಣುತ್ತಿದೆ. ಸದ್ಯ ಅದು ಜೋಕರ್‌ ಪಾತ್ರದ ಹವಣಿಕೆಯಲ್ಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದೂ ಮಂಡ್ಯದಿಂದ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಜೆಡಿಎಸ್‌ ಈಗ ಮತ್ತಷ್ಟು ಶಕ್ತಿ ಕಳೆದುಕೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಬಲಗೊಳ್ಳುತ್ತಿದ್ದು, ಅಚ್ಚರಿಯ ಫಲಿತಾಂಶ ಬರಲಿದೆ’ ಎಂದರು.

ಸುಮಲತಾ ಜತೆ ಚರ್ಚೆ: ‘ಸಂಸದೆ ಸುಮಲತಾ ಅಂಬರೀಶ್‌ ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ದೂರ ಇದ್ದು, ಬಿಜೆಪಿ ಸೇರುವಂತೆ ಆಹ್ವಾನಿಸಿದ್ದೇವೆ. ಅವರ ಜತೆ ನಾನೂ ಮಾತನಾಡಿದ್ದು, ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಅಂಬರೀಶ್‌ ಅವರ ಶಿಷ್ಯ ಇಂಡುವಾಳು ಸಚ್ಚಿದಾನಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದು, ಅವರ ಗೆಲುವಿಗೆ ನಟರಾದ ದರ್ಶನ್‌, ಯಶ್‌, ಸಂಸದೆ ಸುಮಲತಾ ಅಂಬರೀಶ್‌ ಕೂಡ ಬೆನ್ನೆಲುಬಾಗಿ ಇರುತ್ತಾರೆ. ಸಚ್ಚಿದಾನಂದ ಅವರನ್ನು ಗೆಲ್ಲಿಸುವ ಮೂಲಕ ಅಂಬರೀಶ್‌ ಅವರಿಗೆ ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.

10 ಕೆ.ಜಿ.ಅಕ್ಕಿ: ಬಿಪಿಎಲ್‌ ಕಾರ್ಡ್‌ದಾ ರರಿಗೆ ಸದ್ಯ ತಲಾ 5 ಕೆ.ಜಿ. ಅಕ್ಕಿ ಸಿಗುತ್ತಿದೆ. ಮುಂದಿನ ತಿಂಗಳಿನಿಂದ ರಾಜ್ಯ ಸರ್ಕಾರ ತಲಾ 10 ಕೆ.ಜಿ ಕೊಡಲಿದೆ. ಮುಖ್ಯಮಂತ್ರಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎಂದರು.

ಬೈಕ್‌ ರ್‍ಯಾಲಿ: ಇದಕ್ಕೂ ಮುನ್ನ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಿಂದ ಬಿಜೆಪಿ ಕಚೇರಿವರೆಗೆ 3.5 ಕಿ.ಮೀ ಬೈಕ್‌ ರ್‍ಯಾಲಿ ನಡೆಯಿತು. ಸಚಿವ ಆರ್‌.ಅಶೋಕ ಅವರನ್ನು ತೆರೆದ ವಾಹನದಲ್ಲಿ ಕರೆ ತರಲಾಯಿತು. ನೂರಾರು ಬೈಕ್‌ ಸವಾರರು ಭಾಗವಹಿಸಿದ್ದರು. ಕುವೆಂಪು ವೃತ್ತದಲ್ಲಿ ಸಚಿವರಿಗೆ ಕ್ರೇನ್‌ ಮೂಲಕ ಕಿತ್ತಳೆ ಹಣ್ಣಿನ ಬೃಹತ್‌ ಹಾರವನ್ನು ಹಾಕಲಾಯಿತು.

ಶಾಸಕ ನಂದೀಶ್‌ ರೆಡ್ಡಿ, ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಮೈ.ವಿ.ರವಿಶಂಕರ್‌ ಮಾತನಾಡಿದರು.

ಪಕ್ಷದ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌.ರಮೇಶ್‌, ಎಸ್‌.ಎಲ್‌.ಲಿಂಗರಾಜು, ತಾ.ಪಂ.ಮಾಜಿ ಅಧ್ಯಕ್ಷ ಟಿ.ಶ್ರೀಧರ್‌, ಜ್ಯೋತಿಷಿ ಡಾ.ಭಾನು ಪ್ರಕಾಶ್‌ ಶರ್ಮಾ, ಡಾ.ಇಂದ್ರೇಶ್‌, ಅಶೋಕ್ ಜಯರಾಂ, ಸ್ವಾಮಿ, ಶಾರದಾ ರಾಮಕೃಷ್ಣ, ಬಿ.ಸಿ.ಸಂತೋಷಕುಮಾರ್‌, ದರ್ಶನ್‌ ಲಿಂಗರಾಜ್‌, ಎಸ್‌.ದೇವ ರಾಜು, ಎಸ್‌.ಕೆ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT