ಮಂಡ್ಯ: ‘ರಾಹುಲ್‌ಗಾಂಧಿ ವಿದೇಶಕ್ಕೆ ಹೋಗಿ ಭಾರತ ದೇಶದ ಬಗ್ಗೆ ಮಾತನಾಡುವುದು ಸರಿಯಲ್ಲ. ದೇಶದ ಬಗ್ಗೆ ಅಭಿಮಾನ ಇರಬೇಕು. ಅಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸೇರಿದಂತೆ ಬೇರೆ ಪಕ್ಷಗಳ ಮಾತನಾಡುವುದು ಅಗತ್ಯವಿಲ್ಲ. ದೇಶದಲ್ಲಿದ್ದಾಗ ರಾಜಕೀಯವಾಗಿ ಏನೇ ಮಾತನಾಡಿದರೂ ತೊಂದರೆ ಇಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿದರು.
ನಗರದ ಬಿಜೆಪಿ ಕಚೇರಿಗೆ ಬುಧವಾರ ಭೇಟಿ ನೀಡಿದ ಸಂದರ್ಭ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ವರಿಷ್ಠರು ಅದರ ಬಗ್ಗೆ ತೀರ್ಮಾನಿಸುತ್ತಾರೆ. ಕೆಲವು ಭಿನ್ನ ಅಭಿಪ್ರಾಯಗಳಿದ್ದರೂ ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ ಎಲ್ಲವೂ ತೀರ್ಮಾನವಾಗಲಿದೆ’ ಎಂದು ತಿಳಿಸಿದರು.
ಮೈಸೂರು ಚಲೋ ಪಾದಯಾತ್ರೆಯಿಂದ ಪ್ರೀತಂಗೌಡ ಅವರನ್ನು ಹೊರಗಿಟ್ಟ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ, ‘ಪಾದಯಾತ್ರೆ ಸಂದರ್ಭದ ಬಗ್ಗೆ ನಾನು ಇಲ್ಲಿ ಮಾತನಾಡಲು ಇಷ್ಟವಿಲ್ಲ. ರಾಜಕೀಯವಾಗಿ ಮಾತನಾಡುವ ಸಂದರ್ಭ ಬಂದಾಗ ಅದರ ಬಗ್ಗೆ ಮಾತನಾಡುತ್ತೇನೆ’ ಎಂದು ಹೇಳಿದರು.
ಬಿಜೆಪಿ ವರಿಷ್ಠರ ಸೂಚನೆಯಂತೆ ರಾಜ್ಯದಲ್ಲಿ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿದ್ದು, ಇದರಲ್ಲಿ ಚುನಾವಣಾ ರಾಜಕಾರಣ ಅಗತ್ಯವಿಲ್ಲ. ಅದನ್ನು ಹೊರತುಪಡಿಸಿ ಬಿಜೆಪಿ ವೈಯಕ್ತಿಕವಾಗಿ ಸಂಘಟನೆ ಮಾಡಲು ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.
ಮಂಡ್ಯದಲ್ಲೂ ಬಿಜೆಪಿಯನ್ನು ಗಟ್ಟಿಗೊಳಿಸಲು ಸದಸ್ಯತ್ವ ಅಭಿಯಾನ ಸಹಕಾರಿಯಾಗಲಿದೆ. ಒಟ್ಟು 8 ಲಕ್ಷ ಸದಸ್ಯತ್ವ ಗುರಿ ಮುಟ್ಟಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಪೂರಕ ವಾತಾವರಣ ನಿರ್ಮಾಣ ಮಾಡಲು ಸದಸ್ಯತ್ವ ಸಹಕಾರಿಯಾಗಲಿದೆ. ಹಾಸನದಲ್ಲೂ ಬಿಜೆಪಿ ಗಟ್ಟಿ ನೆಲೆಯೂರಲು ಸದಸ್ಯತ್ವ ಮುಖ್ಯವಾಗಿತ್ತು. ಅದರಂತೆ ರಾಜ್ಯದ ಎಲ್ಲ ಕಡೆಯಲ್ಲೂ ಸದಸ್ಯತ್ವ ನಡೆಸಲು ಮುಂದಾಗಿದ್ದೇವೆ. ರಾಜ್ಯ ನಾಯಕರು ಇದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಇಂದ್ರೇಶ್, ಮುಖಂಡರಾದ ಸಿದ್ದರಾಮಯ್ಯ, ಅಶೋಕ್ ಜಯರಾಂ, ನಗರಸಭೆ ಉಪಾಧ್ಯಕ್ಷ ಎಂ.ಪಿ. ಅರುಣ್‌ಕುಮಾರ್, ವಸಂತ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.