ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ 'ಕಾವೇರಿ ಹುನ್ನಾರ' ರಾಜ್ಯಕ್ಕೆ ಅರ್ಥವಾಗಲೇ ಇಲ್ಲ: ಪ್ರೊ. ಬಸವರಾಜು

ಇತ್ತೀಚಿನ ವಿದ್ಯಮಾನ ಕುರಿತ ಉಪನ್ಯಾಸ; ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಅಭಿಪ್ರಾಯ
Last Updated 13 ಮಾರ್ಚ್ 2021, 9:22 IST
ಅಕ್ಷರ ಗಾತ್ರ

ಮಂಡ್ಯ: ‘ಕಾವೇರಿ ಅಂತಿಮ ತೀರ್ಪಿನಲ್ಲಿ ನಮಗೆ 14.75 ಅಡಿ ಹೆಚ್ಚುವರಿ ನೀರು ದೊರೆತಾಗ ಸಮಾಧಾನ ಪಟ್ಟೆವು. ತೀರ್ಪಿಗೆ ಕ್ಯಾತೆ ತೋರದ ತಮಿಳುನಾಡು ಸರ್ಕಾರ ಗೆಜೆಟ್‌ ಪ್ರಕಟಣೆಗೆ ಒತ್ತಾಯಿಸಿತು. ಅದರ ಹಿಂದಿನ ಹುನ್ನಾರ ನಮ್ಮ ರಾಜ್ಯ ಸರ್ಕಾರಕ್ಕೆ ಅರ್ಥವಾಗಲೇ ಇಲ್ಲ’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಸಿ.ಬಸವರಾಜು ಅಭಿಪ್ರಾಯಪಟ್ಟರು.

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ರೈತ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ‘ಕಾವೇರಿ: ಇತ್ತೀಚಿನ ವಿದ್ಯಾಮಾನಗಳು’ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪಿನಿಂದ ಸಿಕ್ಕಿದ ಹೆಚ್ಚುವರಿ ನೀರಿನಿಂದ ಸಂತಸ ಪಟ್ಟೆವು. ಆಗ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅವರು ಗೆಜೆಟ್‌ ಪ್ರಕಟಣೆಗಾಗಿ ಒತ್ತಾಯಿಸಿದರು. ಇದರ ಹಿಂದಿನ ಹುನ್ನಾರ ಈಗ ಎಲ್ಲರಿಗೂ ಸ್ಪಷ್ಟವಾಗುತ್ತಿದೆ’ ಎಂದರು.

‘ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ತಮಿಳುನಾಡು ತುದಿಗಾಲಮೇಲೆ ನಿಂತಿದೆ. ಕೇಂದ್ರ ಸರ್ಕಾರದ ಅನುದಾನವನ್ನೂ ಪಡೆದು ವೆಲ್ಲಾರು, ವೈಗೈ ಮತ್ತು ಗುಂಡಾರು ನದಿಗಳನ್ನು ಕಾವೇರಿ ನದಿಗೆ ಜೋಡಣೆ ಮಾಡಲು ಹೊರಟಿದೆ. ಈಗಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ಜಯಲಲಿತಾ, ಕರುಣಾನಿಧಿ ಅವರಷ್ಟು ಶಕ್ತಿ ಇಲ್ಲ, ಆರೂ ನದಿ ಜೋಡಣೆ ಯೋಜನೆಗೆ ಭೂಮಿಪೂಜೆ ನೆರವೇರಿಸುವುದನ್ನು ನೋಡಿದರೆ ಅಲ್ಲಿಯ ರಾಜಕೀಯ ಶಕ್ತಿ ಅರ್ಥವಾಗುತ್ತದ’ ಎಂದರು.

‘ಕಾವೇರಿ ಹೋರಾಟ ಇಂದು, ನಿನ್ನೆಯದಲ್ಲ. ಗಂಗರು–ಚೋಳರ ನಡುವೆ ನೀರಿನ ಯುದ್ಧ ನಡೆದಿತ್ತು. 2ನೇ ಶತಮಾನದಲ್ಲೇ ತಮಿಳು ದೊರೆ ಕರಿಕಾಳ ಚೋಳನ್‌ ತಂಜಾವೂರಿನಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಿದ್ದ. ಆದರೆ ಕರ್ನಾಟಕದಲ್ಲಿ ಈಚೆಗೆ ಕೆಆರ್‌ಎಸ್‌ ಕಟ್ಟಿದ್ದು ಬಿಟ್ಟರೆ ಅದಕ್ಕೂ ಮೊದಲು ಯಾವ ಅಣೆಕಟ್ಟೆಗಳೂ ನಿರ್ಮಾಣವಾಗಲಿಲ್ಲ. ಇದನ್ನು ಇತಿಹಾಸದ ವ್ಯಂಗ್ಯ ಎಂದೇ ಹೇಳಬೇಕು’ ಎಂದರು.

‘1892ರಲ್ಲಿ ಆದ ಒಪ್ಪಂದ ಕನ್ನಡ ನಾಡಿಗೆ ಅತ್ಯಂತ ಅವಮಾನಕರವಾಗಿತ್ತು. 1924ರ ಕರಾರಿನಲ್ಲೂ ಬ್ರಿಟಿಷ್‌ ಆಡಳಿತ ಮದ್ರಾಸ್‌ ಪ್ರಾಂತ್ಯದ ಹಿತ ಕಾಯುವ ಕೆಲಸ ಮಾಡಿತ್ತು. ಸ್ವಾತಂತ್ರ್ಯ ನಂತರ ಸಂವಿಧಾನದ ಆಶಯದಂತೆ ಹಳೆಯ ಒಪ್ಪಂದಗಳು ಅವಸಾನವಾಗಬೇಕಾಗಿತ್ತು. ಆದರೆ ತಮಿಳುನಾಡಿನ ರಾಜಕೀಯದ ಷಡ್ಯಂತ್ರದಿಂದ ನಮಗೆ ನ್ಯಾಯ ಸಿಗಲಿಲ್ಲ. ಕಾವೇರಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳುವ ಎಲ್ಲಾ ಅವಕಾಶವಿದ್ದರೂ ಕರಣಾನಿಧಿ ಷಡ್ಯಂತ್ರದಿಂದ ನ್ಯಾಯಾಲಯದ ಕಟೆಕಟೆ ಏರಬೇಕಾಯಿತು’ ಎಂದರು.

‘ಕಾವೇರಿ ನ್ಯಾಯಾಧಿಕರಣ ಮಧ್ಯಂತರ ತೀರ್ಪು ನೀಡಿದಾಗ ಎರಡೂ ರಾಜ್ಯಗಳ ನಡುವೆ ದೊಡ್ಡ ಸಂಘರ್ಷ ಎದುರಾಯಿತು. ರಾಜ್ಯ ಸರ್ಕಾರಗಳೇ ಮುಂದೆ ನಿಂತು ಹೋರಾಟಕ್ಕೆ ಕರೆ ನೀಡಿದ್ದು ದುರಂತ. ನ್ಯಾಯಾಧಿಕರಣ ರಚನೆಯಾಗಿ 17 ವರ್ಷಗಳ ನಂತರ ಅಂತಿಮ ತೀರ್ಪು ಪ್ರಕಟಿಸಿದಾಗ ಆ ತೀರ್ಪನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ರಾಜ್ಯಗಳು ಸುಪ್ರೀಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಿದವು’ ಎಂದರು.

‘ಸುಪ್ರೀಂ ಕೋರ್ಟ್‌ ಅಂತಿಮ ತೀರ್ಪು ಪ್ರಕಟಿಸಿದಾಗ ಮೇಕೆದಾಟು, ಹೊಗೇನಕಲ್‌ ಯೋಜನೆಗಳನ್ನು ಉಲ್ಲೇಖ ಮಾಡಲೇ ಇಲ್ಲ. ಆಗಲೇ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಜಾರಿ ಕುರಿತಂತೆ ಅರ್ಜಿ ಸಲ್ಲಿಸಬೇಕಾಗಿತ್ತು. ಈಗ ತಮಿಳುನಾಡಿನ ಕ್ಯಾತೆಯಿಂದಾಗಿ ಯೋಜನೆ ಜಾರಿ ಸವಾಲಾಗಿದೆ. ಸವಾಲು ಮೀರಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಕರ್ನಾಟಕ ಸರ್ಕಾರ ಪ್ರದರ್ಶನ ಮಾಡಬೇಕಾಗಿದೆ. ಕೆರೆ–ಕಟ್ಟೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ’ ಎಂದರು.

ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ, ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್‌, ಕೆ.ಬೋರಯ್ಯ, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್‌ ಇದ್ದರು.

ಇತಿಹಾಸದ ಸೋಲು

‘ನಾಲ್ಕೂ ರಾಜ್ಯದ ಮುಖಂಡರು ಸೇರಿ ಕಟ್ಟಿದ್ದ ‘ಕಾವೇರಿ ಕುಟುಂಬ’ದ ಮಾತುಕತೆ ಸಫಲವಾಗಿದ್ದರೆ ವಿಶ್ವಮಟ್ಟದಲ್ಲಿ ಇತಿಹಾಸ ನಿರ್ಮಾಣಗೊಳ್ಳುತ್ತಿತ್ತು. ಕುಟುಂಬದ ಹೆಜ್ಜೆಯನ್ನು ವಿಶ್ವಸಂಸ್ಥೆಯೂ ಗುರುತಿಸಿತ್ತು. ಹಲವು ಸುತ್ತಿನ ಮಾತುಕತೆಗಳು ಯಶಸ್ವಿಯೂ ಆಗಿದ್ದವು. ಆದರೆ ತಮಿಳುನಾಡಿನ ಸಹಕಾರದ ಕೊರತೆಯಿಂದ ಕುಟುಂಬಕ್ಕೆ ಸೋಲಾಯಿತು. ಇದನ್ನು ಇತಿಹಾಸದ ಸೋಲು ಎನ್ನಬಹುದು ’ ಎಂದು ಬಸವರಾಜು ವಿಷಾದಿಸಿದರು.

ದಾಖಲಾಗದ ನಮ್ಮ ಔದಾರ್ಯ

‘ಇತಿಹಾಸದ ಪುಟದಲ್ಲಿ ಕರ್ನಾಟಕ, ತಮಿಳುನಾಡಿಗೆ ನೀರು ಬಿಡದ ಕ್ಯಾತೆ ರಾಜ್ಯ ಎಂದೇ ಬಿಂಬಿತವಾಗಿದೆ. ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ತೋರಿದ ಔದಾರ್ಯ ದಾಖಲಾಗಿಲ್ಲ’ ಎಂದು ಬಸವರಾಜ್‌ ಹೇಳಿದರು.

‘ಕೇಂದ್ರ ಜಲ ಆಯೋಗ ಗುರುತಿಸಿರುವ ಒಟ್ಟು 740 ಟಿಎಂಸಿ ಅಡಿ ನೀರಿನಲ್ಲಿ ತಮಿಳುನಾಡು ಕೊಡುಗೆ ಶೇ 32 ಟಿಎಂಸಿ ಅಡಿ ಮಾತ್ರ. ಆದರೆ ಪಡೆದದ್ದು 56 ಟಿಎಂಸಿ ಅಡಿ. ಒಟ್ಟು ನೀರಿನಲ್ಲಿ ಕರ್ನಾಟಕದ ಕೊಡುಗೆ 55 ಟಿಎಂಸಿ ಅಡಿ, ಆದರೆ ಪಡೆಯುತ್ತಿರುವುದು ಕೇವಲ 38 ಟಿಎಂಸಿ ಅಡಿ. ಇದು ನಮ್ಮ ರಾಜ್ಯದ ದುರದೃಷ್ಟ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT