ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಮುದ್ರಣ ಕ್ಲಸ್ಟರ್‌ ಆರಂಭವಾಗಲಿ: ಕೈಗಾರಿಕಾ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ

ಪ್ರಿಂಟಿಂಗ್‌ ಪಿತಾಮಹ ಜೊಹಾನ್ಸ್ ಗುಟೆನ್‌ಬರ್ಗ್‌ ನೆನಪು; ಕೆ.ಶಿವಲಿಂಗಯ್ಯ ಅಭಿಮತ
Last Updated 17 ಮಾರ್ಚ್ 2023, 9:48 IST
ಅಕ್ಷರ ಗಾತ್ರ

ಮಂಡ್ಯ: ‘ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಬೇಕಾದರೆ ಮಾರುಕಟ್ಟೆ ವ್ಯವಸ್ಥೆ ಸದೃಢವಾಗಬೇಕು. ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಕೈಗಾರಿಕೆಗಳು ಅತ್ಯಾವಶ್ಯಕ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ ಹೇಳಿದರು.

ಜಿಲ್ಲಾ ಮುದ್ರಣ ಮಾಲೀಕರ ಸಂಘದ ವತಿಯಿಂದ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಮುದ್ರಣ ಪಿತಾಮಹ ಜೊಹಾನ್ಸ್ ಗುಟೆನ್‌ಬರ್ಗ್‌ ಸವಿನೆನಪಿನಲ್ಲಿ ನಡೆದ ಮುದ್ರಣಕಾರರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಯಾವುದೇ ಪ್ರದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕಾದರೆ ಆ ಜಾಗದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು. ಬೆಂಗಳೂರು– ಮೈಸೂರು ನಡುವೆ ಇರುವ ಮಂಡ್ಯಕ್ಕೆ ದಶಪಥ ಸೇರಿದಂತೆ ಉತ್ತಮ ರೈಲು ವ್ಯವಸ್ಥೆಯ ಸಂಪರ್ಕವಿದೆ. ಮುದ್ರಣ ಕ್ಷೇತ್ರದ ಕ್ಲಸ್ಟರ್ ತೆರೆಯಲು ಈ ಪ್ರದೇಶ ಸೂಕ್ತ ಪ್ರದೇಶವಾಗಿದೆ’ ಎಂದರು.

‘ಹಸಿರು ಕ್ರಾಂತಿ, ಕ್ಷೀರಕ್ರಾಂತಿಯಿಂದ ರೈತರಿಗೆ ಅನುಕೂಲವಾಗಿದೆ. ಉದ್ಯೋಗ ಕ್ರಾಂತಿಗೆ ಕೈಗಾರಿಕೆಗಳು ಅವಶ್ಯಕ. ಕೈಗಾರಿಕೆಗಳು ಬಂದರೆ ಮಹಿಳಾ ಸಬಲೀಕರಣಕ್ಕೂ ನೆರವಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೈಗಾರಿಕೆಗಳ ಸ್ಥಾಪನೆಯಲ್ಲಿ ಜಿಲ್ಲೆ ಅತ್ಯಂತ ಹಿಂದುಳಿದಿದೆ. ವಿವಿಧ ರೀತಿಯ ಚಳವಳಿಗಳು ಕೈಗಾರಿಕೆ ನಿರ್ಮಾಣಕ್ಕೆ ಹಿನ್ನಡೆ ಉಂಟು ಮಾಡಿದೆ’ ಎಂದರು.

ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ ‘14ನೇ ಶತಮಾನದಲ್ಲಿ ಮುದ್ರಣ ರಂಗದ ಪಿತಾಮಹ ಜೊಹಾನ್ಸ್ ಗುಟೆನ್ ಬರ್ಗ್‌ ಮುದ್ರಣ ಯಂತ್ರವನ್ನು ಸಂಶೋಧಿಸಿದರು. ನಂತರ ಅಕ್ಷರ ಜೋಡಣೆಯಿಂದ ಪ್ರಾರಂಭವಾದ ಮುದ್ರಣ ಕಾರ್ಯ ಇಂದು ವೆಬ್ ಮುದ್ರಣದ ಹಂತಕ್ಕೆ ಬಂದು ನಿಂತಿದೆ. ಅವರಿಂದಾಗಿ ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ’ ಎಂದರು.

‘ಚುನಾವಣಾ ಪರ್ವ ಆರಂಭವಾಗುತ್ತಿದ್ದು ಮುದ್ರಣ ಕ್ಷೇತ್ರಕ್ಕೆ ಸಾಕಷ್ಟು ಅವಕಾಶಗಳು ಬರಲಿವೆ. ಜಿಲ್ಲೆಯ ಅಧಿಕಾರಿಗಳು ಸ್ಥಳೀಯ ಉದ್ಯಮಿಗಳಿಗೆ ಮುದ್ರಣ ಅವಕಾಶ ನೀಡಿ ಪ್ರೋತ್ಸಾಹಿಸಬೇಕು. ಸಮಾಜದ ಎಲ್ಲರೂ ಮುದ್ರಣ ವ್ಯವಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ನಾಮಕರಣದಿಂದ ಹಿಡಿದು ತಿಥಿ ಕಾರ್ಯದವರೆಗೂ ಮುದ್ರಣ ಅನಿವಾರ್ಯವಾಗಿದೆ’ ಎಂದರು.

ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಆರ್.ಜನಾರ್ದನ್ ಮಾತನಾಡಿ ‘ಮುದ್ರಣ ಕ್ಷೇತ್ರದ ಬೆಳವಣಿಗೆಯಲ್ಲಿ ವಿಶ್ವದ 197 ದೇಶಗಳಲ್ಲಿ ಜರ್ಮನಿ, ಜಪಾನ್, ಅಮೆರಿಕವನ್ನು ಬಿಟ್ಟರೆ ಭಾರತ 4ನೇ ಸ್ಥಾನದಲ್ಲಿದೆ. ತಂತ್ರಜ್ಞಾನದ ಬಳಕೆ ಮತ್ತು ಕಲಾತ್ಮಕ ಮುದ್ರಣಕ್ಕೆ ಆದ್ಯತೆ ನೀಡಿದರೆ ಮೊದಲನೇ ಸ್ಥಾನಕ್ಕೆ ತಲುಪಲಿದೆ’ ಎಂದರು.

ಮಂಡ್ಯ ಜಿಲ್ಲಾ ಮುದ್ರಣ ಮಾಲೀಕರ ಸಂಘದ ಉಪಾಧ್ಯಕ್ಷ ಜೆ.ಲಕ್ಷ್ಮಿನಾರಾಯಣ್, ಅಧ್ಯಕ್ಷ ಪಿ.ರಾಜಣ್ಣ, ಕೆ.ಆರ್.ವಿ.ಪ್ರಿಂಟರ್ಸ್‌ ಮಾಲೀಕ ಎಚ್.ಎಲ್.ನಾರಾಯಣ್, ಎಂ.ಮಹೇಶ್ ಕುಮಾರ್, ಎಂ.ಎಸ್.ಸತೀಶ್, ಎಂ.ಎಸ್.ಶಿವಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT