ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲೆ ಪೊಲೀಸರ ಕಣ್ಗಾವಲು

ಆಷಾಢ ಮಾಸ; ಕಳ್ಳರಿಗೆ ದೇವಾಲಯಗಳೇ ಗುರಿ, ಭದ್ರತೆಗೆ ಪೊಲೀಸ್‌ ಸಿಬ್ಬಂದಿ ನೇಮಕ
Last Updated 12 ಜುಲೈ 2019, 20:15 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಸರಗಳ್ಳತನ ಹೆಚ್ಚಳವಾಗಿರುವ ಕಾರಣ ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಪೊಲೀಸರು ನಿಗಾವಹಿಸಿದ್ದಾರೆ. ಉದ್ಯಾನ, ಆಸ್ಪತ್ರೆ, ದೇವಾಲಯಗಳಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಕಾವಲು ಹಾಕಲಾಗಿದೆ.

ಜನವರಿಯಿಂದ ಇಲ್ಲಿಯವರೆಗೆ ನಗರದ 15 ಕಡೆಗಳಲ್ಲಿ ಸರಗಳ್ಳತನ ವಾಗಿದೆ. ಕಳೆದ ವರ್ಷ 32 ಕಡೆ ದುಷ್ಕರ್ಮಿಗಳು ಸರಗಳನ್ನು ಎಗರಿಸಿ ದ್ದಾರೆ. ಹಬ್ಬ, ಹರಿದಿನಗಳು, ವಿಶೇಷ ದಿನದ ಸಂದರ್ಭದಲ್ಲೇ ಕಳ್ಳರು ಸರ ಕದ್ದಿದ್ದಾರೆ. ಆಷಾಢ ಮಾಸ ಆರಂಭವಾಗಿದ್ದು, ಮಹಿಳೆಯರು ಪೂಜೆ, ಪುನಸ್ಕಾರ, ವ್ರತ, ಹರಕೆ ತೀರಿಸಲು ದೇವಸ್ಥಾನಗಳಿಗೆ ತೆರಳುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಮಯಕ್ಕೇ ಕಾಯುವ ಕಿಡಿಗೇಡಿಗಳು ಸರಗಳ್ಳತನ ಮಾಡಲು ಸಂಚು ರೂಪಿಸು ತ್ತಾರೆ. ಹೀಗಾಗಿ ವಿವಿಧೆಡೆ ಪೊಲೀಸ್‌ ಭದ್ರತೆ ಹೆಚ್ಚಳ ಮಾಡಲಾಗಿದೆ.

ದೇವಾಲಯಗಳೇ ಗುರಿ: ಕಳೆದ ವರ್ಷ ಗುತ್ತಲು ಬಡಾವಣೆಯ ಅರಕೇಶ್ವರ ದೇವಾಲಯದಲ್ಲಿ ಒಂದೇ ದಿನ ನಾಲ್ವರು ಮಹಿಳೆಯರ ಸರ ಕಳ್ಳತನ ಮಾಡಲಾಗಿತ್ತು. ಭಕ್ತರ ಸೋಗಿನಲ್ಲಿ ಬಂದು ಕಿಡಿಗೇಡಿಗಳು ಸರ ಎಗರಿಸಿದ್ದರು. ಕಳ್ಳರು ದೇವಾಲಯಗಳನ್ನೇ ಗುರಿ ಮಾಡಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಹೀಗಾಗಿ ದೇವಾಲಯಗಳ ಮುಂದೆಯೂ ಪೊಲೀಸ್‌ ಸಿಬ್ಬಂದಿಯನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.

ಅರಕೇಶ್ವರ ದೇವಾಲಯ ಸೇರಿ, ಪೊಲೀಸ್‌ ಕಾಲೊನಿಯ ಚಾಮುಂಡೇಶ್ವರಿ ದೇವಾಲಯ, ಪೇಟೆಬೀದಿಯ ಕಾಳಿಕಾಂಬ ದೇವಾಲಯ, ಎಂ.ಸಿ.ರಸ್ತೆಯ ಆಂಜನೇಯ ದೇವಾಲಯದ ಬಳಿ ಪೊಲೀಸ್‌ ಭದ್ರತೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಮಹಿಳೆಯರು ವಿಹಾರಕ್ಕೆ ಬರುವ ಪ್ರಮುಖ ಸ್ಥಳಗಳಲ್ಲೂ ಕಣ್ಗಾವಲು ವಹಿಸಲಾಗಿದೆ. ಅಶೋಕ ನಗರದ ಬಾಲಭವನ ಉದ್ಯಾನದಲ್ಲಿ (ಆನೆ ಪಾರ್ಕ್‌) ಅತಿ ಹೆಚ್ಚು ಮಹಿಳೆಯರು ಸಂಜೆ ವಾಯುವಿಹಾರಕ್ಕೆ ಬರುತ್ತಾರೆ. ಅಲ್ಲಿ ಒಬ್ಬರು ಮಹಿಳಾ ಕಾನ್‌ಸ್ಟೆಬಲ್‌, ಒಬ್ಬರು ಪುರುಷ ಕಾನ್ಸ್‌ಸ್ಟೆಬಲ್‌ಗಳನ್ನು ಸೇವೆಗೆ ನಿಯೋಜನೆ ಮಾಡಲಾಗಿದೆ.

ಆನೆ ಪಾರ್ಕ್‌ ಮಾತ್ರವಲ್ಲದೆ ರೈಲು ನಿಲ್ದಾಣ ಬಳಿಯ ಗಾಂಧಿ ಉದ್ಯಾನ, ಜಿಲ್ಲಾಧಿಕಾರಿ ಕಚೇರಿ ಮುಂದಿನ ಉದ್ಯಾನ, ಪಿಇಎಸ್‌ ಕಾಲೇಜು ಕ್ರೀಡಾ ಸಮುಚ್ಚಯ ಮುಂತಾದೆಡೆಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮನೆಗಳ್ಳತನ ಭೀತಿ ಇರುವ ಸಿಹಿನೀರು ಕೊಳ, ಅಶೋಕ ನಗರ ಬಡಾವಣೆಗಳ ಮೇಲೆ ಕಣ್ಣಿಟ್ಟಿದ್ದು, ಪೊಲೀಸ್‌ ಬೀಟ್‌ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿ ನಡೆಯುವ ಕಳ್ಳತನ, ಅನಧಿಕೃತ ಚಟುವಟಿಕೆಗಳ ಮೇಲೆ ಕಣ್ಣಿಡಲು ವಜ್ರ ವಾಹನ ಸಂಚಾರವನ್ನು ಬಿಗಿಗೊಳಿಸ ಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT