ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಶಿಲಾ ಶಾಸನಗಳ ಬರಹ ಬೆಳಕಿಗೆ

ರಾಯಚೂರಿನ ನವರಂಗ ದರವಾಜ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿರುವ ಶಾಸನಗಳು
Last Updated 26 ಮೇ 2018, 12:48 IST
ಅಕ್ಷರ ಗಾತ್ರ

ರಾಯಚೂರು: ನಗರದ ನವರಂಗ ದರವಾಜ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಅಪ್ರಕಟಿತವಾಗಿ ಉಳಿದಿದ್ದ ಮೂರು ಶಿಲಾ ಶಾಸನಗಳನ್ನು ಗುರುತಿಸಿರುವ ವಸ್ತು ಸಂಗ್ರಹಾಲಯದ ಅಧಿಕಾರಿಗಳು, ಅವುಗಳಲ್ಲಿರುವ ಬರವಣಿಗೆಯನ್ನು ಇದೀಗ ಬೆಳಕಿಗೆ ತಂದಿದ್ದಾರೆ.

ಈ ಮೂರು ಶಾಸನಗಳಲ್ಲಿರುವ ಬರಹ ಆಧರಿಸಿ ‘ಜೈನ ಪೀಠ ಶಾಸನ’, ‘ಶಾಸನ ಮತ್ತು ಷಣ್ಮುಖ’ ಹಾಗೂ ‘ಕನ್ನಡ ಶಾಸನ’ ಎಂದು ಗುರುತಿಸಲಾಗಿದೆ.

ಲಿಂಗಸುಗೂರು ತಾಲ್ಲೂಕಿನ ಕರಡಿಕಲ್ಲು ಗ್ರಾಮದಲ್ಲಿ ಜೈನ ಪೀಠ ಶಾಸನವು 1976 ರಲ್ಲಿ ಪತ್ತೆಯಾಗಿದೆ. ರಾಯಚೂರಿನ ರಾಮೇಶ್ವರ ದೇವಸ್ಥಾನದ ಹತ್ತಿರ 1999 ರಲ್ಲಿ ಶಾಸನ ಮತ್ತು ಷಣ್ಮುಖ ದೊರಕಿದೆ. 1999 ರಲ್ಲಿಯೇ ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಕನ್ನಡ ಶಾಸನ ಸಿಕ್ಕಿದೆ. ಈ ಮೂರು ಶಾಸನಗಳನ್ನು ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಅವುಗಳಲ್ಲಿರುವ ಬರಹ ಏನು ಎಂಬುದನ್ನು ಈಗ ಓದಲಾಗಿದೆ.

ಶಾಸನಗಳಲ್ಲಿ ಏನಿದೆ?: ಜೈನ ಪೀಠ ಶಾಸನವನ್ನು ಮೂರು ಸಾಲಿನ ಹಳೆಗನ್ನಡದಲ್ಲಿ ಬರೆಯಲಾಗಿದ್ದು, ಪಾರ್ಶ್ವನಾಥ ಮೂರ್ತಿ ಶಾಸನವಾಗಿದೆ. ಇದು ಕ್ರಿ.ಶ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ್ದಾಗಿದೆ.

ದೇವಚಂದ್ರ ಭಟ್ಟಾರಕ ಗುರುಗಳ ಹೆಸರಿನಲ್ಲಿ ದೇವರ ಗುಡ್ಡ ಸೇನಬೋವ ರತ್ನನು ಪಾರ್ಶ್ವನಾಥ ಪ್ರತಿಮೆಯನ್ನು ಮಾಡಿಸಿರುವನು. ಇದರ ರೂವಾರಿ ಚಟ್ಟೋಜ ಎನ್ನುವ ವಿಷಯ ಅದರಲ್ಲಿದೆ.

ಶಾಸನ ಮತ್ತು ಷಣ್ಮುಖ ಶಾಸನವು ಕೂಡಾ 31 ಸಾಲುಗಳಿಂದ ಕೂಡಿದ ಹಳೆಗನ್ನಡ ಶಾಸನ. ಇದು ಕೂಡಾ ಕ್ರಿ.ಶ 12ನೇ ಶತಮಾನದ ಚಾಲುಕ್ಯರ ಶಾಸನವಾಗಿದ್ದು, ಶಾಸನದ ಮೇಲೆ ಹಸು, ಕರು, ಯತಿಯ ಚಿತ್ರಗಳಿವೆ. ಇದು ಬಹುಶಃ ಲಿಂಗದ ಚಿತ್ರ ಇರಬಹುದು ಎಂದು ಗುರುತಿಸಲಾಗಿದೆ. ಇದನ್ನು ಷಣ್ಮುಖ ಆಕಾರದಲ್ಲಿ ಕೆತ್ತಿರುವುದರಿಂದ ಲಿಂಗವು ಕಾಣುವುದಿಲ್ಲ. ಇದರಲ್ಲಿ ಕಲ್ಯಾಣ ಚಾಲುಕ್ಯರ ದೊರೆಯನ್ನು ಹೊಗಳಲಾಗಿದ್ದು, ಮಂಡಳೇಶ್ವರ ಐಹೇಯರ ವಂಶದ ಬಿಜ್ಜ ನೃಪಾಳ ಉಲ್ಲೇಖವು ಕಂಡು ಬರುತ್ತದೆ. ಈ ಶಾಸನದ ಇನ್ನೊಂದು ಭಾಗದಲ್ಲಿ ವಿಜಯನಗರ ಕಾಲದ ಷಣ್ಮುಖನನ್ನು ಕೆತ್ತಲಾಗಿದೆ.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಆವರಣದಿಂದ ಸಂಗ್ರಹಿಸಿದ ಶಾಸನವು 19 ಸಾಲುಗಳಿಂದ ಕೂಡಿದ ಕನ್ನಡ ಶಾಸನವಾಗಿದೆ. ಈ ಶಾಸನದ ಮೇಲೆ ಸೂರ್ಯ, ಚಂದ್ರ, ಲಿಂಗ, ಹಸು, ಕರು ಚಿತ್ರಗಳನ್ನು ಕೆತ್ತಲಾಗಿದೆ. ಇದು ಕ್ರಿ.ಶ. 11 ನೇ ಶತಮಾನದ ಶಾಸನ. ಇದು ಜಯಸಿಂಹ ಜಗದೇಕ ಮಲ್ಲನ ಶಾಸನ. ಈ ಶಾಸನದಲ್ಲಿ ಮಿದ್ದಲು ಸಂಕಿಯಿಕೇಶ್ವರ ದೇವರಿಗೆ ಮಾಸಂಗಿಯ ಕಾಳಪ್ರಿಯರ ದೇವರ ಅಳತೆ ಕೋಲಿನಿಂದ ಅಳತೆ ಮಾಡಿ ಗದ್ದೆ, ತೋಟ ಹಾಗೂ 12 ಮನೆಗಳನ್ನು ದಾನ ನೀಡಿರುವ ವಿಚಾರವು ಈ ಶಾಸನದಿಂದ ತಿಳಿದು ಬರುತ್ತದೆ. ಶಾಸನದ ಕೊನೆಯಲ್ಲಿ ಪಾಪಶಯದೊಂದಿಗೆ ಮುಕ್ತಾಯವಾಗಿದೆ. ಶಾಸನ ರಚಿಸಿದವರ ಹೆಸರು ಅಸ್ಪಷ್ಪವಾಗಿದೆ.

ರಾಯಚೂರಿನ ನವರಂಗ ದರವಾಜದಲ್ಲಿರುವ ವಸ್ತು ಸಂಗ್ರಹಾಲಯದ ಕ್ಯುರೇಟರ್‌ (ಶಾಸನ ಪಾಲಕ) ಆರ್‌.ಶೇಜೇಶ್ವರ ಅವರು ಈ ಶಾಸನಗಳಲ್ಲಿರುವ ಬರಹವನ್ನು ಗುರುತಿಸಿ ಪ್ರಕಟಿಸುವ ಕಾರ್ಯ ಮಾಡುತ್ತಿದ್ದಾರೆ. ಇತಿಹಾಸ, ಶಾಸನಶಾಸ್ತ್ರ ವಿದ್ಯಾರ್ಥಿಗಳು ಮತ್ತು ಈ ಬಗ್ಗೆ ಆಸಕ್ತಿ ಇರುವವರು ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಶಾಸನಗಳನ್ನು ನೋಡಬಹುದು.

**
ವಸ್ತು ಸಂಗ್ರಹಾಲಯದಲ್ಲಿರುವ ಎಲ್ಲ ಶಾಸನಗಳು ಮತ್ತು ಪ್ರತಿಮೆಗಳ ಐತಿಹಾಸಿಕ ವಿವರಣೆಯನ್ನು ತಯಾರಿಸಲಾಗುತ್ತದೆ. 3 ಶಾಸನಗಳು ಅಪ್ರಕಟಿತವಾಗಿ ಉಳಿದಿದ್ದವು
ಆರ್‌.ಶೇಜೇಶ್ವರ, ಶಾಸನ ಪಾಲಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT