ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಮೆ ನಿರ್ಮಾಣ ಮುಂದೂಡಿ; ಕಾರ್ಖಾನೆ ಉಳಿಸಿ

ಮೈಷುಗರ್‌: ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಆಗ್ರಹ
Last Updated 27 ಸೆಪ್ಟೆಂಬರ್ 2021, 5:40 IST
ಅಕ್ಷರ ಗಾತ್ರ

ಮಂಡ್ಯ: ‘ಬಸವಣ್ಣ ಹಾಗೂ ನಾಡ ಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಿಸುವುದನ್ನು ಮುಂದೂಡಿ, ಮೈಷುಗರ್‌ ಕಾರ್ಖಾನೆ ಉಳಿವಿಗೆ ಅನು ದಾನ ಬಿಡುಗಡೆ ಮಾಡಬೇಕು. ಈ ಮೂಲಕ ಮಂಡ್ಯ ಜಿಲ್ಲೆಯ ರೈತರನ್ನು ಕಷ್ಟದಿಂದ ಪಾರು ಮಾಡಬೇಕೆಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೆ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

ನಗರದ ಸರ್‌ ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಅವರು ಮಾತನಾಡಿದರು.

₹ 2.5 ಲಕ್ಷ ಕೋಟಿಯಬಜೆಟ್‌ ಮಂಡಿಸುವ ಸರ್ಕಾರಕ್ಕೆ ಮೈಷುಗರ್‌ ಕಾರ್ಖಾನೆ ಉಳಿವಿಗೆ ₹ 400 ಕೋಟಿ ಹಣ ಬಿಡುಗಡೆ ಮಾಡುವುದು ದೊಡ್ಡದಲ್ಲ. ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣಕ್ಕೆ ₹ 100 ಕೋಟಿ ಮೀಸಲಿಡಲಾಗಿದೆ. ಬಸವಣ್ಣ ಅವರ ಪ್ರತಿಮೆ ನಿರ್ಮಾಣಕ್ಕೆ ₹ 600 ಕೋಟಿ ವೆಚ್ಚ ಮಾಡಿ ಅನುಭವ ಮಂಟಪ ಕಟ್ಟುತ್ತಿದ್ದೀರಿ. ಒಕ್ಕಲಿಗರು, ಲಿಂಗಾಯತರು ಬಂದು ನಿರ್ಮಾಣ ಮಾಡಲೇ ಬೇಕು ಎಂದು ಧರಣಿ ಮಾಡಿದ್ದಾರೆಯೇ? ಆದರೆ, ಪ್ರತಿಮೆ ನಿರ್ಮಾಣ ಮಾಡುವುದು ಬೇಡ ಎನ್ನು ವುದಿಲ್ಲ. ಅದಕ್ಕೂ ಮುನ್ನ ಕಾರ್ಖಾನೆ ಆರಂಭಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಬೇಕು ಎಂದು ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡುತ್ತಾರೋ ಎಂಬುದನ್ನು ಕಾದು ನೋಡಬೇಕಾಗಿದೆ. ಸಕ್ಕರೆ ಸಚಿವರಿಗೂ ಮನವಿ ಮಾಡಿದ್ದೆ. ಅವರು ಜಿಲ್ಲೆಯ ರೈತರ ಜತೆ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.

ಸರ್ಕಾರ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಗೌರವ ತಂದುಕೊಡಬೇಕು.ಕೆ.ಆರ್‌.ಎಸ್‌. ಅಣೆಕಟ್ಟೆ ಕಟ್ಟಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಂಬುದನ್ನು ಮರೆಯಬಾರದು. ಆದರೆ, ಸರ್‌ ಎಂ.ವಿಶ್ವೇಶ್ವರಯ್ಯ ಅವರು ಕೇವಲ ದಿವಾನರಾಗಿದ್ದವರು. ಇಲ್ಲಿ ಯಾರು ಅನ್ನದಾತರು ಎಂಬುದನ್ನು ಜನರೇ ಒಪ್ಪಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಮೈಷುಗರ್‌ ವಿಷಯವಾಗಿ ಸದನದಲ್ಲಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರ ನೇತೃತ್ವದಲ್ಲಿ ಮೈಷುಗರ್ ಬಗ್ಗೆ ಬಿಡಿಸಿ ಹೇಳಲಾಗಿದೆ. ರಾಜ್ಯದಲ್ಲಿ ಕಾರ್ಖಾನೆಗಳೆಲ್ಲ ಖಾಸಗಿ ಪಾಲಾಗುತ್ತಿರುವ ಸಂದರ್ಭದಲ್ಲಿ ಮೈಷುಗರ್ ಹೋರಾಟ ನ್ಯಾಯಯುತ ವಾಗಿದೆ. ಇರುವ ಏಕೈಕ ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳುವ ಹೋರಾಟದಲ್ಲಿ ಜತೆ ಯಾಗುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಶಾಸಕರೆಲ್ಲರೂ ಗಂಭೀರವಾಗಿ ಹೋರಾಟ ಮಾಡಿ ಪ್ರತಿಭಟನೆ ತೀವ್ರ ಗೊಳಿಸಲಾಗುವುದು. ಸಾವಿರಾರು ಕೋಟಿ ರೂಪಾಯಿ ಆಸ್ತಿಯನ್ನು ಖಾಸಗಿಗೆ ನೀಡಲು ಸರ್ಕಾರ ಹೊರಟಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಪ್ರತಿಭಟನೆ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಿದರು.

ಧರಣಿಯಲ್ಲಿ ಸಮಿತಿ ಉಪಾಧ್ಯಕ್ಷ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ,ರೈತ ಸಂಘ (ಮೂಲ ಸಂಘಟನೆ)ದ ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮನ್‌ಮುಲ್‌ ಅಧ್ಯಕ್ಷ ರಾಮಚಂದ್ರು, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಸಂಜಯ್‌ಕುಮಾರ್, ಆಲೆಮನೆ ಮಾಲೀಕರ ಸಂಘದ ಸೋಮಣ್ಣ, ತಿಮ್ಮೇಗೌಡ, ಕನ್ನಡಸೇನೆ ಮಂಜುನಾಥ್, ಜನಶಕ್ತಿ ಸಂಘಟನೆಯ ಸಿದ್ದರಾಜು, ಉಪನ್ಯಾಸಕ ಶಂಕರೇಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT