ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ಜರಿ ಬೇಟೆ: 2 ಕೋಟಿ ಮೌಲ್ಯದ ವಸ್ತುಗಳ ವಶ

ಸರಗಳ್ಳತನ ತಡೆಯಲು ಸಕಲ ಪ್ರಯತ್ನ, ಸಿಬ್ಬಂದಿಗೆ ಅಭಿನಂದನೆ ತಿಳಿಸಿದ ಎಸ್ಪಿ ಅಶ್ವನಿ
Last Updated 7 ಏಪ್ರಿಲ್ 2021, 14:21 IST
ಅಕ್ಷರ ಗಾತ್ರ

ಮಂಡ್ಯ: ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು ಆರೋಪಿಗಳಿಂದ ಒಟ್ಟು ₹ 2 ಕೋಟಿ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅಶ್ವಿನಿ ಬುಧವಾರ ತಿಳಿಸಿದರು.

‘ಆರೋಪಿಗಳಿಂದ 663 ಗ್ರಾಂ ಚಿನ್ನಾಭರಣ, 650 ಬೆಳ್ಳಿಯ ಆಭರಣ, 75 ದ್ವಿಚಕ್ರ ವಾಹನ‌, 2 ಕಾರು, 2 ಟ್ರಾಕ್ಟರ್‌‌, 1 ಗೂಡ್ಸ್‌ ಆಟೊ, ವಿದ್ಯುತ್‌, ಸೌರಶಕ್ತಿ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಭೇದಿಸಲು ಶ್ರಮಿಸಿದ ಎಲ್ಲಾ ಪೊಲೀಸ್‌ ಸಿಬ್ಬಂದಿಯನ್ನು ಅಭಿನಂದಿಸಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲೆಯಲ್ಲಿ ಸರಗಳ್ಳತನ ವ್ಯಾಪಕವಾಗಿತ್ತು. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಸರ ಅಪಹರಣ ಪ್ರಕರಣ ವರದಿಯಾಗುತ್ತಿದ್ದ ಕಾರಣ ನಮ್ಮ ಸಿಬ್ಬಂದಿಗೆ ತಲೆನೋವಾಗಿತ್ತು. ಸರಗಳ್ಳರನ್ನು ಹಿಡಿಯಲು ವಿವಿಧೆಡೆ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿತ್ತು. ಆರೋಪಿಗಳ ಪತ್ತೆಗೆ ಎಎಸ್‌ಪಿ, ಮಳವಳ್ಳಿ ಉಪವಿಭಾಗದ ಡಿವೈಎಸ್‌ಪಿ, ಭಾರತೀನಗರ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಇಂತಹ 13 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ’ ಎಂದು ಹೇಳಿದರು.

‘ಸರಗಳ್ಳತನ ಪ್ರಕರಣಗಳ ಪತ್ತೆಗೆ ವಿಶೇಷ ಕಾಳಜಿ ವಹಿಸಲಾಗಿದೆ. ಮುಂದೆ ಸರಗಳ್ಳತನ ನಡೆಯದಂತೆ ಕ್ರಮ ವಹಿಸಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ಈಗಾಗಲೇ ನಡೆದಿರುವ ಪ್ರಕರಣಗಳ ಪತ್ತೆ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಸರಗಳ್ಳತನ ಪ್ರಕರಣಗಳನ್ನು ಇನ್ನಿಲ್ಲವೆಂಬಂತೆ ಕೊನೆಗಾಣಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ಜಿಲ್ಲೆಯಲ್ಲಿ ಬೈಕ್‌ ಕಳ್ಳತನ ಕೂಡ ದೊಡ್ಡ ಸಮಸ್ಯೆಯಾಗಿತ್ತು. ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಕಳೆದ ಮೂರು ತಿಂಗಳಿಂದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ಭೇದಿಸಿ 75 ಬೈಕ್‌ಗಳನ್ನು ಪತ್ತೆಹಚ್ಚಲಾಗಿದೆ’ ಎಂದರು.

‘ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿ 2 ಲೂಟಿ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಮಂಡ್ಯ ಹಾಗೂ ಮಳವಳ್ಳಿ ಉಪ ವಿಭಾಗದಲ್ಲಿ ನಡೆದ ಹಲವು ಪ್ರಕರಣಗಳ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

₹ 1.22 ಕೋಟಿ ವಶ: ‘ನಗರದ ಸರ್ಕಾರಿ ನೌಕರರ ಸಂಘದ ಗೃಹನಿರ್ಮಾಣ ಸಹಕಾರ ಸಮಿತಿಯಲ್ಲಿ ನಡೆದಿದ್ದ ವಂಚನೆ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು ಶೀಘ್ರ ಆರೋಪಿಗಳನ್ನು ಬಂಧಿಸಾಗುವುದು. ಈ ಪ್ರಕರಣದಲ್ಲಿ ₹ 1.22 ಕೋಟಿ ಹಣ, 1 ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಎಸ್‌ಪಿ ಧನಂಜಯ ಇದ್ದರು. ವಶಪಡಿಸಿಕೊಳ್ಳಲಾದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು. ಕಳ್ಳತನವಾದ ವಸ್ತುಗಳನ್ನು ಪಡೆದ ಜನರು ಸಂತಸ ವ್ಯಕ್ತಪಡಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT